ಸಾರಾಂಶ
ಎಸ್ಪಿ ಎಚ್ಚರಿಕೆ, ಹರಪನಹಳ್ಳಿಯಲ್ಲಿ ಶಾಂತಿಸಭೆ
ಕನ್ನಡಪ್ರಭ ವಾರ್ತೆ ಹರಪನಹಳ್ಳಿಸಾಮಾಜಿಕ ಜಾಲತಾಣ ದುರ್ಬಳಕೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಎಚ್ಚರಿಸಿದ್ದಾರೆ.
ಅವರು ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಸಂಬಂಧ ಶಾಂತಿ ಸಭೆಯ ಅಧ್ಯಕ್ಷತೆ ಶುಕ್ರವಾರ ಮಾತನಾಡಿದರು. ಮದ್ಯಪಾನ ಮಾಡಿ ವಿಚಿತ್ರ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಾರೆ. ಈ ರೀತಿ ಮಾಡಿದರೆ ಕ್ರಮ ಖಂಡಿತ ಎಂದು ಅವರು ಹೇಳಿದರು. ಮೊಬೈಲ್ ಬಳಕೆ ಸಾಮಾಜಿಕ ಶಾಂತಿ ಕದಡಲು ಆಗಬಾರದು ಎಂದ ಅವರು, ವಿಜಯನಗರ ಜಿಲ್ಲೆಯಲ್ಲಿ ಕೇವಲ 850 ಪೊಲೀಸರು ಇದ್ದಾರೆ. ಆದ್ದರಿಂದ ಶಾಂತಿಪಾಲನೆ ಕೇವಲ ಪೊಲೀಸರದ್ದಲ್ಲ, ತಮ್ಮದೂ ಹೌದು ಎಂದು ಸಾರ್ವಜನಿಕರಿಗೆ ತಿಳಿಸಿದರು.ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾತನಾಡಿ, ತಾಲೂಕಿನಲ್ಲಿ 917 ಕಡೆ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಮ್ಮ ಸಿಬ್ಬಂದಿ ಕಡಿಮೆ ಇರುವುದರಿಂದ ತಾವೇ ಒಂದೊಂದು ಗಣೇಶಮೂರ್ತಿ ಬಳಿ 4 ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಯಾವುದೇ ಧರ್ಮಕ್ಕೆ ಚ್ಯುತಿ ಬರದಂತೆ ಪ್ಲೆಕ್ಸ್, ಬ್ಯಾನರ್‌ಗಳನ್ನು ಕಟ್ಟಬೇಕು. ರಾತ್ರಿ 10 ಗಂಟೆಯೊಳಗೆ ಎಲ್ಲ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಬೇಕು. ಮೆರವಣಿಗೆಯಲ್ಲಿ ಸಿನಿಮಾ ನಟರು ಸೇರಿದಂತೆ ಯಾರರ ಭಾವಚಿತ್ರಗಳನ್ನು ಕಟ್ಟಿಕೊಂಡು ಬೀಸಬಾರದು. ಒಟ್ಟಿನಲ್ಲಿ ಕಾನೂನು ಉಲ್ಲಂಘಿಸಿದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ತಿಳಿಸಿದರು.ತಹಸೀಲ್ದಾರ್ ಬಿ.ವಿ. ಗಿರೀಶಬಾಬು ಮಾತನಾಡಿ, ನಮ್ಮ ಸಂಸ್ಕಾರ, ಸಂಸ್ಕೃತಿ ಉಳಿಸಿಕೊಂಡು ಹಬ್ಬ ಆಚರಿಸಬೇಕು. ಯಾವುದೇ ಅಹಿತಕರ ಘಟನೆಯಾಗದಂತೆ ಹಬ್ಬ ಆಚರಿಸಿ ಎಂದು ಹೇಳಿದರು.
ತಾಪಂ ಇಒ ಚಂದ್ರಶೇಖರ ಮಾತನಾಡಿ, ಗ್ರಾಪಂಗೆ ತೆರಿಗೆ ಪಾವತಿಸಿ ನಿಗದಿತ ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್, ಫ್ಲೆಕ್ಸ್ ಹಾಕಿಕೊಳ್ಳಿ ಎಂದು ಸಲಹೆ ನೀಡಿದರು.ಪುರಸಭಾ ಮುಖ್ಯಾಧಿಕಾರಿ ರೇಣುಕಾ ಎಸ್. ದೇಸಾಯಿ ಮಾತನಾಡಿ, ಷರತ್ತಿಗೆ ಒಳಪಡಿಸಿ ಗಣೇಶಮೂರ್ತಿ ಸ್ಛಾಪನೆಗೆ ಅನುಮತಿ ನೀಡುತ್ತೇವೆ ಎಂದರು.
ವಿಶ್ವ ಹಿಂದೂ ಪರಿಷತ್ ಪ್ರಮುಖ ಎಚ್.ಎಂ. ಜಗದೀಶ ಮಾತನಾಡಿ, ಪಟ್ಟಣದಲ್ಲಿ ವಿಎಚ್‌ಪಿ, ಬಜರಂಗದಳದ ವತಿಯಿಂದ 11 ದಿವಸ ಗಣೇಶ ಮೂರ್ತಿ ಕೂರಿಸಲಾಗುತ್ತದೆ. ಹೊಸಪೇಟೆ ರಸ್ತೆಯಲ್ಲಿ ಲೈಟಿಂಗ್ ಹಾಕಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಕೋರಿದರು.ಅರಸೀಕೆರೆ ಸಲಾಂ ಸಾಹೇಬ್ ಮಾತನಾಡಿ, ಅನ್ಯಧರ್ಮೀಯರನ್ನು ಗೌರವಿಸಿದರೆ ನಮ್ಮ ಧರ್ಮಕ್ಕೆ ಗೌರವ ಬರುತ್ತದೆ. ನಮ್ಮ ಹಬ್ಬದಲ್ಲಿ ನೀವು, ನಿಮ್ಮ ಹಬ್ಬದಲ್ಲಿ ನಾವು ಪಾಲ್ಗೊಂಡು ಶಾಂತಿ, ಸಂಭ್ರಮದಿಂದ ಹಬ್ಬಗಳನ್ನು ಆಚರಿಸಿ ಸಮಾಜಕ್ಕೆ ಉತ್ತಮ ಸಂದೇಶ ಕೊಡೋಣ ಎಂದು ನುಡಿದರು.
ಅಂಜುಮನ್ ಮಾಜಿ ಅಧ್ಯಕ್ಷ ಎಂ. ಜಾವೇದ್ ಮಾತನಾಡಿ, ಗುಂಪುಗಾರಿಕೆ ಬಿಟ್ಟು, ಪ್ರೀತಿ-ವಿಶ್ವಾಸದಿಂದ ಹಬ್ಬ ಆಚರಿಸೋಣ ಎಂದರು. ಕುಂಚೂರು ಇಬ್ರಾಹಿಂ ಮಾತನಾಡಿದರು.ಸಿಪಿಐ ಮಹಾಂತೇಶ ಸಜ್ಜನ್, ವಿವಿಧ ಠಾಣೆಗಳ ಪಿಎಸ್‌ಐಗಳಾದ ಶಂಭುಲಿಂಗ ಹಿರೇಮಠ, ಕಿರಣ್ ಕುಮಾರ, ವಿಜಯಕೃಷ್ಣ, ನಾಗರತ್ನಮ್ಮ, ಅಗ್ನಿಶಾಮಕದಳದ ಅಧಿಕಾರಿ ನರಸಪ್ಪ ಉಪಸ್ಥಿತರಿದ್ದರು.