ವಿನಯಕುಮಾರ ಪಕ್ಷ ವಿರೋಧಿ ಹೇಳಿಕೆ ವಿರುದ್ಧ ಕ್ರಮ

| Published : Mar 31 2024, 02:02 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಪಕ್ಷಕ್ಕೆ ಮುಜುಗರ ಆಗುವಂತೆ ಹೇಳಿಕೆ ನೀಡುತ್ತಿರುವ ಜಿ.ಬಿ.ವಿನಯಕುಮಾರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧ್ಯಕ್ಷ, ಅಹಿಂದ ಮುಖಂಡ ಎಚ್.ಬಿ.ಮಂಜಪ್ಪ ಎಚ್ಚರಿಸಿದರು.

- ಟಿಕೆಟ್‌ ವಿಚಾರದಲ್ಲಿ ಕಾಂಗ್ರೆಸ್‌ಗೆ ಮುಜುಗರ ತಂದರೆ ಶಿಸ್ತು ಕ್ರಮ: ಜಿಲ್ಲಾಧ್ಯಕ್ಷ ಎಚ್ಚರಿಕೆ - ಪ್ರಾಥಮಿಕ ಸದಸ್ಯತ್ವ ಪಡೆದ ಬಗ್ಗೆ ನನಗೆ ಮಾಹಿತಿ ಇಲ್ಲ: ಎಚ್‌.ಬಿ. ಮಂಜಪ್ಪ ಹೇಳಿಕೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಪಕ್ಷಕ್ಕೆ ಮುಜುಗರ ಆಗುವಂತೆ ಹೇಳಿಕೆ ನೀಡುತ್ತಿರುವ ಜಿ.ಬಿ.ವಿನಯಕುಮಾರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧ್ಯಕ್ಷ, ಅಹಿಂದ ಮುಖಂಡ ಎಚ್.ಬಿ.ಮಂಜಪ್ಪ ಎಚ್ಚರಿಸಿದರು.

ನಗರದಲ್ಲಿ ಶನಿವಾರ ಅಹಿಂದ ಮುಖಂಡರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಆಕಾಂಕ್ಷಿ ಎಂಬುದಾಗಿ ಹೇಳಿಕೊಳ್ಳುತ್ತಿರುವ ಜಿ.ಬಿ. ವಿನಯಕುಮಾರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದ ಬಗ್ಗೆ ಜಿಲ್ಲಾಧ್ಯಕ್ಷನಾದ ನನಗೆ ಮಾಹಿತಿ ಇಲ್ಲ. ಕೆಲವರು ತಾವೇ ಈ ಹುದ್ದೆಯಲ್ಲಿ ಇದ್ದೇವೆಂದು ಲೆಟರ್ ಹೆಡ್ ಸೃಷ್ಟಿಸಿಕೊಂಡಿದ್ದಾರೆ ಎಂದರು.

ವಿನಯಕುಮಾರ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿದ್ದರೆ ಜಿಲ್ಲಾ ಹಂತದಲ್ಲೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ನಮ್ಮಿಂದ ಸಾಧ್ಯವಾಗದಿದ್ದರೆ ಕೆಪಿಸಿಸಿ ಗಮನಕ್ಕೆ ತಂದು, ಸೂಕ್ತ ಕ್ರಮಕ್ಕೆ ಹೇಳುತ್ತೇವೆ. ಕಾಂಗ್ರೆಸ್ ಟಿಕೆಟ್ ಘೋಷಣೆ ನಂತರ ವಿನಯಕುಮಾರ ಜಿಲ್ಲೆಯ ವಿವಿಧೆಡಡೆ ಹೋಗಿ ಜನರನ್ನು ತಾವೇ ಮಾತನಾಡಿಸಿ, ಪಕ್ಷ ಮತ್ತು ಅಭ್ಯರ್ಥಿ ವಿರುದ್ಧ ಮುಜುಗರ ತರುವ ಹೇಳಿಕೆ ಕೊಡಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಅಹಿಂದ ವರ್ಗಕ್ಕೆ ತಪ್ಪು ಮಾಹಿತಿ, ಸಂದೇಶ ರವಾನೆ ಆಗುತ್ತದೆ ಎಂದು ಹೇಳಿದರು.

