1181 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ: ಬಿ.ಮಹಾಂತೇಶ್

| Published : Jun 04 2024, 01:30 AM IST / Updated: Jun 04 2024, 11:41 AM IST

ಸಾರಾಂಶ

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದ ‘ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್ ಪೋ’ಗೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಬಿ.ಮಹಾಂತೇಶ್‌ ಚಾಲನೆ ನೀಡಿದರು.

 ಬೆಂಗಳೂರು :  ಪಿಎಂ ಕುಸುಮ್ ಯೋಜನೆಯಡಿ ರಾಜ್ಯದಲ್ಲಿ 1181 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದ್ದು, ಈ ಪೈಕಿ 371 ಮೆಗಾವ್ಯಾಟ್‌ಗೆ ಟೆಂಡರ್ ಅಂತಿಮಗೊಳಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಬಿ.ಮಹಾಂತೇಶ್ ಸ್ಪಷ್ಟಪಡಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದ 3 ದಿನಗಳ 2 ನೇ ಅಂತಾರಾಷ್ಟ್ರೀಯ ‘ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್ ಪೋ’ಗೆ ಸೋಮವಾರ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.

ಪಿಎಂ ಕುಸುಮ್ ಯೋಜನೆಯಡಿ 1181 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 371 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಅಂತಿಮಗೊಳಿಸಲಾಗಿದ್ದು, 379 ಮೆಗಾವ್ಯಾಟ್‌ಗೆ ಟೆಂಡರ್ ಕರೆಯಲಾಗುತ್ತಿದೆ. ಇದರಿಂದ ರೈತರಿಗೆ ಹಗಲಿನಲ್ಲಿ 7 ತಾಸು ವಿದ್ಯುತ್ ನೀಡಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಸ್ಕಾಂನಲ್ಲಿ 300 ಮೆಗಾವ್ಯಾಟ್ ಉತ್ಪಾದನೆ

ಪಿಎಂ ಕುಸುಮ್‌ ಯೋಜನೆಯಡಿ ಮನೆಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಅಳವಡಿಸಿಕೊಳ್ಳುವ ಸಂಬಂಧ ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 300 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ವಿವರಿಸಿದರು.

ಹೈದರಾಬಾದ್ ನ ಮೀಡಿಯಾ ಡೇ ಮಾರ್ಕೇಟಿಂಗ್ ನಿರ್ದೇಶಕ ಮೊಹಮದ್ ಮುದಸ್ಸಿರ್ ಮಾತನಾಡಿ, ಜಾಗತಿಕ ಮತ್ತು ರಾಷ್ಟ್ರ ಮಟ್ಟದ ನೂರಕ್ಕೂ ಅಧಿಕ ಕಂಪೆನಿಗಳು ಮೇಳದಲ್ಲಿ ಭಾಗವಹಿಸಿವೆ. ನವೀಕೃತ ಇಂಧನಕ್ಕೆ ಸರ್ಕಾರ ಸಬ್ಸಿಡಿ ಪ್ರಕಟಿಸಿದ್ದು, ಸರ್ಕಾರದ ವಿವಿಧ ಸಂಸ್ಥೆಗಳು ಸಹ ಮೇಳಕ್ಕೆ ಬೆಂಬಲ ನೀಡಿವೆ. ನವೀಕೃತ ಇಂಧನ ಬಳಕೆಗೆ ಒತ್ತು ನೀಡುವುದು ಮೇಳದ ಉದ್ದೇಶವಾಗಿದ್ದು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.

ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ಕ್ರೆಡೆಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಆಲ್ ಇಂಡಿಯಾ ಸೋಲಾರ್ ಥರ್ಮಲ್ ಫೆಡರೇಷನ್ ಅಧ್ಯಕ್ಷ ಕೆ.ಆರ್.ಸುರೇಂದ್ರ ಕುಮಾರ್, ಫೆರ್ರಿ ಸಂಸ್ಥೆ ಅಧ್ಯಕ್ಷ ರಮೇಶ್ ಶಿವಣ್ಣ, ಪ್ರೈಡ್ ನವೀಕೃತ ಇಂಧನ ಸಂಸ್ಥೆಯ ನಿರ್ದೇಶಕ ಎ.ಸಿ.ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು.