ಸಾರಾಂಶ
ರಸಗೊಬ್ಬರದ ಜತೆಗೆ ಜೈವಿಕ ಉತ್ತೇಜಕ, ಕೀಟನಾಶಕ ಹಾಗೂ ಉಪ ಪೋಷಕಾಂಶ ಲಿಂಕ್ ಮಾಡಬಾರದು. ನಿಯಮಾನುಸಾರವೇ ಅವುಗಳ ಮಾರಾಟ ಮಾಡಬೇಕು.
ಕೊಪ್ಪಳ:
ಜಿಲ್ಲೆಯಲ್ಲಿ ರಸಗೊಬ್ಬರ ಅಂಗಡಿಗಳ ಮಾಲೀಕರು ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮತ್ತು ಅನಧಿಕೃತವಾಗಿ ದಾಸ್ತಾನು ಮಾಡಬಾರದು ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ರಸಗೊಬ್ಬರ ತಯಾರಕ ಕಂಪನಿಯ ಮಾರ್ಕೆಟಿಂಗ್ ಅಧಿಕಾರಿಗಳು, ಕರ್ನಾಟಕ ಮಾರ್ಕೆಟಿಂಗ್ ಫೆಡರೇಶನ್ ಮತ್ತು ರಾಜ್ಯ ಬೀಜ ನಿಗಮದ ಅಧಿಕಾರಿಗಳು ಹಾಗೂ ರಸಗೊಬ್ಬರ, ಕೀಟನಾಶಕಗಳ ಮಾರಾಟಗಾರರ ಸಂಘದ ಅಧ್ಯಕ್ಷರಿಗೆ ಕರೆದ ಸಭೆಯಲ್ಲಿ ಮಾತನಾಡಿದರು.
ರಸಗೊಬ್ಬರದ ಜತೆಗೆ ಜೈವಿಕ ಉತ್ತೇಜಕ, ಕೀಟನಾಶಕ ಹಾಗೂ ಉಪ ಪೋಷಕಾಂಶ ಲಿಂಕ್ ಮಾಡಬಾರದು. ನಿಯಮಾನುಸಾರವೇ ಅವುಗಳ ಮಾರಾಟ ಮಾಡಬೇಕು. ನಾನು ಕನಕಗಿರಿ, ಕಾರಟಗಿ ಹಾಗೂ ಕುಷ್ಟಗಿ ಭಾಗದಲ್ಲಿ ಹೋದಾಗ ರೈತರಿಂದ ಹೆಚ್ಚಿನ ಹಣ ಪಡೆದು ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರುಗಳು ಬಂದವು. ಹಾಗಾಗಿ ಯಾರು ನಿಯಮ ಬಿಟ್ಟು ಮಾರಾಟ ಮಾಡಬಾರದು ಎಂದು ತಾಕೀತು ಮಾಡಿದರು.ತಮ್ಮ ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಬೇಕು. ರೈತರ ಬೇಡಿಕೆಯಂತೆ ಜಿಲ್ಲೆಗೆ ರಸಗೊಬ್ಬರ ಬರುತ್ತಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಗೆ 3150 ಮೆಟ್ರಿಕ್ ಟನ್ ಯೂರಿಯಾ ಬಂದಿದೆ. ಇನ್ನೂ ಒಂದು ವಾರದಲ್ಲಿ 5000 ಮೆಟ್ರಿಕ್ ಟನ್ ರಸಗೊಬ್ಬರ ಬರಲಿದೆ. ಜಿಲ್ಲೆಯ ರೈತರು ಯಾವುದೇ ಕಾರಣಕ್ಕೆ ಆತಂಕ ಪಟ್ಟು ರಸಗೊಬ್ಬರ ಸ್ಟಾಕ್ ಮಾಡಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.ನ್ಯಾನೋ ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಬಳಕೆಗೆ ರೈತರು ಒತ್ತು ಕೊಡಬೇಕು. ಈ ಕುರಿತು ರಸಗೊಬ್ಬರ ಕಂಪನಿಯಗಳು ಕೃಷಿ ಇಲಾಖೆಯ ಜತೆಗೂಡಿ ರೈತರಿಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಬೇಕು. ಇನ್ನೂ ಬಹಳಷ್ಟು ರೈತರಿಗೆ ನ್ಯಾನೋ ಯೂರಿಯಾ ಹಾಗೂ ಡಿಎಪಿ ಉಪಯೋಗಿಸುವ ಕುರಿತು ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಅವರಿಗೆ ತಿಳಿಹೇಳಬೇಕೆಂದರು.ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ರಸಗೊಬ್ಬರ ತಯಾರಿಕ ಕಂಪನಿಯ ಮಾರ್ಕೆಟಿಂಗ್ ಅಧಿಕಾರಿಗಳು, ಕರ್ನಾಟಕ ಮಾರ್ಕೆಟಿಂಗ್ ಫೆಡರೇಶನ್ ಮತ್ತು ರಾಜ್ಯ ಬೀಜ ನಿಗಮದ ಅಧಿಕಾರಿಗಳು, ರಸಗೊಬ್ಬರ, ಕೀಟನಾಶಕಗಳ ಮಾರಾಟಗಾರರ ಸಂಘದ ಅಧ್ಯಕ್ಷರು ಸೇರಿದಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))