ಚನ್ನಗಿರಿ ಸಿಪಿಐ ದುರ್ವರ್ತನೆ ವಿರುದ್ಧ ಕ್ರಮ ಜರುಗಿಸಿ

| Published : Oct 16 2025, 02:00 AM IST

ಸಾರಾಂಶ

ಪೈಪ್‌ಲೈನ್‌ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಹೊನ್ನೇಮರದಹಳ್ಳಿ ಗ್ರಾಮಸ್ಥರಿಗೆ ಅಟ್ರಾಸಿಟಿ ಕೇಸ್ ದಾಖಲಿಸುವ ಬೆದರಿಕೆ ಹಾಕಿ, ಹೆಣ್ಣುಮಕ್ಕಳು ಸೇರಿದಂತೆ ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಿದ ಚನ್ನಗಿರಿ ವೃತ್ತ ನಿರೀಕ್ಷಕ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನೂರಾರು ಗ್ರಾಮಸ್ಥರು ಬುಧವಾರ ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟಿಸಿದ್ದಾರೆ.

- ನೀವು ಹೆಂಗಸರೇನ್ರೇ ಅಂತಾ ಹೊನ್ನೇಮರದಹಳ್ಳಿ ಹೆಣ್ಣುಮಕ್ಕಳಿಗೆ ಪ್ರಶ್ನಿಸಿ ಅವಮಾನ: ಸಿಪಿಐ ರವೀಶ್‌ ವಿರುದ್ಧ ಪ್ರತಿಭಟನೆ

- ಅವೈಜ್ಞಾನಿಕ ಕಾಮಗಾರಿ ತಡೆಯದೇ ಗ್ರಾಮಸ್ಥರ ಮೇಲೆಯೇ ದೌರ್ಜನ್ಯ । ಅಟ್ರಾಸಿಟಿ ಕೇಸ್‌ ಹಾಕುವ ಬೆದರಿಕೆ: ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪೈಪ್‌ಲೈನ್‌ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಹೊನ್ನೇಮರದಹಳ್ಳಿ ಗ್ರಾಮಸ್ಥರಿಗೆ ಅಟ್ರಾಸಿಟಿ ಕೇಸ್ ದಾಖಲಿಸುವ ಬೆದರಿಕೆ ಹಾಕಿ, ಹೆಣ್ಣುಮಕ್ಕಳು ಸೇರಿದಂತೆ ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಿದ ಚನ್ನಗಿರಿ ವೃತ್ತ ನಿರೀಕ್ಷಕ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನೂರಾರು ಗ್ರಾಮಸ್ಥರು ಬುಧವಾರ ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಚನ್ನಗಿರಿ ತಾಲೂಕಿನ ಹೊನ್ನೇಮರದಹಳ್ಳಿಯ ಮಹಿಳೆಯರು, ಯುವತಿಯರು, ಯುವಕರು, ಪುರುಷರು, ಹಿರಿಯ ನಾಗರೀಕರು ಹಲವು ವಾಹನಗಳಲ್ಲಿ ಬಂದು ಪ್ರತಿಭಟನೆ ನಡೆಸಿದರು. ಸಿಪಿಐ ರವೀಶ್ ವಿರುದ್ಧ ಘೋಷಣೆ ಕೂಗಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್‌ ಅವರಿಗೆ ಮನವಿ ಅರ್ಪಿಸಿ, ತಕ್ಷಣವೇ ಸೇವೆಯಿಂದ ವಜಾಗೊಳಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಮಹಿಳೆಯರು ಮಾತನಾಡಿ, ಹೊನ್ನೇಮರದಹಳ್ಳಿಯಿಂದ ಬೊಮ್ಮೆನಹಳ್ಳಿ ರಸ್ತೆ ಮಾರ್ಗದ ದೇವರ ಜಮೀನು ಬಳಿ ಮಳೆನೀರು ಹೋಗಲು ಪೈಪ್ ಲೈನ್ ಕಾಮಗಾರಿ ನಡೆದಿದೆ. ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಜೋರು ಮಳೆಯಾದರೆ ಗ್ರಾಮ ಮುಳುಗಡೆ ಆಗುವ ಅಪಾಯವಿದೆ. ಈ ಹಿನ್ನೆಲೆ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಅವೈಜ್ಞಾನಿಕ ಕಾಮಗಾರಿ ಇಲ್ಲಿ ಏಕೆ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದೆವು. ಆಗ ಕಾಮಗಾರಿ ಮಾಡುತ್ತಿದ್ದವರು ಗ್ರಾಪಂ ಪಿಡಿಒಗೆ ಕೇಳುವಂತೆ ಹೇಳಿದರೆಂದರು.

