ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಹಾಗೂ ವಿಟ್ಲ ವ್ಯಾಪ್ತಿಯ ಜ್ಞಾನವಿಕಾಸ ಸಂಯೋಜಕಿಯರ ಕ್ರಿಯಾ ಯೋಜನೆ ಸಭೆ ಪುತ್ತೂರು ಕಚೇರಿ ಸಭಾಂಗಣದಲ್ಲಿ ನಡೆಯಿತು.

ದಕ್ಷಿಣ ಕನ್ನಡ-೨ ಜಿಲ್ಲೆಯ ನಿರ್ದೇಶಕರಾದ ಬಾಬು ನಾಯ್ಕ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಜ್ಞಾನವಿಕಾಸ ಕೇಂದ್ರದ ಹುಟ್ಟು ಹಾಗೂ ಅದರ ಹಿನ್ನೆಲೆಯನ್ನು ತಿಳಿಸಿದರು. ತಾಲೂಕಿನಲ್ಲಿ ಯೋಜನೆಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ, ಪ್ರಾಮಾಣಿಕವಾಗಿ ಯಶಸ್ವಿಗೊಳಿಸಬೇಕು ಹಾಗೂ ಜ್ಞಾನವಿಕಾಸ ಕೇಂದ್ರದಲ್ಲಿ ವಿವಿಧ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಬೇಕು. ಹೊಸ ಸಂಘಗಳ ಸೇರ್ಪಡೆಗಳನ್ನು ಮಾಡಿ ಕೇಂದ್ರಗಳ ಗುಣಮಟ್ಟ ಹಾಗೂ ಹಾಜರಾತಿಯನ್ನು ಸರಿಪಡಿಸಬೇಕೆಂದು ತಿಳಿಸಿದರು.ಕೇಂದ್ರ ಕಚೇರಿಯ ಜ್ಞಾನವಿಕಾಸ ವಿಭಾಗದ ನಿರ್ದೇಶಕ ದಿನೇಶ್ ಪೂಜಾರಿ ಜ್ಞಾನವಿಕಾಸದ ಮಹತ್ವದ ಕುರಿತು ಮಾಹಿತಿ ನೀಡಿದರು. ಪುತ್ತೂರು ಹಾಗೂ ವಿಟ್ಲ ತಾಲೂಕಿನಲ್ಲಿ ಜ್ಞಾನವಿಕಾಸ ಕೇಂದ್ರಗಳ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ಇದರ ಸಂಪೂರ್ಣ ಜವಾಬ್ದಾರಿ ನಮ್ಮ ಮೇಲಿದೆ. ಅದಲ್ಲದೆ ಮಹಿಳೆಯರು ಸ್ವ ಉದ್ಯೋಗ ಕೈಗೊಳ್ಳಲು ಹೆಚ್ಚಿನ ಪ್ರೇರಣೆ ನೀಡಬೇಕು ಎಂದರು.

ಉಡುಪಿ ಪ್ರಾದೇಶಿಕ ವಿಭಾಗದ ಜ್ಞಾನವಿಕಾಸ ಯೋಜನಾಧಿಕಾರಿ ಅಮೃತ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮ ತವರು ಮನೆ ಇದ್ದಂತೆ. ನಮ್ಮ ಕಷ್ಟಗಳನ್ನು ನೋವುಗಳನ್ನು ತಾಯಿಯ ಬಳಿ ಮಾತ್ರ ಹೇಳಿಕೊಳ್ಳುತ್ತೇವೆ. ಹಾಗೆಯೇ ಜ್ಞಾನವಿಕಾಸದಲ್ಲಿಯೂ ಸದಸ್ಯರು ನಮ್ಮ ಬಳಿ ಅವರ ನೋವು ನಲಿವನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ಮಹಿಳೆಯರು ಸ್ವಾವಲಂಬಿಗಳಾಗಿರಬೇಕು. ಕುಟುಂಬದ ಪೋಷಣೆಯಲ್ಲಿ ನಮ್ಮದು ಒಂದು ಪಾಲು ಇರಬೇಕು. ಇದಕ್ಕೆ ಪೂರಕವಾದ ಕೆಲಸವನ್ನು ಮಹಿಳೆಯರು ಪ್ರಾಮಾಣಿಕವಾಗಿ ಮಾಡಬೇಕು ಎಂದು ತಿಳಿಸಿದರು. ಮುಂಬರುವ ಜ್ಞಾನವಿಕಾಸ ಕ್ರಿಯಾ ಯೋಜನೆಗಳ ಸಮರ್ಪಕ ಅನುಷ್ಠಾನ, ವಾತ್ಸಲ್ಯ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸೇವಾ ಪ್ರತಿನಿಧಿಗಳು ತಮ್ಮ ಅನಿಸಿಕೆ, ಅನುಭವಗಳನ್ನು ಹಂಚಿಕೊಂಡರು. ಸಭೆಯಲ್ಲಿ ಪುತ್ತೂರು ತಾಲೂಕಿನ ಯೋಜನಾಧಿಕಾರಿ ಶಶಿಧರ್, ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಕಾವ್ಯಶ್ರೀ ಹಾಗೂ ದೀಪ, ಎರಡು ತಾಲೂಕಿನ ಜ್ಞಾನವಿಕಾಸ ಕೇಂದ್ರಗಳ ಸಂಯೋಜಕೀಯರು ಉಪಸ್ಥಿತರಿದ್ದರು.