ಸಾರಾಂಶ
₹3.71 ಕೋಟಿ ಮೊತ್ತದ ಆಶ್ರಯ ಬಡಾವಣೆಗೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಪಟ್ಟಣ ಪಂಚಾಯಿತಿಯಿಂದ ಆಶ್ರಯ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಬಡಾವಣೆ ನಿರ್ಮಿಸಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಹಕ್ಕುಪತ್ರ ನೀಡಿ ಮನೆ ಮಂಜೂರು ಮಾಡಿಸಿಕೊಡಲಾಗುವುದು ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ಶನಿವಾರ ಪಟ್ಟಣದ ಹಿಳುವಳ್ಳಿ ಗ್ರಾಮದ 5 ಎಕರೆ ಜಮೀನಿನಲ್ಲಿ ₹3.71. ಕೋಟಿ ಮೊತ್ತದಲ್ಲಿ ಆಶ್ರಯ ಬಡಾವಣೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಬಡಾವಣೆ ನಿರ್ಮಾಣಕ್ಕೆಈ ಹಿಂದೆಯೇ ಟೆಂಡರ್ ಆಗಿತ್ತು. ಕಾಮಗಾರಿ ಕೈಗೊಳ್ಳುವುದು ವಿಳಂಬವಾಗಿ ವೆಚ್ಚವೂ ಹೆಚ್ಚಾಗಿದ್ದರಿಂದ ಸರ್ಕಾದಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.ರಸ್ತೆ, ಚರಂಡಿ, ಕುಡಿಯುವ ನೀರಿನ ಟ್ಯಾಂಕ್ , ವಿದ್ಯುತ್ ದೀಪ ಅಳವಡಿಕೆಯಂತಹ ಮೂಲ ಸೌಲಭ್ಯಗಳನ್ನು ಬಡಾವಣೆಯಲ್ಲಿ ನಿರ್ಮಿಸಿ ನಿವೇಶನ ಗುರುತಿಸಿ ಆಯ್ಕೆಯಾದ ಫಲಾನುಭವಿಗಳಿಗೆ ಚೀಟಿ ಎತ್ತುವ ಮೂಲಕ ನಿವೇಶನ ಹಂಚಲಾಗುವುದು. ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪೌರ ಕಾರ್ಮಿಕರು, ಪರಿಶಿಷ್ಟಜಾತಿ- ಪಂಗಡ, ಅಂಗವಿ ಕಲರು, ವಿಧವೆ, ವಿಧುರರು, ಹಿರಿಯ ನಾಗರಿಕರು ಹಾಗೂ ನಿವೇಶನ ರಹಿತರಿಗೆ ಆದ್ಯತೆ ನೀಡಲಾಗಿದೆ. ಹಿಂದೆ ಡಿ.ಬಿ. ಚಂದ್ರೇಗೌಡರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ರಾಜೀವ್ ನಗರ ಬಡಾವಣೆಯಲ್ಲಿ 103 ನಿವೇಶನಗಳನ್ನು ನೀಡ ಲಾಗಿತ್ತು. ಅದನ್ನು ಬಿಟ್ಟರೆ ಪ್ರಸ್ತುತ 158 ಜನರಿಗೆ ನಿವೇಶನ ಹಂಚಲಾಗುತ್ತಿದೆ. ಪಟ್ಟಣದ ಎಲ್ಲಾ ನಿವೇಶನ ರಹಿತರಿಗೂ ನಿವೇಶನ ನೀಡಲು ಪ್ರಯತ್ನಿಸಲಾಗುವುದು ಎಂದರು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮಾತನಾಡಿ, 158 ಜನ ನಿವೇಶನ ನೀಡುತ್ತಿ ರುವುದು ಪುಣ್ಯದ ಕೆಲಸ. ಈ ಬಡಾವಣೆ ನಿರ್ಮಾಣ ಮಾಡಲು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಶ್ರಮ ತಂಬಾ ಇದೆ ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಆಶ್ರಯ ಬಡಾವಣೆಗೆ ₹3.71.ಕೋಟಿ ಅನುದಾನ ಬಿಡುಗಡೆ ಮಾಡಿಸಿರುವುದು ಇತಿಹಾಸ. ಕೆಲವು ವರ್ಷಗಳ ಹಿಂದೆ ಡಿ.ಬಿ.ಚಂದ್ರೇಗೌಡರು ಶಾಸಕ ರಾಗಿದ್ದಾಗ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಿವೇಶನ ಹಂಚಲಾಗಿತ್ತು. ಆ ನಂತರ ಯಾರು ನಿವೇಶನ ಹಂಚಿರಲಿಲ್ಲ. ಹಿಳುವಳ್ಳಿ ಗ್ರಾಮದ ಗ್ರಾಮಠಾಣಾ ಪ್ರದೇಶದ 5 ಎಕರೆ ಜಮೀನಿನಲ್ಲಿ 158 ಫಲಾನುಭವಿಗಳಿಗೆ ನಿವೇಶನ ನೀಡಲು ಶಾಸಕರು ಕಳೆದ ಅವಧಿಯಲ್ಲಿ ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಿ ಈ ಬಡಾವಣೆಗೆ ಇಂದಿರಾಗಾಂಧಿ ಬಡಾವಣೆ ಎಂದು ನಾಮಕರಣ ಮಾಡಲಾಗಿತ್ತು ಎಂದರು.ಹಿಂದಿನ ಸರ್ಕಾರದ ಅವಧಿಯಲ್ಲಿ ವಸತಿ ಸಚಿವರಾಗಿದ್ದ ವಿ.ಸೋಮಣ್ಣ ಬಡಾವಣೆ ನಿರ್ಮಾಣಕ್ಕೆ ₹3.31. ಕೋಟಿ ಅನುದಾನ ನೀಡಿದ್ದರು. ಟೆಂಡರ್ ಕರೆಯಲು ವಿಳಂಬವಾಗಿದ್ದರಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಾಸಕರು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಸಹಕಾರದಿಂದ ವಸತಿ ಸಚಿವ ಜಮೀರ್ ಅಹಮ್ಮದ್ ಅವರ ಮೂಲಕ ₹50 ಲಕ್ಷ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿ ಬಡಾವಣೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಜುಬೇದಾ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಮನೆ ಇಲ್ಲದವರನ್ನು ಮಾತ್ರ ಆಯ್ಕೆ ಮಾಡ ಲಾಗಿದೆ. ಮುಂದಿನ ದಿನಗಳಲ್ಲಿ ಹೊಸದಾಗಿ ನಿವೇಶನ ಗುರುತಿಸಿ ಮನೆಯಿಲ್ಲದವರಿಗೆ ಮನೆ ನೀಡಲಾಗುವುದು ಎಂದರು. ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿದರು.ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾಕೇಶವ್, ಸದಸ್ಯರಾದ ಆರ್.ಕುಮಾರಸ್ವಾಮಿ, ಮುನಾವರಪಾಷ, ಸೈಯದ್ ವಸೀಂ, ಮುಕುಂದ, ರಜಿ, ಸುಬ್ರಹ್ಮಣ್ಯ, ಆಶ್ರಯ ಸಮಿತಿ ಸದಸ್ಯರಾದ ಸಮಿತ್ರಾ, ಸುರೇಶ್ ಶೆಟ್ಟಿ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಇದ್ದರು.