ರಸ್ತೆ ನಿಯಮ ಉಲ್ಲಂಘಿಸಿದರೆ ಕ್ರಮ

| Published : Jan 18 2025, 12:47 AM IST

ಸಾರಾಂಶ

ಇತ್ತೀಚೆಗೆ ತಾಲೂಕು ಮತ್ತು ಜಿಲ್ಲೆಯಾದ್ಯಂತ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.ಸಾವು- ನೋವಿನ ಪ್ರಮಾಣವೂ ಹೆಚ್ಚಾದ ಹಿನ್ನೆಲೆಯಲ್ಲಿ ನ. ೧ರಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ

ಶಿರಹಟ್ಟಿ: ಪೊಲೀಸ್ ಇಲಾಖೆ ಜೀವ ರಕ್ಷಕ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದು, ವಾಹನ ಸವಾರರು ಗಣನೆಗೆ ತೆಗೆದುಕೊಳ್ಳದೇ ಬೇಜವಾಬ್ದಾರಿ ತೋರುತ್ತಿದ್ದಾರೆ. ಖಡಕ್ ಎಚ್ಚರಿಕೆ ಮುಟ್ಟಿಸಲು ಗುರುವಾರ ಸಂಜೆ ಪಟ್ಟಣದ ನೆಹರು ವೃತ್ತದಲ್ಲಿ ದಂಡಾಸ್ತ್ರ ಪ್ರಯೋಗ ಮಾಡುವ ಮೂಲಕ ಶಾಕ್ ನೀಡಿದ್ದರಲ್ಲದೇ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಚನ್ನಯ್ಯ ದೇವೂರ ಬೈಕ್ ಸವಾರರಿಗೆ ಗುಲಾಬಿ ಹೂ ಹಾಗೂ ಹೆಲ್ಮೆಟ್ ನೀಡಿ ಜಾಗೃತಿ ಮೂಡಿಸಿದರು.

ಈ ವೇಳೆ ಸಿಪಿಐ ನಾಗರಾಜ ಮಾಡಳ್ಳಿ ಮಾತನಾಡಿ,ಇತ್ತೀಚೆಗೆ ತಾಲೂಕು ಮತ್ತು ಜಿಲ್ಲೆಯಾದ್ಯಂತ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.ಸಾವು- ನೋವಿನ ಪ್ರಮಾಣವೂ ಹೆಚ್ಚಾದ ಹಿನ್ನೆಲೆಯಲ್ಲಿ ನ. ೧ರಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದರು.

ಈಗಾಗಲೇ ಇಲಾಖೆಯಿಂದ ತಾಲೂಕಿನಾದ್ಯಂತ ಹೆಲ್ಮೆಟ್ ಧರಿಸದೇ ಸಂಚರಿಸುವ ದ್ವಿಚಕ್ರವಾಹನ ಸವಾರರಿಗೆ ಕಡಿವಾಣ ಹಾಕಲಾಗಿದೆ. ಪೊಲೀಸರು ತೀವ್ರ ನಿಗಾ ವಹಿಸಿ ದ್ವಿಚಕ್ರ ವಾಹನಗಳ ಪರಿಶೀಲನೆ ನಡೆಸಿ ಹೆಲ್ಮೆಟ್ ಇಲ್ಲದವರ ಮೇಲೆ ಪ್ರಕರಣ ದಾಖಲಿಸಿ ದಂಡದ ಬಿಸಿ ಮುಟ್ಟಿಸಿದ್ದಾರೆ ಎಂದರು.

ಪಿಎಸ್‌ಐ ಚನ್ನಯ್ಯ ದೇವೂರ ಮಾತನಾಡಿ, ಹೆಲ್ಮೆಟ್ ದ್ವಿಚಕ್ರ ವಾಹನ ಸವಾರರ ಜೀವ ರಕ್ಷಣೆ ಮಾಡುತ್ತದೆ. ಸವಾರರು ತಾವು ಹೆಲ್ಮೆಟ್ ಧರಿಸುವುದಲ್ಲದೇ ಇತರರನ್ನು ಪ್ರೇರೇಪಿಸಬೇಕು. ಜೀವಹಾನಿ ತಪ್ಪಿಸುವ ದೃಷ್ಟಿಯಿಂದ ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದರು.

ಪೊಲೀಸರು ಕಾನೂನನ್ನು ಒತ್ತಾಯ ಪೂರ್ವಕವಾಗಿ ಜನರ ಮೇಲೆ ಹೇರುತ್ತಿಲ್ಲ. ಸಾರ್ವಜನಿಕರ ಜೀವರಕ್ಷಣೆ ಮೂಲ ಉದ್ದೇಶವಾಗಿದೆ. ಪೊಲೀಸರ ಭಯಕ್ಕೆ ಹೆಲ್ಮೆಟ್ ಧರಿಸುವುದು ಮುಖ್ಯವಲ್ಲ. ಗುಣಮಟ್ಟದ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಪ್ರಾಣ ರಕ್ಷಿಸಿಕೊಳ್ಳಿ ಎಂದು ಹೇಳಿದರು.

ರೋಗರುಜಿನಗಳಿಗೆ ಬಲಿಯಾಗುವವರಿಗಿಂತ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ.ಆದ್ದರಿಂದ ಪ್ರತಿಯೊಬ್ಬ ಸವಾರರು ಹೆಲ್ಮೆಟ್ ಧರಿಸಿ ತಮ್ಮ ಪ್ರಾಣ ಕಾಪಾಡಿಕೊಳ್ಳಲು ಮುಂದಾಗಬೇಕು.ತಮ್ಮ ಅಮೂಲ್ಯ ಜೀವ ಕಾಪಾಡಿಕೊಳ್ಳಲಿ ಎಂಬ ಸದುದ್ದೇಶ ಪೊಲೀಸ್ ಇಲಾಖೆಯದ್ದಾಗಿದೆ. ಯಾವುದೇ ಜನಹಿತಾಸಕ್ತಿಯ ಯೋಜನೆ ಸಾಕಾರವಾಗಲು ಜನರ ಸಹಭಾಗಿತ್ವ ಅತಿ ಮುಖ್ಯ.ಆದ್ದರಿಂದ ಜನರು ಪೊಲೀಸ್ ಇಲಾಖೆಯ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.