ದೆಹಲಿ ಮಾದರಿ ವ್ಯಾಪಾರ ವಲಯ ಅಭಿವೃದ್ಧಿಗೆ ಕ್ರಮ: ಆಯುಕ್ತೆ ರೇಣುಕಾ

| Published : Feb 27 2024, 01:32 AM IST

ದೆಹಲಿ ಮಾದರಿ ವ್ಯಾಪಾರ ವಲಯ ಅಭಿವೃದ್ಧಿಗೆ ಕ್ರಮ: ಆಯುಕ್ತೆ ರೇಣುಕಾ
Share this Article
  • FB
  • TW
  • Linkdin
  • Email

ಸಾರಾಂಶ

ಗಡಿಯಾರ ಕಂಬ ಬಳಿ ವಿದ್ಯುತ್ ತಂತಿಗಳ ಸಮಸ್ಯೆ ಇದ್ದು, ಕೆಲಸ ಸ್ಥಗಿತವಾಗಿದೆ. ಉಳಿದಂತೆ ಇತರೆಡೆ ವೆಂಡಿಂಗ್ ಝೋನ್‌ಗೆ ಸ್ಥಳ ಗುರುತಿಸಲಾಗಿದೆ. ಆಗ ಬೀದಿ ಬದಿ ವ್ಯಾಪಾರಸ್ಥರ ಬೇಡಿಕೆಯಾದ ಕುಡಿಯುವ ನೀರು, ನೆರಳು, ಶೌಚಾಲಯ ಸೇರಿ ಎಲ್ಲಾ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು. ಲೋಕಾಯುಕ್ತ ಪ್ರಕರಣ ಬಗೆಹರಿದ ನಂತರ ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆಗಳ ನೀಡಲಾಗುವುದು. ಆರೋಗ್ಯ ವಿಮೆ ಒದಗಿಸಲು ಕ್ರಮ, ಬೀದಿ ಬದಿ ವ್ಯಾಪಾರಸ್ಥರು ಕೂಡ ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ಮಾಡಬೇಕು. ತ್ಯಾಜ್ಯವನ್ನು ಕಸದ ಗಾಡಿಗಳಿಗೆ ಹಾಕಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಐದು ಕಡೆ ದೆಹಲಿಯ ಸರೋಜಿನಿ ಮಾರ್ಕೆಟ್ ಮಾದರಿಯಲ್ಲಿ ವ್ಯಾಪಾರ ವಲಯ ಅಭಿವೃದ್ಧಿಪಡಿಸಿ, ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಪಾಲಿಕೆ ಆಯುಕ್ತರಾದ ರೇಣುಕಾ ಭರವಸೆ ನೀಡಿದರು.

ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಜಿಲ್ಲಾ ಬೀದಿ ಬದಿ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದಿಂದ ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಕೇಂದ್ರದ 5 ಕಡೆ ವ್ಯಾಪಾರ ವಲಯ ಸ್ಥಾಪಿಸಲು 2019ರಲ್ಲೇ ಮಂಜೂರಾತಿ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು, ಕಾರ್ಯಾದೇಶವೂ ಆಗಿದೆ ಎಂದರು.