ಟಿಕೆಟ್ ಕೇಳಲು ಪ್ರತಿಯೊಬ್ಬರಿಗೂ ಹಕ್ಕು ಇದೆ. ಆದರೆ, 3-4 ತಿಂಗಳ ಹಿಂದಷ್ಟೇ ದಾವಣಗೆರೆಗೆ ಬಂದು, ಜಿಲ್ಲಾಮಟ್ಟದ ಮುಖಂಡರು, ನಾಯಕರನ್ನು ವಿಶ್ವಾಸಕ್ಕೆ ಪಡೆಯದೇ, ಪಕ್ಷದ ಯಾವುದೇ ಸಂಘಟನೆಗೆ ಕೆಲಸ ಮಾಡದಿದ್ದರೆ ಟಿಕೆಟ್ ಸಿಗುವುದಿಲ್ಲ. ಆದರೆ, ವಿನಯಕುಮಾರ ಟಿಕೆಟ್ ವಿಚಾರದಲ್ಲಿ ಸಲ್ಲದ ಹೇಳಿಕೆ ನೀಡಿ, ಅಹಿಂದ ವರ್ಗವನ್ನು ದಾರಿ ತಪ್ಪಿಸುತ್ತಿದ್ದಾರೆ. ವಿನಯಕುಮಾರ್ ತಮ್ಮ ರೀತಿ, ನೀತಿ ಬದಲಿಸಿಕೊಂಡು, ತಕ್ಷಣದಿಂದ ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕಾಂಕ್ಷಿಗಳ ಸಭೆಯಲ್ಲಿ ಅಭಿಪ್ರಾಯ ಕೇಳಿದ್ದಾಗ ಯಾರಿಗೇ ಟಿಕೆಟ್ ಕೊಟ್ಟರೂ, ಕೆಲಸ ಮಾಡುವುದಾಗಿ ವಿನಯಕುಮಾರ ಒಪ್ಪಿದ್ದರು. ನಾನೂ ಅರ್ಜಿ ಹಾಕಿದ್ದೆ. ನಾನೂ ಅದೇ ಮಾತು ಹೇಳಿದ್ದೆ. ಚನ್ನಯ್ಯ ಒಡೆಯರ್ ಪುತ್ರ ಸಹ ಆಕಾಂಕ್ಷಿ ಇದ್ದು, ಟಿಕೆಟ್ ಸಿಗಲಿಲ್ಲ. ಈಗ ಅಧಿಕೃತ ಅಭ್ಯರ್ಥಿ ಪರ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ವಿನಯಕುಮಾರ ಪಕ್ಷವಿರೋಧಿ ಚಟುವಟಿಕೆ ಕೈಬಿಡಬೇಕು. ಸಿದ್ದರಾಮಯ್ಯ ಕೈ ಬಲಪಡಿಸಲು ಇಡೀ ಕುರುಂಬ ಸಮುದಾಯ ಶ್ರಮಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಮುಜುಗರ ತರುವ ಕೆಲಸ ಮಾಡಬಾರದು. ಇಂತಹದ್ದನ್ನೆಲ್ಲಾ ಪಕ್ಷ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.

ಮಾಜಿ ಶಾಸಕ ಎಸ್.ರಾಮಪ್ಪ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ, ಬಿ.ಎಚ್. ವೀರಭದ್ರಪ್ಪ, ಎಲ್.ಎಂ. ಹನುಮಂತಪ್ಪ, ಎ.ನಾಗರಾಜ, ಅಬ್ದುಲ್ ಲತೀಫ್, ಕೆ.ಚಮನ್ ಸಾಬ್‌, ಎಸ್.ಮಲ್ಲಿಕಾರ್ಜುನ, ಸೈಯದ್ ಸೈಫುಲ್ಲಾ, ನಂದಿಗಾವಿ ಶ್ರೀನಿವಾಸ, ಆವರಗೆರೆ ಉಮೇಶ, ರೇವಣಸಿದ್ದಪ್ಪ ಹರಿಹರ, ಎಚ್‌.ಬಿ.ಗೋಣೆಪ್ಪ, ದಿಳ್ಯಪ್ಪ, ಗುರುರಾಜ, ನಲ್ಕುಂದ ಹಾಲೇಶ ಇತರರು ಇದ್ದರು.