ಆದರೆ, ನುಗ್ಗೇಹಳ್ಳಿ ಗ್ರಾಪಂ ಪಿಡಿಒ ಕರೆ ಸ್ವೀಕರಿಸದ ಕಾರಣ ಪಿಡಿಒಗೆ ಕಾಮಗಾರಿ ಬಗ್ಗೆ ದೂರು ನೀಡಿದ್ದರೂ ಉತ್ತರ ನೀಡಿರಲಿಲ್ಲ. ಅನಂತರ ಕೆಲಸಗಾರರು ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಿ, ಪೈಪ್‌ಲೈನ್‌ ಹಾಕಿದ್ದಾರೆ. ಈ ಬಗ್ಗೆ ನುಗ್ಗೇಹಳ್ಳಿ ಪಿಡಿಒ ವಿರುದ್ಧ ನಾವು ಚನ್ನಗಿರಿ ಠಾಣೆಗೆ ದೂರು ನೀಡಿದ್ದೆವು. ಈ ಬಗ್ಗೆ ವಿಚಾರಣೆ ನಡೆಸಲು ಗ್ರಾಮಕ್ಕೆ ಭೇಟಿ ನೀಡಿದ್ದ ಚನ್ನಗಿರಿ ಠಾಣೆ ಅಧಿಕಾರಿಗಳು ಪಿಡಿಒಗೆ ಕರೆಸದೇ, ನಿರ್ಲಕ್ಷ್ಯ ತೋರಿದರು ಎಂದು ದೂರಿದರು.

