ಕಡೂರಲ್ಲಿ ಕುರುಬ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ

| Published : Oct 14 2024, 01:18 AM IST

ಕಡೂರಲ್ಲಿ ಕುರುಬ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಕುರುಬ ಸಮಾಜದ ಸರ್ಕಾರಿ ನೌಕರರು ಸಂಘದ ಅಭಿವೃದ್ಧಿ ಜೊತೆ ಸಮಾಜದ ಅಭಿವೃದ್ಧಿಗೂ ಕೈಜೋಡಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಡೂರು

ಕುರುಬ ಸಮಾಜದ ಸರ್ಕಾರಿ ನೌಕರರು ಸಂಘದ ಅಭಿವೃದ್ಧಿ ಜೊತೆ ಸಮಾಜದ ಅಭಿವೃದ್ಧಿಗೂ ಕೈಜೋಡಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಲಯನ್ಸ್ ಸಭಾಂಗಣದಲ್ಲಿ ನಡೆದ ತಾಲೂಕು ಕುರುಬ ಸಮಾಜದ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಭೆಯಲ್ಲಿ ನೀಡಿದ ಗೌರವ ಸ್ವೀಕರಿಸಿ, ಎಲ್ಲರೂ ಒಗ್ಗಟ್ಟಾದಾಗ ಮಾತ್ರ ಅಧಿಕಾರ, ಸಮಾಜಕ್ಕೆ ಸಿದ್ದರಾಮಯ್ಯ ಒಬ್ಬನೇ ನಾಯಕ ಎಂಬ ಅಂಶದಿಂದ ಹೋದರೆ ಮಾತ್ರ ಸಂಘ‍ವು ಯಶಸ್ಸುಗಳಿಸಲು ಸಾಧ್ಯ ಎಂದರು.

ಪಟ್ಟಣದಲ್ಲಿ ನಮ್ಮ ಸಮಾಜಕ್ಕೆಸಮುದಾಯ ಭವನ ಇಲ್ಲದಿರುವುದು ವಿಪರ್ಯಾಸ ಎಂದ ಅವರು, ತಾವು ಶಾಸಕರಾದ ಒಂದು ವರ್ಷದಲ್ಲಿ ಕ್ಷೇತ್ರದ ಮರವಂಜಿ, ಮತಿಘಟ್ಟ, ಆಸಂದಿ, ಹಳೇಸಿದ್ದರಹಳ್ಳಿ, ಕಡೂರಳ್ಳಿ, ಹರುವನಹಳ್ಳಿ, ಸೀಗೇಹಡ್ಲು, ಯಗಟಿ, ಗರ್ಜೆ ಗ್ರಾಮಗಳ ಕುರುಬ ಸಮಾಜದ ಭವನಗಳ ನಿರ್ಮಾಣಕ್ಕೆ ತಲಾ 20 ಲಕ್ಷ ರು. ನೀಡಲಾಗುತ್ತಿದೆ. ಸ್ವಲ್ಪ ಸಮಯ ಅವಕಾಶ ಕೊಡಿ. ಪಟ್ಟಣದಲ್ಲಿ ಸರ್ಕಾರದ ಒಂದು ಜಾಗದಲ್ಲಿ ನಿವೇಶನ ಮಾಡೋಣ. ಇಲ್ಲವೇ ನಾವು ಎಲ್ಲರೂ ಸೇರಿ ನಿವೇಶನ ಮಾಡಬೇಕು. ಆನಂತರ ಭವನ ನಿರ್ಮಾಣಕ್ಕೆ ಕೈಜೋಡಿಸೋಣ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ನಮ್ಮ ಅಧಿಕಾರದಲ್ಲಿ ಬೇರೆ ಸಮಾಜಗಳಿಗೆ ನಿವೇಶಗಳನ್ನು ನೀಡಿದ್ದೇವೆ . ಆದರೆ ಪ್ರಬಲ ಸಮುದಾಯವಾದ ಕುರುಬ ಸಮಾಜಕ್ಕೆ ಇದುವರೆಗೂ ನಿವೇಶನ ಸಿಕ್ಕಿಲ್ಲ. ಆದರೂ ಪಟ್ಟಣದ ಹೃದಯ ಭಾಗದಲ್ಲಿರುವ ಸಂಗೊಳ್ಳಿ ರಾಯಣ್ಣ ವೇದಿಕೆ ಜಾಗವು ಸಮಾಜದ ಆಸ್ತಿ, ಬೇರೆ ಸಮಾಜದ ಆಸ್ತಿಯಾಗಿದ್ದ ಅದನ್ನು ಸಂಭಂದಿಸಿದವರ ಮನವೊಲಿಸಿದ್ದು ಅವರು ಕೇಳಿದ ನಿವೇಶನ ನೀಡಿ ಉಳಿದ ಜಾಗವನ್ನು ನಮ್ಮ ಸಮಾಜಕ್ಕೆ ಉಳಿಸಿಕೊಳ್ಳಲು ಚರ್ಚೆ ನಡೆದಿದೆ. ಕುರುಬ ನೌಕರ ಸಂಘದ ಅಧ್ಯಕ್ಷರಾದ ತಿಪ್ಪೇಶ್ ಸೇರಿದಂತೆ ಎಲ್ಲರ ಸಹಕಾರದಿಂದ ಪಟ್ಟಣದಲ್ಲಿ ನೌಕರರ ಸಂಘದ ಭವನ ನಿರ್ಮಾಣಕ್ಕಾಗಿ ಶಾಸಕರೊಂದಿಗೆ ಸೇರಿ ನಿವೇಶನ ಕೊಡಿಸುವ ಜೊತೆ ವೈಯಕ್ತಿಕವಾಗಿ ಹಣಕಾಸಿನ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಕುರುಬ ಸಮಾಜದ ಸರಕಾರಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಶ್ ಮಾತನಾಡಿ, 2023- 24 ನೇ ಸಾಲಿನಲ್ಲಿ ನೂತನವಾಗಿ ಕುರುಬ ಸಮಾಜದ ಸರ್ಕಾರಿ ನೌಕರರ ಸಂಘ ಆರಂಭವಾಗಿದೆ. ತಾಲೂಕಿನಲ್ಲಿ ಸಮಾಜದ ಸಂಘಟನೆಗೆ ನೌಕರರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಶಾಸಕರು ಹಾಗೂ ಪುರಸಭೆ ಅಧ್ಯಕ್ಷರು ಸೇರಿ ನಿವೇಶನ ಕೊಡಿಸಬೇಕು. ಆ ಮೂಲಕ ಸಂಘದ ಬೈಲಾದಲ್ಲಿರುವ ಉತ್ತಮ ಅಂಶಗಳನ್ನು ಜಾರಿಗೊಳಿಸಿ ಸಮಾಜದ ಸಂಘಟನೆ ಮಾಡಲಾಗುವುದು ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ಅಗ್ನಿ ಮಾತನಾಡಿದರು. ಸಂಘದ ಗೌರವ ಸಲಹೆಗಾರರಾದ ಉಡುಗೆರೆ ರೇವಣ್ಣ, ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಸವರಾಜ್ , ವೈ.ಬಿ.ಹನುಮಂತಪ್ಪ, ವಕೀಲ ಲಯನ್ ರವಿಕುಮಾರ್, ಬಿಳುವಾಲ ಆನಂದ್, ರಾಜಪ್ಪ,ಶಿವಕುಮಾರ್, ನಿರ್ದೇಶಕರು ಹಾಜರಿದ್ದರು.