- - -

ಬಾಕ್ಸ್‌

ಸಮೀಕ್ಷೆಯಲ್ಲಿ ವಿನಯ ಹೆಸರಿಲ್ಲ

ಮೊದಲು ಕಾಂಗ್ರೆಸ್ಸಿನ ತತ್ವ ಸಿದ್ಧಾಂತ ಅರಿಯಲಿ. ಇನ್ನೂ ಸಾಕಷ್ಟು ವಯಸ್ಸಿದೆ. ಪಕ್ಷದ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದರೆ, ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ, ಅವಕಾಶ ಸಿಗುತ್ತವೆ. ಪಕ್ಷ ಕೂಡ ಸೇವೆ ಗುರುತಿಸುತ್ತದೆ. ಅದನ್ನು ಬಿಟ್ಟು, ಪಕ್ಷದ ಬಗ್ಗೆ ಹೀಗೆಲ್ಲಾ ಮಾತನಾಡುವುದು ತಪ್ಪು. ಈ ಮೂಲಕ ಯಾವುದೋ ಒಂದು ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡುವುದೂ ಸರಿಯಲ್ಲ. ವಿನಯ್ ಎಲ್ಲಿಂದ ಬಂರು, ಯಾಕೆ ಬಂದರೆಂಬುದು ಗೊತ್ತಿಲ್ಲ. ಹೀಗೆ ದಿಢೀರನೇ ಬಂದು, ಟಿಕೆಟ್ ಕೊಡುವಂತೆ ಕೇಳಿದರೆ ಹೇಗೆ? ಸಮೀಕ್ಷೆಯಲ್ಲೂ ವಿನಯ್ ಹೆಸರಿಲ್ಲ ಎಂದು ಅವರು ಮಂಜಪ್ಪ ಹೇಳಿದರು.

- - - ಬಾಕ್ಸ್‌-2

ವಿನಯಕುಮಾರ ಗ್ರಹಿಕೆ ತಪ್ಪು ಒಂದು ಸಲ ಟಿಕೆಟ್ ನೀಡಿದರೆ ಮುಗಿಯಿತು. ಯಾವುದೇ ಕಾರಣಕ್ಕೂ ಅಭ್ಯರ್ಥಿ ಬದಲಿಸುವ ಪ್ರಶ್ನೆ ಇಲ್ಲ. ಇನ್ನೂ ಸಮಯ ಇದೆ. ಅಭ್ಯರ್ಥಿ ಬದಲಾವಣೆ ಆಗಲಿದೆ ಎಂದುಕೊಂಡಿರುವ ವಿನಯಕುಮಾರ ಗ್ರಹಿಕೆ ತಪ್ಪಾಗಿದೆ. ದಾವಣಗೆರೆ, ಶಾಮನೂರು ಕುಟುಂಬದ ಬಗ್ಗೆ ವಿನಯ ಅವರಿಗೆ ಸಂಪೂರ್ಣ ಮಾಹಿತಿ ಇಲ್ಲ. ಡಾ.ಪ್ರಭಾ ಮಲ್ಲಿಕಾರ್ಜುನ 3 ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಿದ್ದಾರೆ. ಎಲ್ಲ ಹಳ್ಳಿಗಳ ಪರಿಚಯವೂ ಇರುವ ಡಾ.ಪ್ರಭಾ ಸಮಾಜಮುಖಿ ಕಾರ್ಯದಲ್ಲೂ ತೊಡಗಿರುವವರು. ಇನ್ನಾದರೂ ವಿನಯಕುಮಾರ ವಿನಾಕಾರಣ ಹೇಳಿಕೆ ನಿಲ್ಲಿಸಲಿ. ಪಕ್ಷದಲ್ಲಿ ಅ‍ವಕಾಶ ಸಿಗಬೇಕೆಂದರೆ ನಮ್ಮೊಂದಿಗೆ ಕೈ ಜೋಡಿಸಬೇಕು. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದು ಅಹಿಂದ ಮುಖಂಡ ಎಚ್.ಬಿ.ಮಂಜಪ್ಪ ಹೇಳಿದರು.

- - - (-ಫೋಟೋ ಇದೆ.)