ಗ್ರಾಮಸ್ಥರ ದೂರಿನ ಅನ್ವಯ ಠಾಣಾಧಿಕಾರಿ ತಾಪಂ ಇಇ, ತಹಸೀಲ್ದಾರ್‌ಗೆ ಪ್ರಕರಣ ವರ್ಗಾಯಿಸುವ ಭರವಸೆ ನೀಡಿದ್ದರು. ಇಲಾಖೆಯವರಿಗೆ ವಿಚಾರಿಸಿದರೆ ಸರಿಯಾಗಿ ಸ್ಪಂದಿಸಲಿಲ್ಲ. ಅ.14ರಂದು ಬೆಳಗ್ಗೆ 9 ಗಂಟೆ ವೇಳೆಗೆ ಸ್ಥಳದಲ್ಲಿ ಪೈಪ್‌ಪೈನ್ ಕಾಮಗಾರಿ ಮುಂದುವರಿಸಿದ್ದು, ಅವೈಜ್ಞಾನಿಕ ಕಾಮಗಾರಿ ಮಾಡದಂತೆ ಹೇಳಿ, ಮತ್ತೆ ಕ್ರಮ ಕೈಗೊಳ್ಳಲೆಂದು ಪೊಲೀಸರಿಗೆ ಕರೆ ಮಾಡಿದ್ದೆವು. ಬೀಟ್‌ ಪೊಲೀಸರು ಬಂದು ಅಹವಾಲು ಆಲಿಸಿದರು. ನಂತರ ವೃತ್ತ ನಿರೀಕ್ಷಕರು ನಿಮ್ಮ ಬಳಿ ಮಾತನಾಡಬೇಕೆಂದು ಫೋನ್ ಕೊಟ್ಟರು. ಆಗ ಕೆಲಸ ಮಾಡಲು ಬಿಡದಿದ್ದರೆ ಜಾತಿನಿಂದನೆ ಕೇಸ್ ಹಾಕಿಸಿ, ಒಳಗೆ ಹಾಕಿಸುತ್ತೇನೆ. ನಿಮ್ಮನ್ನೆಲ್ಲಾ ಎತ್ತಿ ಹಾಕಿಕೊಂಡು ಹೋಗುತ್ತೇನೆಂದು ಏಕವಚನದಲ್ಲಿ ಸಿಪಿಐ ರವೀಶ್‌ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಸಿಪಿಐ ವರ್ತನೆಯಿಂದ ಗ್ರಾಮಸ್ಥರು ಭೀತಿಗೊಂಡಿದ್ದಾರೆ. ಕೆಲ ಗಂಟೆಗಳಲ್ಲೇ ಮಫ್ತಿ (ಸಿವಿಲ್‌ ಡ್ರೆಸ್‌)ನಲ್ಲಿ ಸಿಪಿಐ ರವೀಶ ಇಲಾಖೆ ಜೀಪಿನಲ್ಲಿ ಸ್ಥಳಕ್ಕೆ ಬಂದು ಮತ್ತೆ ಬೆದರಿಸಿದ್ದಾರೆ. ಆಗ ಗ್ರಾಮದ ವೃದ್ಧರು, ಮಹಿಳೆಯರು ಜೀಪಿನ ಮುಂದೆ ಕುಳಿತು, ಅಟ್ರಾಸಿಟಿ ಕೇಸ್ ಹಾಕಲು ಕಾರಣವೇನು, ನಾವೇನು ತಪ್ಪು ಮಾಡಿದೆವು ಎಂದು ಪ್ರಶ್ನಿಸಿದ್ದರು. ಸಿಪಿಐ ರವೀಶ್ ಜೀಪಿನಿಂದ ಇಳಿಯದೇ, ನಮ್ಮ ಮೇಲೆಯೇ ಜೀಪು ಹರಿಸುವ ಬೆದರಿಕೆ ಹಾಕಿದ್ದಾರೆ ಎಂದು ಅವರು ಅಳಲು ತೋಡಿಕೊಂಡರು.

ಅನಂತರ ಜೀಪಿನಿಂದ ಏಕಾಏಕಿ ಇಳಿದು ಕೆಲ ಗ್ರಾಮಸ್ಥರ ಕೊರಳ ಪಟ್ಟಿಗೆ ಕೈಹಾಕಿ, ದರದರನೇ ಎಳೆದುಕೊಂಡು, ಜೀಪಿಗೆ ಹಾಕಿಕೊಂಡಿದ್ದಾರೆ. ಘಟನೆಯಲ್ಲಿ ವೃದ್ಧೆಯೊಬ್ಬರು ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಅದನ್ನೂ ಲೆಕ್ಕಿಸದೇ ಅಕ್ಕಪಕ್ಕದ ಜನರನ್ನು, ಬೈಕ್‌ಗಳನ್ನು ತಳ್ಳಿ ಯಾರ ಜೀವದ ಬಗ್ಗೆಯೂ ಲೆಕ್ಕಿಸದೇ ದೌರ್ಜನ್ಯ ಎಸಗಿದ ಸಿಪಿಐ ರವೀಶ ಸ್ಥಳದಲ್ಲಿದ್ದ ಗ್ರಾಮದ ಹೆಣ್ಣು ಮಕ್ಕಳನ್ನು ನೀವೆಲ್ಲಾ ಹೆಂಗಸರೇನ್ರೇ ಎಂಬುದಾಗಿಯೂ ಕೇಳಿ ಹೆಣ್ಣುಮಕ್ಕಳಿಗೆ ಅವಮಾನಿಸುವಂತೆ ವರ್ತಿಸಿದ್ದಾರೆ. ಅನಂತರ ಮತ್ತೆ 1 ಗಂಟೆ ವೇಳೆಗೆ ಸಮವಸ್ತ್ರ ಧರಿಸಿ ಬಂದ ಸಿಪಿಐ ರವೀಶ, ನೀವೆಲ್ಲಾ ಗಂಡಸರಾದರೆ ಈಗ ಬಂದು ರಸ್ತೆಗೆ ಕುಳಿತುಕೊಳ್ಳಿ ಎಂದು ಬೆದರಿಸಿದ್ದಾರೆ ಎಂದು ನೊಂದ ಗ್ರಾಮಸ್ಥರು ಅಳಲು ತೋಡಿಕೊಂಡರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಬಿ.ಆರ್.ನಾಗರಾಜ, ಎಲ್.ಎ.ಪ್ರಕಾಶ, ಎಲ್.ಎಸ್.ಲೋಹಿತ್‌, ಜಿ.ಎಂ.ಮಧು, ಆರ್.ಎಂ.ಸಂಜು, ಜಿ.ಎ.ಚೇತನ್‌, ಬಿ.ಜಿ.ಲೋಹಿತ್, ಆರ್.ಬಿ.ಸತೀಶ, ಎಚ್.ಎಸ್.ರವಿ ಸೇರಿದಂತೆ ಗ್ರಾಮದ ಮಹಿಳೆಯರು, ಯುವತಿಯರು, ಯುವಕರು, ಹಿರಿಯ ನಾಗರೀಕರು ಇದ್ದರು.

