ಕೇಬಲ್ ಟೆಲಿವಿಷನ್ ನೆಟ್ ವರ್ಕ್‌ ಕಾಯ್ದೆ ಉಲ್ಲಂಘಿಸಿದರೆ ಕ್ರಮ: ಡಿಸಿ

| Published : Jul 06 2024, 12:55 AM IST

ಸಾರಾಂಶ

ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾಮಟ್ಟದ ಕೇಬಲ್ ಟೆಲಿವಿಷನ್ ಕಾಯ್ದೆಯ ನಿರ್ವಹಣೆ ಸಮಿತಿ ಸಭೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೇಬಲ್ ಟೆಲಿವಿಷನ್ ನೆಟ್‌ ವರ್ಕ್‌ ಕಾಯ್ದೆ ಉಲ್ಲಂಘಿಸಿದಲ್ಲಿ ಕೇಬಲ್ ಆಪರೇಟರ್‌ಗಳ ಉಪಕರಣ ವಶಪಡಿಸಿಕೊಳ್ಳುವ ಮತ್ತು ಮುಟ್ಟುಗೋಲು ಹಾಕುವ ಅಧಿಕಾರವನ್ನು ಅಧಿಕೃತ ಅಧಿಕಾರಿಗಳು ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾಮಟ್ಟದ ಕೇಬಲ್ ಟೆಲಿವಿಷನ್ ಕಾಯ್ದೆಯ ನಿರ್ವಹಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಹಿತಕ್ಕೆ ಭಂಗ ತರುವಂತಹ ಕಾರ್ಯಕ್ರಮ ಪ್ರಸಾರ ಮಾಡುವ ಕೇಬಲ್ ಆಪರೇಟರ್ ಹಾಗೂ ಚಾನೆಲ್ ವಿರುದ್ಧ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಸ್ಥಳೀಯ ಕೇಬಲ್ ಚಾನೆಲ್‌ಗಳು ಹಾಗೂ ಕೇಬಲ್ ಆಪರೇಟರ್‌ಗಳು ಇನ್ನು ಮುಂದೆ ತಾವು ಪ್ರಸಾರ ಮಾಡುವ ಎಲ್ಲ ಕಾರ್ಯಕ್ರಮಗಳ ದಾಖಲೆ ಇಟ್ಟುಕೊಳ್ಳಬೇಕು. ಕೇಳಿದ ತಕ್ಷಣ ದಾಖಲೆ ಹಾಗೂ ದೃಶ್ಯಗಳನ್ನು ಹಾಜರುಪಡಿಸಲು ಬದ್ಧರಾಗಿರಬೇಕು. ಯಾವುದೇ ಟೆಲಿವಿಷನ್ ಕಾರ್ಯಕ್ರಮ ಸಾರ್ವಜನಿಕ ವ್ಯವಸ್ಥೆಗೆ ಭಂಗ ಉಂಟು ಮಾಡಿದರೆ ಅಥವಾ ಯಾವುದೇ ಸಮುದಾಯಗಳ ಮಧ್ಯೆ ದ್ವೇಷ ಅಥವಾ ನೋವುಂಟು ಮಾಡಿದರೆ, ಈ ಬಗ್ಗೆ ಕ್ರಮಕೈಗೊಳ್ಳಲು ಸಮಿತಿ ಶಿಫಾರಸು ಮಾಡಲಿದೆ. ಖಾಸಗಿ ಟಿವಿಗಳ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಕೇಬಲ್ ಆಪರೇಟರ್‌ಗಳು ಪ್ರಧಾನ ಅಂಚೆ ಕಚೇರಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ನವೀಕರಣಗೊಳ್ಳದ ಕೇಬಲ್ ಆಪರೇಟರ್ ಗಳ ರದ್ದತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಕೇಬಲ್ ಆಪರೇಟರ್ ಪ್ರಧಾನ ಅಂಚೆ ಕಚೇರಿಯಲ್ಲಿ ನೋಂದಣಿ ಮಾಡದವರನ್ನು ಅನಧಿಕೃತ ಎಂದು ಪರಿಗಣಿಸಿ ಅವರ ವಿರುದ್ಧ ಸಹ ಕ್ರಮಕೈಗೊಳ್ಳಲಾಗುತ್ತದೆ. ಸಾರ್ವಜನಿಕರಿಂದ ಟ್ರಾಯ್ ಅಡಿಯಲ್ಲಿ ನಿಗದಿಪಡಿಸಿದ ಮಾಸಿಕ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುವಂತಿಲ್ಲವೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ, ಸ್ಥಳೀಯ ಕೇಬಲ್ ಚಾನಲ್‌ ಗಳಲ್ಲಿ ಶೋಷಣೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ವಯಸ್ಕರು ಹಾಗೂ ಮಹಿಳೆಯರ ಬಗ್ಗೆ ಮಾಧ್ಯಮಗಳಲ್ಲಿ ಭಾವಚಿತ್ರ ಸಹಿತ ವಿವರ ಹಾಗೂ ದೃಶ್ಯಗಳನ್ನು ಬಿತ್ತರಿಸುವುದು ಆಕ್ಷೇಪಾರ್ಹ. ಇದರಿಂದ ಇನ್ನಷ್ಟು ನೋವು ಅನುಭವಿಸುವಂತಾಗುತ್ತಿದೆ. ಹಾಗಾಗಿ ಈ ಬಗ್ಗೆ ಸೂಕ್ಷ್ಮತೆ ಅರಿತು ವರದಿ ಪ್ರಸಾರ ಮಾಡುವಂತೆ ಸೂಚಿಸಿದರು.

