ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಕ್ರಮ: ಸತೀಶ್ ಕುಮಾರ್

| Published : Sep 02 2025, 01:00 AM IST

ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಕ್ರಮ: ಸತೀಶ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಆದೇಶದಂತೆ ಬೀದಿ ನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲು ಇ-ಪ್ರೊಕ್ಯೂರ್‌ಮೆಂಟ್ ಟೆಂಡರ್ ಕರೆಯಲಾಗಿದೆ. ಆಸಕ್ತರು ಸೆ.15 ಮಧ್ಯಾಹ್ನ 2 ಗಂಟೆಯೊಳಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಟೆಂಡರ್ ಬಿಡನ್ನು ಅದೇ ದಿನ ಸಂಜೆ 5.30ರ ನಂತರ ತೆರೆಯಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿವೆ. ನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆದೇಶದಂತೆ ಬೀದಿ ನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲು ಇ-ಪ್ರೊಕ್ಯೂರ್‌ಮೆಂಟ್ ಟೆಂಡರ್ ಕರೆಯಲಾಗಿದೆ. ಆಸಕ್ತರು ಸೆ.15 ಮಧ್ಯಾಹ್ನ 2 ಗಂಟೆಯೊಳಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಟೆಂಡರ್ ಬಿಡನ್ನು ಅದೇ ದಿನ ಸಂಜೆ 5.30ರ ನಂತರ ತೆರೆಯಲಾಗುವುದು ಎಂದರು.

ಆಸಕ್ತ ಗುತ್ತಿಗೆದಾರರು, ಏಜೆನ್ಸಿಯವರು ಅಥವಾ ಎನ್‌ಜಿಒಗಳು ಟೆಂಡರ್‌ನಲ್ಲಿ ಭಾಗವಹಿಸಬಹುದಾಗಿದೆ. ಈ ಹಿಂದೆ ಜೆಇಎಮ್ (ಜೆಮ್) ಪೋರ್ಟಲ್‌ನಲ್ಲಿ ಎರಡು ಬಾರಿ ಹಾಗೂ ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ಎರಡು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ, ಟೆಂಡರ್ ಪ್ರಕ್ರಿಯೆಯಲ್ಲಿ ಯಾರೊಬ್ಬರು ಭಾಗವಹಿಸಲಿಲ್ಲ. ಹೀಗಾಗಿ ಮತ್ತೊಮ್ಮೆ ಟೆಂಡರ್ ಕರೆಯಲಾಗಿದೆ ಎಂದರು.

ಬೀದಿ ನಾಯಿಗಳ ಹಾವಳಿ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದೆ. ನಾಯಿಗಳ ದಾಳಿಯಿಂದ ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳಿಗೂ ತೊಂದರೆಯಾಗುತ್ತಿದೆ. ಹೀಗಾಗಿ, ಸರ್ಕಾರದ ನಿರ್ದೇಶನದಂತೆ ನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಿ ವಾಪಸ್ ಅದೇ ಸ್ಥಳಕ್ಕೆ ಬಿಡಲು ಟೆಂಡರ್ ಕರೆಯಲಾಗಿದೆ. ಇದರಿಂದ ನಾಯಿಗಳ ಸಂಖ್ಯೆ ನಿಯಂತ್ರಿಸಬಹುದು ಎಂದರು. ಈ ವೇಳೆ ಪರಿಸರ ಎಂಜಿನಿಯರ್ ಶಫಿನಾಜ್ ಇದ್ದರು.

ಸೆ.೫ಕ್ಕೆ ಓಂ ಶಿವಂ ಚಿತ್ರ ಬಿಡುಗಡೆ

ಕನ್ನಡಪ್ರಭ ವಾರ್ತೆ ಮಂಡ್ಯ

ದೀಪಾ ಫಿಲಂಸ್ ಅಡಿಯಲ್ಲಿ ಕೆ.ಎನ್.ಕೃಷ್ಣ ನಿರ್ಮಿಸಿ, ಅಲ್ವಿನ್ ನಿರ್ದೇಶಿಸಿರುವ ಓಂ ಶಿವಂ ಚಿತ್ರ ಸೆ.೫ರಂದು ರಾಜ್ಯಾದ್ಯಂತ ೮೦ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಅಲ್ವಿನ್ ತಿಳಿಸಿದರು.

ಭಾರ್ಗವ್ ಕೃಷ್ಣ ನಾಯಕ ಮತ್ತು ವಿರಾನಿಕಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ರವಿಕಾಳೆ, ರೋಬೋ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಂಡ್ಯ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಪ್ರೀತಿ-ಪ್ರೇಮದ ಸಂಘರ್ಷದ ಕತೆಯನ್ನು ಚಿತ್ರ ಒಳಗೊಂಡಿರುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಿತ್ರಕ್ಕೆ ವಿಜಯ್‌ಯಾರ್ಡ್ಲಿ ಸಂಗೀತ ಸಂಯೋಜನೆ, ವೀರೇಶ್ ಛಾಯಾಗ್ರಹಣ, ಸತೀಶ್ ಸಂಕಲನ, ಕವಿರಾಜ್, ಡಾ.ವಿ.ನಾಗೇಂದ್ರಪ್ರಸಾದ್, ಗೌಸ್‌ಪೀರ್ ಹಾಡುಗಳನ್ನು ರಚಿಸಿದ್ದಾರೆ. ನೃತ್ಯ ವಿ.ನಾಗೇಶ್, ಸಾಹಸ ಕೌರವ ವೆಂಕಟೇಶ್, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ ಎಂದರು.

ಮಂಡ್ಯ ಮಾತ್ರವಲ್ಲದೆ ಮೈಸೂರು, ಮಂಗಳೂರು, ಬೆಂಗಳೂರು ಮತ್ತು ಕೃಷ್ಣಗಿರಿಯಲ್ಲಿ ೪೫ ದಿನಗಳಲ್ಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜುಗೊಳಿಸಿದೆ. ಉಳಿದಂತೆ ಕಾಕ್ರೋಚ್ ಸುಧಿ, ಯಶ್‌ಶೆಟ್ಟಿ, ಲಕ್ಷ್ಮೀಸಿದ್ಧಿಯ, ಅಪೂರ್ವಶ್ರೀ, ಬಾಲರಾಜ್ ವಾಡಿ, ಉಕ್ರಂರವಿ, ವರ್ಧನ್, ರೋಬೋ ಗಣೇಶ್, ಹನುಮಂತೇಗೌಡ, ಲಕ್ಕಿರಾಮ್ ಇತರರು ನಟಿಸಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕೆ.ಎನ್.ಕೃಷ್ಣ, ಭಾರ್ಗವ್, ವಿರಾನಿಕಾ ಇತರರಿದ್ದರು.