ಸಾರಾಂಶ
ಕಾರ್ಖಾನೆ ಯಂತ್ರೋಪಕರಣಗಳನ್ನು ದುರಸ್ತಿ ಮಾಡಿ ಆಧುನಿಕರಣಗೊಳಿಸಿ ಕಬ್ಬು ಅರೆಯುವ ಸಾಮರ್ಥ್ಯವನ್ನು ಹೆಚ್ಚಳ ಮಾಡಲಾಗುವುದು. ಮುಂದಿನ ಸಾಲಿನಿಂದ 6 ರಿಂದ 7 ಲಕ್ಷ ಟನ್ ಕಬ್ಬು ಅರೆಯುವ ಗುರಿ ಇರುವುದರಿಂದ ಪ್ರಸಕ್ತ ಸಾಲಿನಲ್ಲಿ ಒಪ್ಪಿಗೆ ಕಬ್ಬನ್ನು ಅರೆದು ನಾನ್ ಒಪ್ಪಿಗೆ ಕಬ್ಬನ್ನು ಮಾತ್ರ ಅರೆಯುವುದನ್ನು ನಿಲ್ಲಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಮೈಷುಗರ್ ಕಾರ್ಖಾನೆ ಒಪ್ಪಿಗೆ ಮಾಡಿಕೊಂಡಿದ್ದ 2 ಲಕ್ಷ ಟನ್ ಕಬ್ಬನ್ನು ಅರೆದಿದ್ದು, ಉಳಿದ ಕಬ್ಬನ್ನು ಜಿಲ್ಲೆಯ ಬೇರೆ ಕಾರ್ಖಾನೆಗಳಿಗೆ ಸಾಗಿಸಲು ಕ್ರಮ ಕೈಗೊಳ್ಳುವುದಾಗಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್ ಬುಧವಾರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಷುಗರ್ ಕಾರ್ಖಾನೆಯಲ್ಲಿ ಯಂತ್ರೋಪಕರಣಗಳು ಸರಿ ಇಲ್ಲ. ಕಾರ್ಖಾನೆ ಬಂದ್ ಆಗಲಿದೆ ಎಂದು ಮಾಧ್ಯಮಗಳ ಅಪಪ್ರಚಾರ ಕುರಿತಂತೆ ಸ್ಪಷ್ಟಪಡಿಸಿದರು.ಕಾರ್ಖಾನೆ ಯಂತ್ರೋಪಕರಣಗಳನ್ನು ದುರಸ್ತಿ ಮಾಡಿ ಆಧುನಿಕರಣಗೊಳಿಸಿ ಕಬ್ಬು ಅರೆಯುವ ಸಾಮರ್ಥ್ಯವನ್ನು ಹೆಚ್ಚಳ ಮಾಡಲಾಗುವುದು. ಮುಂದಿನ ಸಾಲಿನಿಂದ 6 ರಿಂದ 7 ಲಕ್ಷ ಟನ್ ಕಬ್ಬು ಅರೆಯುವ ಗುರಿ ಇರುವುದರಿಂದ ಪ್ರಸಕ್ತ ಸಾಲಿನಲ್ಲಿ ಒಪ್ಪಿಗೆ ಕಬ್ಬನ್ನು ಅರೆದು ನಾನ್ ಒಪ್ಪಿಗೆ ಕಬ್ಬನ್ನು ಮಾತ್ರ ಅರೆಯುವುದನ್ನು ನಿಲ್ಲಿಸಲಾಗಿದೆ ಎಂದರು.
ಕಾರ್ಖಾನೆಯಲ್ಲಿ ಮುಂದಿನ ಸಾಲಿನಿಂದ ಎಥೆನಾಲ್ ಘಟಕ, ಮದ್ಯಸಾರ ಘಟಕ ಪ್ರಾರಂಭದ ಜೊತೆಗೆ ಕೂಲಿ ಕಾರ್ಮಿಕರ ಅಭಾವದಿಂದ ಈ ಸಾಲಿನಲ್ಲಿ ನಾನ್ ಒಪ್ಪಿಗೆ ಕಬ್ಬನ್ನು ಅರೆಯುವುದನ್ನು ನಿಲ್ಲಿಸಲಾಗಿದೆ ಎಂದರು.ಸಚಿವ ಎನ್.ಚಲುವರಾಯಸ್ವಾಮಿ ಅವರ ಮಧ್ಯಪ್ರವೇಶದಿಂದಾಗಿ ಮೈಷುಗರ್ ಕಾರ್ಖಾನೆಯಲ್ಲಿ ಅರೆಯಬೇಕಾಗಿದ್ದ ಬಾಕಿ ಕಬ್ಬನ್ನು ಜಿಲ್ಲೆಯ ಬೇರೆ ಕಾರ್ಖಾನೆಗಳಿಗೆ ಸಾಗಿಸಿ ಅರೆಯುವ ವ್ಯವಸ್ಥೆ ಮಾಡಲಾಗುವುದು. ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದರು.
ಈ ಹಿಂದೆ ಮೈಷುಗರ್ ಅವಸಾನದ ಅಂಚಿನಲ್ಲಿತ್ತು. ಮತ್ತೆ ಕಾರ್ಖಾನೆಯನ್ನು ಹಿಂದಿನ ಗತವೈಭವಕ್ಕೆ ತರಬೇಕೆಂಬ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಶಾಸಕರುಗಳು ಮತ್ತು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವಿರತ ಪ್ರಯತ್ನದಿಂದಾಗಿ ಕಾರ್ಖಾನೆ ಮತ್ತೆ ಪುನರಾರಂಭಗೊಂಡಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜ ಹಳ್ಳಿ ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಎಸ್ ಸಿ.ಎಸ್.ಟಿ ವಿಭಾಗದ ಜಿಲ್ಲಾ ಉಪಾಧ್ಯಕ್ಷ ನಾಗಭೂಷಣ್, ಕಿಸಾನ್ ಕಾಂಗ್ರೆಸ್ ತಾಲೂಕು ಘಟಕದ ಉಪಾಧ್ಯಕ್ಷ ನಾಗೇಶ್ ಇದ್ದರು.