ಗಡಿಯಾರ ಕಂಬ ಬಳಿ ವಿದ್ಯುತ್ ತಂತಿಗಳ ಸಮಸ್ಯೆ ಇದ್ದು, ಕೆಲಸ ಸ್ಥಗಿತವಾಗಿದೆ. ಉಳಿದಂತೆ ಇತರೆಡೆ ವೆಂಡಿಂಗ್ ಝೋನ್‌ಗೆ ಸ್ಥಳ ಗುರುತಿಸಲಾಗಿದೆ. ಆಗ ಬೀದಿ ಬದಿ ವ್ಯಾಪಾರಸ್ಥರ ಬೇಡಿಕೆಯಾದ ಕುಡಿಯುವ ನೀರು, ನೆರಳು, ಶೌಚಾಲಯ ಸೇರಿ ಎಲ್ಲಾ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು. ಲೋಕಾಯುಕ್ತ ಪ್ರಕರಣ ಬಗೆಹರಿದ ನಂತರ ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆಗಳ ನೀಡಲಾಗುವುದು. ಆರೋಗ್ಯ ವಿಮೆ ಒದಗಿಸಲು ಕ್ರಮ, ಬೀದಿ ಬದಿ ವ್ಯಾಪಾರಸ್ಥರು ಕೂಡ ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ಮಾಡಬೇಕು. ತ್ಯಾಜ್ಯವನ್ನು ಕಸದ ಗಾಡಿಗಳಿಗೆ ಹಾಕಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಸಂಘದ ಮಹಿಳಾ ಕಾರ್ಯದರ್ಶಿ ಕೆ.ಭಾರತಿ ಮಾತನಾಡಿ, ವ್ಯಾಪಾರ ವಲಯಗಳ ಜನರ ಓಡಾಟ ಇರುವ ಕಡೆ ಮಾಡಬೇಕು. ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಪಾಲಿಕೆ ಮುಂದುವರಿಯಬೇಕು. ಇಲ್ಲದಿದ್ದರೆ, ಹೂವಿನ ಮಾರುಕಟ್ಟೆಯಂತೆ ಮಾರುಕಟ್ಟೆ ಇರುವುದೆಲ್ಲೋ, ಹೂವಿನ ವ್ಯಾಪಾರ ನಡೆಯುವುದು ಎಲ್ಲೋ ಎಂಬಂತಾಗುತ್ತದೆ. ನಕಲಿ ವ್ಯಾಪಾರಿಗಳ ಪತ್ತೆ ಮಾಡಿ, ನಿಜವಾದ ವ್ಯಾಪಾರಿಗಳಿಗೆ ಸೌಲಭ್ಯ ಒದಗಿಸಬೇಕು. ಜಕಾತಿ ವಸೂಲಿ ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದು. ನೈಜ ವ್ಯಾಪಾರಸ್ಥರಿಗೆ ಸ್ಮಾರ್ಟ್ ಕಾರ್ಡ್, ಶಾಶ್ವತ ನೆರ‍ಳಿನ ವ್ಯವಸ್ಥೆಯಾಗಬೇಕು. ಅಲ್ಲಿವರೆಗೆ ತಾತ್ಕಾಲಿಕ ಹಸಿರು ಹೊದಿಕೆ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಸಂಘದ ಅಧ್ಯಕ್ಷ ಎಸ್.ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯ ಆರ್.ಎಲ್.ಶಿವಪ್ರಕಾಶ, ಎಐಯುಟಿಯುಸಿ ಮುಖಂಡ ಮಂಜುನಾಥ ಕೈದಾಳೆ, ಸಂಘದ ಗೌರವಾಧ್ಯಕ್ಷ ಎಸ್.ಕೆ.ರಹಮತ್ತುಲ್ಲಾ, ಉಪಾಧ್ಯಕ್ಷ ಎಚ್.ಸಿ.ಮಲ್ಲಪ್ಪ, ಕಾರ್ಯದರ್ಶಿ ಎಸ್.ದುಗ್ಗಪ್ಪ, ಮುಖಂಡರಾದ ಶೀಲಾ ಶ್ರೀನಿವಾಸ, ಎಸ್.ಈರಣ್ಣ, ರಿಯಾಜ್ ಅಹಮ್ಮದ್‌, ರವಿ, ಎಸ್.ಕೆ.ಜಬೀವುಲ್ಲಾ, ಕೆ.