ಮಳವಳ್ಳಿ ತಾಲೂಕಿನ ಹಲವು ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುವವರು, ಸೇವಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಗಾಂಜಾ ಮಾರಾಟ ಮಾಡುವುದು ಸಂಪೂರ್ಣ ತೊಡೆದು ಹಾಕಲು, ಅಗತ್ಯ ಬಿದ್ದಲ್ಲಿ ವಿಶೇಷ ತಂಡ ರಚನೆ ಮಾಡಲಾಗುವುದು. ಅಕ್ರಮ ಚಟುವಟಿಕೆ ತಡೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಆಚರಣೆ ಸಂಬಂಧ ನಿರ್ದಿಷ್ಟ ದೂರು ಸಲ್ಲಿಸಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ಎಸ್.ಬಿ.ಯಶವಂತಕುಮಾರ್‌ ಹೇಳಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳ್ಳಿಗಳ ಹೊಟೇಲ್, ಕಟಿಂಗ್ ಶಾಪ್, ದೇವಸ್ಥಾನ ಸೇರಿದಂತೆ ಇತರೆ ಸ್ಥಳಗಳಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಸಮಾನತೆಯಿಂದ ಬದುಕು ನಡೆಸಬೇಕು ಎಂದು ತಿಳಿವಳಿಕೆ ನೀಡಿದರು.

ತಾಲೂಕಿನ ಹಲವು ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುವವರು, ಸೇವಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಗಾಂಜಾ ಮಾರಾಟ ಮಾಡುವುದು ಸಂಪೂರ್ಣ ತೊಡೆದು ಹಾಕಲು, ಅಗತ್ಯ ಬಿದ್ದಲ್ಲಿ ವಿಶೇಷ ತಂಡ ರಚನೆ ಮಾಡಲಾಗುವುದು. ಅಕ್ರಮ ಚಟುವಟಿಕೆ ತಡೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ ಎಂದರು.ಆಗಸನಪುರ ಗ್ರಾಪಂ ಮಾಜಿ ಅಧ್ಯಕ್ಷೆ ಯಶೋಧ ಮಾತನಾಡಿ, ನಮ್ಮೂರಿನ ಸ್ಮಶಾನದಲ್ಲಿರುವ ಮರಗಳನ್ನು ಖಾಸಗಿ ವ್ಯಕ್ತಿ ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೂ ಕೂಡ ಕ್ರಮ ಕೈಗೊಳ್ಳದೇ ಅರಣ್ಯ ಇಲಾಖೆಗೆ ಹೋಗಿ ದೂರು ನೀಡಿ ಎಂದು ಹೇಳುತ್ತಾರೆ. ಇಲ್ಲಿವರೆವಿಗೂ ಯಾವುದೇ ಇಲಾಖೆಯಿಂದ ಕ್ರಮವಾಗಿಲ್ಲ ಎಂದರು.

ಸಿಪಿಐ ಶ್ರೀಧರ್ ಮಾತನಾಡಿ, ಮರ ಕಡಿದಿರುವ ಸಂಬಂಧ ಮತ್ತೊಮ್ಮೆ ದೂರು ನೀಡಿದರೆ ಮರ ಕಡಿದಿರುವವರ ವಿರುದ್ಧ ಪೊಲೀಸ್, ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಹಾಜರಾಗಿದ್ದ ದಲಿತ ಮುಖಂಡರು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಸಭೆಗೆ ತಂದಿರುವ ವಿಷಯಗಳ ಬಗ್ಗೆ ಗಮನ ಹರಿಸುವುದಾಗಿ ಸಭೆ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್‌ಪಿ ಯಶವಂತಕುಮಾರ್ ಭರವಸೆ ನೀಡಿದರು.

ಸಭೆಯಲ್ಲಿ ಸಿಪಿಐ ಜಯನಂದ್, ಪಿಎಸ್‌ಐಗಳಾದ ಪ್ರಕಾಶ್, ಶಿವನಂದ ದಳವಾಯಿ ಸೇರಿದಂತೆ ಇತರರು ಇದ್ದರು.