ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಡೈರಿ ವಲಯದಲ್ಲಿ ನಾವಿನ್ಯತೆ, ಸಹಯೋಗ ಹಾಗೂ ಪ್ರಗತಿ ಉತ್ತೇಜಿಸಲು ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ನೀಡುವ 2024ರ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಯು ಸಮೀಪದ ಬಿಸನಾಳ ಗ್ರಾಮದ ಬಿಸನಾಳ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ದೊರೆತಿದೆ.ರಾಷ್ಟ್ರೀಯ ಹಾಲು ದಿನಾಚರಣೆ ಅಂಗವಾಗಿ ನ.25ರಂದು ನವದೆಹಲಿಯ ಝೋರಾವರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಪಶು ಸಂಗೋಪನಾ ಇಲಾಖೆ ಸಚಿವ ರಾಜೀವ ರಂಜನ್ ಸಿಂಗ್ ಪ್ರಶಸ್ತಿ ಪ್ರಧಾನ ಮಾಡಿದರು. ಅತ್ಯುತ್ತಮ ಡೈರಿ ಸಹಕಾರ ಸಂಘದ ವಿಭಾಗದಲ್ಲಿ ಬಿಸನಾಳ ಸಂಘಕ್ಕೆ ಪ್ರಥಮ ಸ್ಥಾನ ದೊರೆತಿದ್ದು ಪ್ರಶಸ್ತಿ ಜೊತೆ ₹5 ಲಕ್ಷಗಳ ನಗದು ಬಹುಮಾನ ತನ್ನದಾಗಿಸಿಕೊಂಡಿದೆ.
ಸಮಾರಂಭದಲ್ಲಿ ಗುಜರಾತ ಪಶುಸಂಗೋಪನಾ ಇಲಾಖೆ ಸಚಿವ ಕುರಿಯನ್, ವಿಜಯಪುರ ಬಾಗಲಕೋಟೆ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಐ.ಎಸ್.ಕರಿಗೌಡರ, ವ್ಯವಸ್ಥಾಪಕ ನಿರ್ದೇಶಕ ಡಿ.ಟಿ.ಶಿವಶಂಕರಸ್ವಾಮಿ, ವ್ಯವಸ್ಥಾಪಕ ಡಾ.ಗಜರಾಜ ರಣತೂರ, ಬಿಸನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ವಾಲಿ, ಕಾರ್ಯದರ್ಶಿ ಗಿರಿಮಲ್ಲಪ್ಪ ಸುಳ್ಳನವರ ಇತರರಿದ್ದರು.ಬಿಸನಾಳ ಹಾಲು ಉತ್ಪಾದಕರ ಸಂಘದ ವಿವರ
100 ಜನ ಸದಸ್ಯರಿಂದ 1993ರಲ್ಲಿ ಪ್ರತಿದಿನ 10 ಲೀ. ಹಾಲು ಶೇಖರಣೆಯೊಂದಿಗೆ ಪ್ರಾರಂಭವಾದ ಡೈರಿ ಈಗ ಪ್ರತಿದಿನ 2200 ಲೀ. ಹಾಲು ಸಂಗ್ರಹಣೆ ಮಾಡುತ್ತಿದೆ. ಸುಮಾರು 200ಕ್ಕೂ ಅಧಿಕ ಜನ ಸದಸ್ಯರಿದ್ದು, ದಾನಿ ಮಹಾದೇವ ಚಿನಗುಂಡಿ ಉಚಿತವಾಗಿ ನೀಡಿದ ಜಾಗದಲ್ಲಿ 2016ರ ಅಗಸ್ಟ್ 8ರಂದು ₹16.90 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡಕ್ಕೆ ಸಂಘ ಸ್ಥಳಾಂತರಗೊಂಡಿದೆ.ವಿಜಯಪುರ-ಬಾಗಲಕೋಟ ಜಿಲ್ಲಾ ಒಕ್ಕೂಟದಿಂದ 5 ಸಾವಿರ ಲೀ. ಸಾಮರ್ಥ್ಯದ ಶೀತಲೀಕರಣ ಘಟಕ ಹೊಂದಿದೆ. ತಮ್ಮಲ್ಲಿಯ 2200 ಲೀ. ಹಾಲು ಸಂಗ್ರಹಣೆ ಜೊತೆಗೆ ಕೆಸರಗೊಪ್ಪ, ಸೈದಾಪೂರ, ಸಹಕಾರಿ ಸಂಘಗಳಿಂದ 2300 ಲೀ. ಗಿಂತಲೂ ಹೆಚ್ಚು ಹಾಲು ಸಂಗ್ರಹಣೆ ಮಾಡಲಾಗುತ್ತಿದೆ.
ಬಿಸನಾಳ ಸಂಘವು ಹಾಲು ಸಂಗ್ರಹಣೆ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲಿ ತೊಡಗಿದೆ. ಕೋವಿಡ್ ಸಮಯದಲ್ಲಿ ಹಾಲು ಉತ್ಪಾದಕ ಸದಸ್ಯರಿಗೆ ಪ್ರತಿ ಲೀ. ಹಾಲಿಗೆ ₹1ನ್ನು ಪ್ರೋತ್ಸಾಹ ಧನದಂತೆ 1 ಲಕ್ಷ 53 ಸಾವಿರ ರು. ನೀಡಿದೆ. ಹಾಲು ಉತ್ಪಾದಕರಿಗೆ ಸಂಘದಿಂದ 1 ಲಕ್ಷ 29 ಸಾವಿರ ರು. ವೆಚ್ಚದಲ್ಲಿ ಸ್ಟೀಲ್ ಕ್ಯಾನ್ ವಿತರಿಸಿದ್ದಲ್ಲದೆ ಆಶಾ ಕಾರ್ಯಕರ್ತೆಯರಿಗೂ ಗೌರವ ಧನ ನೀಡಿ ತನ್ನ ಸಾಮಾಜಿಕ ಕಾಳಜಿ ಮೆರೆದಿದೆ.ವಿಜಯಪುರ- ಬಾಗಲಕೋಟೆ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ.ಶಿವಶಂಕರಸ್ವಾಮಿ, ವ್ಯವಸ್ಥಾಪಕ ಡಾ.ಗಜರಾಜ ರಣತೂರ, ಜಮಖಂಡಿ ವಿಭಾಗದ ಮುಖ್ಯಸ್ಥ ಆರ್.ಎಸ್.ಚವ್ಹಾಣ, ವಿಸ್ತರಣಾಧಿಕಾರಿ ಎಸ್.ಎಸ್.ಶೆಟ್ಟೆನವರ ಸಹಕಾರ ಮತ್ತು ಮಾರ್ಗದರ್ಶನ ನಮ್ಮ ಸಂಘದ ಪ್ರಗತಿಗೆ ಪ್ರೇರಣೆ
ಶಿವಲಿಂಗಪ್ಪ ವಾಲಿ, ಬಿಸನಾಳ ಸಂಘದ ಅಧ್ಯಕ್ಷ