ಕೃಷ್ಣಮೂರ್ತಿ, ರೇಣುಕಮ್ಮ, ಹೊನ್ನಮ್ಮ ಇತರರಿದ್ದರು. .ಖಾಸಗಿ ಬದಲು ಪಾಲಿಕೆಯಿಂದ ಜಕಾತಿ ಸಂಗ್ರಹ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಜಕಾತಿ ವಸೂಲಿಗೆ ಖಾಸಗಿ ಟೆಂಡರ್ ನೀಡದೇ, ಪಾಲಿಕೆಯಿಂದಲೇ ನೇರವಾಗಿ ಬೀದಿ ಬದಿ ವ್ಯಾಪಾರಸ್ಥರಿಗೆ ರಸೀದಿ ನೀಡಿ, ಜಕಾತಿ ಸಂಗ್ರಹಿಸುತ್ತಿರುವ ಶ್ರೇಯ ಯಾರದ್ದೆಂಬ ಬಗ್ಗೆ ವಿಚಾರ ಗಮನ ಸೆಳೆಯಿತು. ಬೀದಿ ಬದಿ ವ್ಯಾಪಾರಸ್ಥರಿಗೆ ಬೇರೆ ಜಿಲ್ಲೆಗಳಲ್ಲಿ ಅನೇಕ ಸೌಲಭ್ಯವಿದೆ. ಆದರೆ, ಇಲ್ಲಿ ಮಾತ್ರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಷಯ ತಂದು, ಖಾಸಗಿ ಜಕಾತಿ ರದ್ದುಪಡಿಸಿದ್ದಾಗಿ ಆಯುಕ್ತೆ ರೇಣುಕಾ ತಮ್ಮ ಭಾಷಣದ ವೇಳೆ ಪ್ರಸ್ತಾಪಿಸಿದರು. ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್ ಮಾತನಾಡಿ, ತಾವು ಮೇಯರ್ ಆದ ನಂತರ ಬೀದಿ ಬದಿ ವ್ಯಾಪಾರಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಆಗುತ್ತಿದ್ದುದನ್ನು ನೋಡಿದರೆ, ತಕ್ಷಣವೇ ಖಾಸಗಿ ಜಕಾತಿ ತೆಗೆದು ಹಾಕುವಂತೆ ಆಯುಕ್ತರ ಗಮನಕ್ಕೆ ತಂದಿದ್ದೆ. ಹಾಗಾಗಿ ಜಕಾತಿಯ ಪಾಲಿಕೆಯಿಂದಲೇ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು. ಪಾಲಿಕೆ ಬಿಜೆಪಿ ಸದಸ್ಯ ಆರ್.ಎಲ್‌.ಶಿವಪ್ರಕಾಶ ಮಾತನಾಡಿ, ಎಲ್ಲಾ ಸದಸ್ಯರ ಸಹಕಾರದಿಂದ ಖಾಸಗಿಯವರಿಂದ ಜಕಾತಿ ರದ್ದುಪಡಿಸಿ, ಪಾಲಿಕೆಯಿಂದಲೇ ನೇರ ಜಕಾತಿ ಪಡೆಯುವಂತಾಗಿದೆ. ಸಮರ್ಪಕವಾಗಿ ನೆರಳಿನ ವ್ಯವಸ್ಥೆ ಮಾಡುವವರೆಗೂ ಯಾವೊಬ್ಬ ವ್ಯಾಪಾರಿಯೂ ಜಕಾತಿ ಕೊಡಬಾರದು. ಕಳೆದ 4-5 ವರ್ಷದಿಂದ ಸಮಸ್ಯೆಗಳು ಬಗೆಹರಿಯದೇ ಉಳಿದಿವೆ. ಆಶ್ರಯ ಮನೆಗಳಿಗಾಗಿ ಹೋರಾಟಕ್ಕಿಳಿಯಲು ಕರೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಬಿ.ಎಚ್‌.ವಿನಾಯಕ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಶಾಸಕ ಶಾನೂರು ಶಿವಶಂಕರಪ್ಪ ದೊಡ್ಡ ಶಕ್ತಿಯಾಗಿದ್ದಾರೆ. ಲೋಕಾಯುಕ್ತ ಪ್ರಕರಣ ಇರುವುದರಿಂದ ಆಶ್ರಯ ಮನೆಗಳ ಹಕ್ಕುಪತ್ರ ವಿತರಣೆ ತಡವಾಗಿದೆ. ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದರು.