ಜೈಪುರ, ಕಾಶ್ಮೀರ ರೀತಿ ಕಿನ್ನಾಳ ಕಲೆ ಪ್ರದರ್ಶನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಮಹಿಳಾ ಆಶಾಕಿರಣವೇ ಕಾರ್ಯಕ್ರಮದ ಉದ್ದೇಶ
ಕೊಪ್ಪಳ/ಕುಕನೂರು: ಜಿಲ್ಲೆಯ ಕುಕನೂರು ಪಟ್ಟಣದ ಬಿ.ವಿ. ಶೆಟ್ಟರ್ ಮಂಗಲ ಭವನದಲ್ಲಿ ಮಾ.14 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕೊಪ್ಪಳ ಸ್ತ್ರೀ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜನೆ ಮಾಡಲಾಗಿದೆ ಎಂದು ಹೈಕೊರ್ಟ ವಕೀಲೆ ಮಮತಾ ಬಸವರಾಜ ರಾಯರಡ್ಡಿ ಹೇಳಿದರು. ಕೊಪ್ಪಳ ನಗರದಲ್ಲಿ ಹಾಗೂ ಕುಕನೂರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರಾಮ್ ಸಂಸ್ಥೆ ಮೂಲಕ ಮಾ. 14ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಾಲ್ಕು ಪ್ರಮುಖ ಮಹಿಳಾ ಪೂರಕ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 14 ಮಹಿಳೆಯರಿಗೆ ಕೊಪ್ಪಳ ಸ್ತ್ರೀ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಖೀಂ ತಂಡ ನೇತೃತ್ವದಲ್ಲಿ ಮಾನಸಿಕ ಆರೋಗ್ಯ ಸಮಾಲೋಚನೆ ಹಮ್ಮಿಕೊಳ್ಳಲಾಗಿದೆ. ಸಖಿ ತಂಡದ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಿದ್ದಾರೆ.
ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.ಕರಾಟೆ, ಕೋಲಾಟ ಹಾಗೂ ಡೊಳ್ಳು ಕುಣಿತ ಪ್ರದರ್ಶನಗಳು ಇರಲಿವೆ. ಈ ಎಲ್ಲ ಸ್ಪರ್ಧೆಗಳಲ್ಲಿ ಮಹಿಳೆಯರೇ ಭಾಗವಹಿಸಲಿದ್ದಾರೆ. ಜೈಪುರ, ಕಾಶ್ಮೀರ ರೀತಿ ಕಿನ್ನಾಳ ಕಲೆ ಪ್ರದರ್ಶನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಮಹಿಳಾ ಆಶಾಕಿರಣವೇ ಕಾರ್ಯಕ್ರಮದ ಉದ್ದೇಶ ಎಂದರು.ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸಾವಿತ್ರಿ ಗೊಲ್ಲರ್ ಮಾತನಾಡಿ, ಆರಾಮ್ ಸಂಸ್ಥೆ ಜತೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಹಾಗೂ ಯಲಬುರ್ಗಾ ವಿಧಾನಸಭಾ ಮಹಿಳಾ ಕಾಂಗ್ರೆಸ್ ಸಹ ಕೈಜೋಡಿಸುತ್ತಿದೆ. ಕಾರ್ಯಕ್ರಮ ಉದ್ಘಾಟನೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಭೀಮವ್ವ ಶಿಳ್ಳೆಕ್ಯಾತರ ಮಾಡಲಾಗಿದ್ದಾರೆ ಎಂದರು.
ಕುಕನೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯೆಕ್ಷ ಫರೀದಾ ಬೇಗಂ, ಜಿಲ್ಲಾ ದಿಶಾ ಸಮಿತಿ ಸದಸ್ಯೆ ನಂದಿತಾ ಎಸ್.ದಾನರಡ್ಡಿ, ಪೂರ್ಣಿಮಾ ಹಿರೇಮಠ ಇತರರಿದ್ದರು.ರಾಜಕೀಯದಿಂದ ದೂರ: ನನ್ನ ತಂದೆ ಬಸವರಾಜ ರಾಯರಡ್ಡಿ ಯಲಬುರ್ಗಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನಾನು ಸಮಾಜ ಸೇವೆ ಮಾಡುವ ತುಡಿತದಿಂದ ಕ್ಷೇತ್ರದಲ್ಲಿ ಸಕ್ರೀಯನಾಗಿದ್ದೇನೆ ಹೊರತು, ಯಾವುದೇ ರಾಜಕೀಯ ಪಾದಾರ್ಪಣೆ ಮಾಡುವ ಹಂಬಲ ಎಂದಿಗೂ ಇಲ್ಲ.ಹಾಗೇನಾದರೂ ಮಹಿಳಾ ಮೀಸಲಾತಿ ಕ್ಷೇತ್ರಕ್ಕೆ ಬಂದರೆ ಯಾರಾದರೂ ಕಾರ್ಯಕರ್ತರನ್ನು ಚುನಾವಣೆಗೆ ನಿಲ್ಲಿಸಿ ಅವರನ್ನು ಗೆಲ್ಲಿಸುತ್ತೇವೆ. ನಾನು ರಾಜಕೀಯದಿಂದ ದೂರ ಇರುತ್ತೇನೆ. ಅಭಿವೃದ್ಧಿ ದೃಷ್ಠಿಯಲ್ಲಿ ನನ್ನ ತಂದೆ ಜತೆಗಿರುತ್ತೇನೆ ಎಂದು ಶಾಸಕ ಬಸವರಾಜ ರಾಯರಡ್ಡಿ ಪುತ್ರಿ ಮಮತಾ ರಾಯರಡ್ಡಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ದುಬೈನ ಯುದ್ದದ ವಾತಾವರಣ ಕಷ್ಟಕರ: ಕಳೆದ ವಾರ ದುಬೈನಲ್ಲಿ ಸ್ನೇಹಿತೆಯೊಬ್ಬರ ಮದುವೆಗೆ ಹೋಗಿ ಯುದ್ದದಿಂದ ದುಬೈನಲ್ಲಿ ಸಿಲುಕಿಕೊಂಡಿದ್ದ ಮಮತಾ ರಾಯರಡ್ಡಿ ಅವರಿಗೆ ಯುದ್ದದ ವಾತಾವರಣ ಬಗ್ಗೆ ಪತ್ರಕರ್ತರು ಕೇಳಿದಾಗ, ಯುದ್ದದ ವಾತಾವರಣ ಕಷ್ಟಕರವಾಗಿತ್ತು. ಮಿಸೈಲ್ ಗಳು ಬೀಳುವುದನ್ನು ನೋಡಿದೇವು. ಅದನ್ನು ಸಹ ವಿಡಿಯೋ ಸಹ ಮಾಡಿಕೊಂಡೆವು. ಆದರೆ ಪ್ರವಾಸಿಗರಿಗೆ ದುಬೈನಲ್ಲಿ ಸುರಕ್ಷತೆ ಒದಗಿಲಾಗಿತ್ತು. ಯುದ್ಧಗಳು ಆಗಬಾರದು. ಯುದ್ಧ ಮುಗಿಯಬೇಕು ಎಂದು ಮಮತಾ ರಾಯರಡ್ಡಿ ಹೇಳಿದರು.