ಮಾಯಕೊಂಡ ಕ್ಷೇತ್ರದ ಗ್ರಾಮೀಣ ಪ್ರದೇಶದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ₹7.50 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಗುತ್ತಿಗೆದಾರರು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ ಸೂಚನೆ ನೀಡಿದ್ದಾರೆ.

- ಲೋಕಿಕೆರೆ- ಹೂವಿನಮಡು- ಗೋಣಿವಾಡ ಗ್ರಾಮಗಳ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ । ₹3 ಕೋಟಿ ವೆಚ್ಚ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಮಾಯಕೊಂಡ ಕ್ಷೇತ್ರದ ಗ್ರಾಮೀಣ ಪ್ರದೇಶದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ₹7.50 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಗುತ್ತಿಗೆದಾರರು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ ಸೂಚನೆ ನೀಡಿದರು.

ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಸಿಎಂಐಡಿಪಿ ಯೋಜನೆಯಡಿ ₹3 ಕೋಟಿ ವೆಚ್ಚದ ಲೋಕಿಕೆರೆ- ಹೂವಿನಮಡು- ಗೋಣಿವಾಡ ಗ್ರಾಮಗಳ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಿಸಿ ರಸ್ತೆ ನಿರ್ಮಾಣಕ್ಕೆ ₹3 ಕೋಟಿ ಬಿಡುಗಡೆಯಾಗಿದ್ದು, ಉತ್ತಮವಾಗಿ ನಿರ್ಮಿಸಬೇಕು. ಲೋಕಿಕೆರೆ ಗ್ರಾಮದಿಂದ ಹೂವಿನಮಡು- ಗೋಣಿವಾಡ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಸಿಎಂಐಡಿಪಿ ಯೋಜನೆಯಡಿ ಅನುದಾನ ಬಿಡುಗಡೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿವಿಧ ಇಲಾಖೆಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿರುವೆ ಎಂದು ತಿಳಿಸಿದರು.

ಕಾಮಗಾರಿ ಗುತ್ತಿವೆ ವಹಿಸಿದ ನಂತರ ಅಧಿಕಾರಿಗಳು ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸುವುದೇ ಇಲ್ಲ. ಅಧಿಕಾರಿಗಳು ಕಾಮಗಾರಿ ಅನುಷ್ಠಾನದಲ್ಲಿ ಸಡಿಲವಾಗಿದ್ದರೆ ಅಂತಹ ಕಡೆಗಳಲ್ಲಿ ಗುಣಮಟ್ಟದ ಕಾಮಗಾರಿ ಕಾಣಲು ಸಾಧ್ಯವಾಗುವುದಿಲ್ಲ. ಗ್ರಾಮಸ್ಥರು ಕೂಡ ಕಾಮಗಾರಿ ಬಗ್ಗೆ ನಿಗಾ ವಹಿಸಬೇಕು. ಒಂದುವೇಳೆ ಕಳಪೆ ಕಾಮಗಾರಿ ಕಂಡುಬಂದರೆ ಕೂಡಲೇ ನನ್ನ ಗಮನಕ್ಕೆ ತಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಚ್ಚರಿಸಿದರು.

ಗುಣಮಟ್ಟದ ರಸ್ತೆಗಳ ಸುಧಾರಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯ ಕೆಟ್ಟು ಹೋದ ರಸ್ತೆಗಳನ್ನು ಮರು ನಿರ್ಮಿಸಲಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ ಮುನ್ನ ರೈತರು ತಮ್ಮ ಹೊಲ-ಗದ್ದೆಗಳಿಗೆ ಸಂಪರ್ಕ ಸಾಧಿಸುವ ನೀರಿನ ಪೈಪ್‌ಲೈನ್ ಅಳವಡಿಸಬೇಕು. ಜತೆಗೆ ರಸ್ತೆ ನಿರ್ಮಾಣ ವ್ಯಾಪ್ತಿಯ ಗ್ರಾ.ಪಂ. ಅಧಿಕಾರಿಗಳು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಬೇಕು. ರಸ್ತೆ ನಿರ್ಮಾಣದ ಬಳಿಕ ರಸ್ತೆಗಳನ್ನು ಅಗೆಯಬಾರದು. ಏಕೆಂದರೆ ರಸ್ತೆ ನಿರ್ಮಾಣ ಮಾಡಿದ ಬಳಿಕ ಅನೇಕ ಕಡೆಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕೆಂದು ಸೂಚನೆ ನೀಡಿದರು.

ಕ್ಷೇತ್ರದ ವ್ಯಾಪ್ತಿಯ ಬಾಡಾ- ಅಣಬೇರು- ಶಂಕರನಹಳ್ಳಿ ಜಿಲ್ಲಾ ಮುಖ್ಯ ರಸ್ತೆಯ 7 ಕಿ.ಮೀ.ದಿಂದ 8.80 ಕಿ.ಮೀ.ರವರೆಗೆ (ಆಯ್ದ ಭಾಗಗಳಲ್ಲಿ) ₹2 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ, ಮಂಡ್ಯ- ಹಡಗಲಿ ರಾಜ್ಯ ಹೆದ್ದಾರಿ-47 ಆನಗೋಡು-ಪವಡರಂಗವ್ವನಹಳ್ಳಿ (ಆಯ್ದ ಭಾಗಗಳಲ್ಲಿ) ₹1.50 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಹಾಗೂ ₹1 ಕೋಟಿ ವೆಚ್ಚದ ಹಾಲುವರ್ತಿಯಿಂದ ಡಿಎಜೆ ರಸ್ತೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಕುಮಾರ್‌ನಾಯ್ಕ್, ಎಂಜಿನಿಯರ್ ಪರಮೇಶ್ವರಪ್ಪ, ಗ್ರಾಮದ ಮುಖಂಡರಾದ ಸುಭಾಶ್ ಗೌಡ್ರು, ಮುರುಗೇಶ್, ಕೃಷ್ಣಮೂರ್ತಿ, ಮಹೇಶ್‌ಗೌಡ್ರು, ನಾಗನಗೌಡ್ರು, ಶೇಖರಪ್ಪ, ಪ್ರಕಾಶ್, ಮಂಜಣ್ಣ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

- - -

(ಕೋಟ್) ಯಾವುದೇ ಕೆಲಸವಾಗಲಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿಯ ನಂತರ ಪರಿಶೀಲನೆ ಮಾಡಲಾಗುವುದು. ಕಳಪೆ ಕಂಡುಬಂದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು.

- ಕೆ.ಎಸ್.ಬಸವಂತಪ್ಪ, ಶಾಸಕ.

- - -

-13ಕೆಡಿವಿಜಿ31, 32:

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಲೋಕಿಕೆರೆ ಗ್ರಾಮದಲ್ಲಿ ಲೋಕಿಕೆರೆ- ಹೂವಿನಮಡು- ಗೋಣಿವಾಡ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಸ್. ಬಸವಂತಪ್ಪ ಭೂಮಿಪೂಜೆ ನೆರವೇರಿಸಿದರು.