ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಇನ್ನೇನು ಹೊಸ ವರ್ಷ ಸಮೀಪಿಸುತ್ತಿದೆ. ಈ ವೇಳೆ ಆಚರಿಸುವ ಸಂಭ್ರಮಕ್ಕೆ ಗಾಂಜಾ ದಂಧೆಕೋರರು ತಮ್ಮ ವ್ಯವಹಾರ ನಡೆಸುವ ಕಳ್ಳ ಮಾರ್ಗವನ್ನು ಹಿಡಿದಿರುವಾಗಲೇ ಪೊಲೀಸರ ಅವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ದೇಶಾದ್ಯಂತ ಸಂಭ್ರಮದಿಂದ ಆಚರಣೆ ಮಾಡುವ ಹೊಸ ವರ್ಷಾಚರಣೆ ವೇಳೆ ಗಾಂಜಾ ಅಮಲು ಪಸರಿಸುವ ದುಷ್ಕರ್ಮಿಗಳ ಯೋಜನೆಯನ್ನೇ ಪೊಲೀಸರು ತಲೆಕೆಳಗೆ ಮಾಡಿದ್ದಾರೆ. ಆದರೆ, ಗಾಂಜಾ ಘಾಟು ಗುಮ್ಮಟ ನಗರಿ ವ್ಯಾಪಿಸಿದ್ದು ಮಾತ್ರ ಆಶ್ಚರ್ಯ ತಂದಿದೆ.
ವಿಜಯಪುರ ಜಿಲ್ಲೆಯಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಸಿಇಎನ್ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಮೂಲಕ ದೊಡ್ಡ ಗ್ಯಾಂಗ್‌ನ್ನೇ ಸೆರೆ ಹಿಡಿದಿದ್ದಾರೆ. ವಿಜಯಪುರಕ್ಕೆ ಗಾಂಜಾ ಪ್ಯಾಕೆಟ್ ಪಾರ್ಸಲ್ ಮಾಡಲು ಬಂದವರು ಲಾಕ್ ಆಗಿದ್ದು, ಇದೀಗ ಜಿಲ್ಲೆಯಲ್ಲಿ ಗಾಂಜಾ ಗಮ್ಮತ್ತು ದೊಡ್ಡ ಸದ್ದು ಮಾಡುತ್ತಿದೆ.ದುಷ್ಕರ್ಮಿಗಳು ಗಾಂಜಾ ಡೀಲ್‌ಗೆ ಸಿಸಿ ಕ್ಯಾಮೆರಾ ಇಲ್ಲದ ಹೊರ ವಲಯಗಳನ್ನು ಆಯ್ಕೆ ಮಾಡುತ್ತಿದ್ದರು. ಬಳಿಕ ಎರಡು ಕಾರುಗಳ ಮೂಲಕ ಖದೀಮರು ಗಾಂಜಾ ಪ್ಯಾಕೆಟ್ ಡೆಲಿವರಿಗೆ ಬರುತ್ತಿದ್ದರು. ಈ ವ್ಯವಹಾರಕ್ಕೂ ಮೊದಲು ಒಂದು ಕಾರಿನಲ್ಲಿ ಬಂದು ಡೀಲ್ ನಡೆಯುವ ಸ್ಥಳ ಪರಿಶೀಲನೆ ಮಾಡಿಕೊಳ್ಳುತ್ತಿದ್ದರು. ಆಮೇಲೆ ಮತ್ತೊಂದು ಕಾರಿನಲ್ಲಿ ಗಾಂಜಾ ಪ್ಯಾಕೇಟ್‌ಗಳನ್ನು ತಂದು ಡೀಲ್ ಕುದುರಿಸುತ್ತಿದ್ದರು ಎಂದು ಮೂಲಗಳು ಹೇಳಿವೆ.
ಎಲ್ಲೆಲ್ಲಿತ್ತು ಪ್ಲಾನಿಂಗ್?:ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿಗೂ ಈ ಖದೀಮರು ಗಾಂಜಾ ಪ್ಯಾಕೆಟ್ ಪಾರ್ಸಲ್ ಹಂಚುತ್ತಿದ್ದರು ಎನ್ನಲಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ ₹ 22 ಲಕ್ಷ ಮೌಲ್ಯದ 46 ಕೆಜಿ ಹೈ ಕ್ವಾಲಿಟಿ ಗಾಂಜಾ ಹಾಗೂ ₹ 8 ಲಕ್ಷ ಮೌಲ್ಯದ ಎರಡು ವಾಹನಗಳು ಸೇರಿ ಒಟ್ಟು ₹ 30 ಲಕ್ಷ ಮೌಲ್ಯದ ವಸ್ತುಗಳನ್ನು ಸಿಇಎನ್ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಮೂಲತಃ ಓರಿಸ್ಸಾ ರಾಜ್ಯದಲ್ಲಿ ಗಾಂಜಾ ಖರೀದಿಸಿ ಅಲ್ಲಿ 2 ಕೆಜಿಯ ಪ್ಯಾಕೆಟ್‌ಗಳನ್ನು ತಯಾರಿ ಮಾಡಿಕೊಂಡು ತೆಲಂಗಾಣದ ಮೂಲಕ ವಿಜಯಪುರಕ್ಕೆ ಡೆಲಿವರಿ ಕೊಡಲು ಪಾರ್ಸಲ್ ರೀತಿಯಲ್ಲೇ ಪ್ಯಾಕ್ ಮಾಡಿಕೊಂಡು ಬಂದಿದ್ದ ವೇಳೆ ಈ ಕಳ್ಳ ಮಾಲನ್ನು ಜಪ್ತಿ ಮಾಡಲಾಗಿದೆ.
ಗ್ರಾಹಕರ ಸೋಗಿನಲ್ಲೇ ರೇಡ್:ಹೋಲ್‌ಸೆಲ್ ದರದಲ್ಲಿ ಗಾಂಜಾ ಮಾರಾಟಕ್ಕೆ ಟೀಂ ಮಾಡಿಕೊಂಡು ಬಂದಿದ್ದ ಖದೀಮರನ್ನು ಟ್ರ್ಯಾಕ್ ಮಾಡಿದ ಪೊಲೀಸರು, ಗಾಂಜಾ ಖರೀದಿದಾರರ ಸೋಗಿನಲ್ಲಿ ಹೋಗಿ ಮೂವರನ್ನು ಬಂಧಿಸಿದ್ದಾರೆ. ತೆಲಂಗಾಣ ಮೂಲದ ಸಂತೋಷ ರಾಠೋಡ ಹಾಗೂ ಮಹಾರಾಷ್ಟ್ರದ ಮುಂಬೈ ಮೂಲದ ಸಂಜು ಆಡೆ, ಕಲಬುರಗಿಯ ಸಂತೋಷ ರಾಠೋಡ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಸಿಇಎನ್ ಠಾಣೆ ಡಿವೈಎಸ್‌ಪಿ ಸುನೀಲ ಕಾಂಬಳೆ, ಸಿಪಿಐ ರಮೇಶ ಅವಜಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
------------ಕೋಟ್
ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಗಾಂಜಾ ಜಾಡು ಹಿಡಿದ ನಮ್ಮ ಸಿಇಎನ್ ಠಾಣೆ ಪೊಲೀಸರು ಸಿಂದಗಿ ಬೈಪಾಸ್ ಬಳಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಈ ಜಾಲದ ಹಿಂದೆ ಇನ್ನೂ ಯಾರ್‍ಯಾರು ಇದ್ದಾರೆ ಎಂಬುದರ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