ಸಭೆಯಲ್ಲಿ ಕೇಬಲ್ ಟೆಲಿವಿಷನ್ ನಿರ್ವಹಣೆ ಸಮಿತಿ ಸದಸ್ಯರಾದ ಅಕ್ಕಮಹಾದೇವಿ ಮಹಿಳಾ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಸುಷ್ಮಾ ಒಡೆಯರ, ರೀಚ್ ಸಂಸ್ಥೆಯ ನಿರ್ದೇಶಕ ಜಿ.ಎನ್. ಸಿಂಹ, ಎಂಎಸ್‌ಒಗಳ ಪ್ರತಿನಿಧಿಗಳಾದ ಮಹೇಂದ್ರ ಎಂ.ಕೆ. ಕಲಬುರ್ಗಿ, ಎ.ಎ. ರಬ್ಬಾನಿ ಸಂಕೇಶ್ವರ ಸೇರಿದಂತೆ ಇತರರು ಉಪಸ್ಥಿತರಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ ಸ್ವಾಗತಿಸಿ ವಂದಿಸಿದರು.

ಯುಟ್ಯೂಬ್ ಚಾನೆಲ್ ನಿಯಂತ್ರಣಕ್ಕೆ ಕ್ರಮ:

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯುಟ್ಯೂಬ್ ಚಾನೆಲ್ ಗಳ ಹಾವಳಿ ಹೆಚ್ಚಾಗಿದ್ದು, ಈ ಚಾನೆಲ್‌ ಗಳಿಗೆ ಸರ್ಕಾರದಿಂದ ಯಾವುದೇ ಮಾನ್ಯತೆ ಇಲ್ಲ. ಕೆಲವೊಂದು ಯುಟ್ಯೂಬ್ ಚಾನೆಲ್‌ ಗಳ ವರದಿಯಿಂದ ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಸರ್ಕಾರದ ಮಟ್ಟದಲ್ಲಿ ಕಟ್ಟುನಿಟ್ಟಿನ ನಿಯಮಾವಳಿ (ಪಾಲಸಿ) ತರುವುದು ಅವಶ್ಯವಾಗಿದೆ. ಈ ಕುರಿತು ಜಿಲ್ಲಾ ಸಮಿತಿ ವತಿಯಿಂದ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಯಿತು.----ಹೇಳಿಕೆ--

ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಮತ್ತು ಜಾಹೀರಾತುಗಳ ಬಗ್ಗೆ ಕೇಬಲ್ ಆಪರೇಟರ್‌ಗಳ ಸೇವಾ ನೂನ್ಯತೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಜಿಲ್ಲಾಮಟ್ಟದಲ್ಲಿ ದೂರು ಕೋಶಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ದೂರುಗಳನ್ನು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸಲ್ಲಿಸಬಹುದಾಗಿದೆ.

-ಜಾನಕಿ ಕೆ.ಎಂ, ಜಿಲ್ಲಾಧಿಕಾರಿ