- - -

(ಬಾಕ್ಸ್‌) ಶ್ರೀಗಳ ನೇತೃತ್ವದ ಸಭೆಗೂ ಬಾರದ ಸಿಪಿಐ!

ಜವಾಬ್ದಾರಿಯುತ ಹುದ್ದೆಯಲ್ಲಿರುವ ವೃತ್ತ ನಿರೀಕ್ಷಕರ ಇಂತಹ ವರ್ತನೆಯಿಂದ ಭಯಗೊಂಡ ಗ್ರಾಮಸ್ಥರೆಲ್ಲ ತಮ್ಮ ಮನೆಗಳಿಗೆ ಹಿಂದಿರುಗಿದ್ದೆವು. ಅನಂತರ ಘಟನೆ ಬಗ್ಗೆ ಶ್ರೀ ಗುರುಬಸವ ಸ್ವಾಮೀಜಿ ಬಳಿ ಚರ್ಚಿಸಿದೆವು. ಸಮಾಜದಲ್ಲಿ ಇಂತಹ ಘಟನೆ ನಡೆಯಬಾರದೆಂದು ಅ.14ರಸಂಜೆ 5.30 ಗಂಟೆಗೆ ಗ್ರಾಮಸ್ಥರು, ಸಿಪಿಐ ರವೀಶ ಅವರನ್ನು ಒಳಗೊಂಡ ಸಭೆ ಕರೆದಿದ್ದರು. ಆದರೆ, ಸಿಪಿಐ ರವೀಶ್ ಸಭೆಗೆ ಗೈರಾಗಿದ್ದಾರೆ. ಸಿಪಿಐ ರವೀಶ್ ನಮ್ಮೆಲ್ಲರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅವರನ್ನು ಸೇವೆಯಿಂದ ವಜಾಗೊಳಿಸಿ, ಗ್ರಾಮಸ್ಥರಿಗೆ ರಕ್ಷಣೆ, ನ್ಯಾಯ ಒದಗಿಸುವಂತೆ ಮಹಿಳೆಯರು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಅವರಿಗೆ ಮನವಿ ಅರ್ಪಿಸಿದರು. ಈ ವೇಳೇ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ ಇದ್ದರು.

- - - -15ಕೆಡಿವಿಜಿ2:

ದಾವಣಗೆರೆ ಡಿಸಿ ಕಚೇರಿ ಮುಂಭಾಗ ಚನ್ನಗಿರಿ ತಾಲೂಕಿನ ಹೊನ್ನೇಮರನಹಳ್ಳಿ ಗ್ರಾಮದ ಮಹಿಳೆಯರು, ಗ್ರಾಮಸ್ಥರು ಎಸ್‌ಪಿ ಉಮಾ ಪ್ರಶಾಂತರ ಬಳಿ ಸಿಪಿಐ ರವೀಶ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟಿಸಿ, ಮನವಿ ಅರ್ಪಿಸಿದರು.