ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಮೆಕ್ಕಜೋಳ ಉತ್ಪನ್ನದ ವಹಿವಾಟಿನ ಆಧಾರದ ಮೇಲೆ ರೈತರಿಗೆ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಮೆಕ್ಕಜೋಳ ಉತ್ಪನ್ನದ ವಹಿವಾಟಿನ ಆಧಾರದ ಮೇಲೆ ರೈತರಿಗೆ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.ನಗರದಲ್ಲಿ ಬುಧವಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಮೆಕ್ಕಜೋಳ ಉತ್ಪನ್ನದ ಧಾರಣೆಗೆ ನಿಯಂತ್ರಿತ ಮಾರುಕಟ್ಟೆಗಳಲ್ಲಿ ಆಗುವ ವಹಿವಾಟಿನ ಆಧಾರದ ಮೇಲೆ ರೈತರಿಗೆ ವ್ಯತ್ಯಾಸದ ಮೊತ್ತವನ್ನು ಪಾವತಿಸುವ ಸಂಬಂಧ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ, ಮೆಕ್ಕೆಜೋಳ ವಿಸ್ತೀರ್ಣವು 12,8647 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು 643235 ಮೆಟ್ರಿಕ್ ಟನ್ ಇಳುವರಿ ನಿರೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಮೆಕ್ಕಜೋಳ ಉತ್ಪನ್ನದ ಧಾರಣೆಯ ಸರಾಸರಿ ದರಕ್ಕಿಂತ ಕಡಿಮೆ ದರಗಳಲ್ಲಿ ವಹಿವಾಟು ನಡೆಯುತ್ತಿರುವುದರಿಂದ ಮೆಕ್ಕಜೋಳ ನೋಂದಣಿ ಕಾರ್ಯವನ್ನು ಪಿಡಿಪಿಎಸ್ ಯೋಜನೆಯಡಿ ದಾವಣಗೆರೆ, ಚನ್ನಗಿರಿ, ಹರಿಹರ, ಹೊನ್ನಾಳಿ ಮತ್ತು ಜಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅನುಷ್ಠಾನಗೊಳಿಸಲು ಸೂಚಿಸಿದರು.ಜಿಲ್ಲೆಯಲ್ಲಿ, ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಯು.ಎಂ.ಪಿ ವೇದಿಕೆಯ ಮೂಲಕ ಗರಿಷ್ಠ 2.38 ಲಕ್ಷ ಕ್ವಿಂಟಾಲ್ ವಹಿವಾಟು ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಪ್ರತಿ ಕ್ವಿಂಟಲ್‌ಗೆ 1900 ರು. ದರದಲ್ಲಿ ವಹಿವಾಟು ಆಗುತ್ತಿರುವುದನ್ನು ಪರಿಗಣಿಸಿ ಮಾರುಕಟ್ಟೆ ಮಧ್ಯಪ್ರವೇಶ ದರ ಪ್ರತಿ ಕ್ವಿಂಟಲ್‌ಗೆ ಗರಿಷ್ಠ 2150 ರು. ನಿಗದಿಪಡಿಸಿದೆ. ನಿಗದಿಪಡಿಸಿರುವ ಮಧ್ಯಪ್ರವೇಶ ದರ 2150 ರು. ದರಕ್ಕಿಂತ ಕಡಿಮೆ ದರ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತವನ್ನು ಪಾವತಿಸಲಾಗುವುದು. ಅಥವಾ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾದಲ್ಲಿ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಪ್ರೂಟ್ ತಂತ್ರಾಂಶದಲ್ಲಿ ಲಭ್ಯವಾಗುವ ಜಮೀನಿನ ವಿಸ್ತೀರ್ಣಕ್ಕೆ ರೈತರಿಂದ ಪ್ರತಿ ಎಕರೆಗೆ 12 ಕ್ವಿಂಟಲ್‌ಗಳಂತೆ ಗರಿಷ್ಠ 50 ಕ್ವಿಂಟಲ್ ಮಾತ್ರ ಪರಿಗಣಿಸಲಾಗುವುದು ತಿಳಿಸಿದರು.
ಎಥೆನಾಲ್ ಉತ್ಪಾದನೆಗಾಗಿ ಕುಕ್ಕುಟ ಮತ್ತು ಪಶು ಆಹಾರ ತಯಾರಿಕಾ ಘಟಕಗಳಿಗೆ ಹಾಗೂ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಕ್ಕೆ ಅವಶ್ಯವಿರುವ ಮೆಕ್ಕೆಜೋಳ ಪೂರೈಕೆ ಮಾಡಿರುವ ರೈತರಿಗೆ ಈ ಯೋಜನೆಯು ಅನ್ವಯಿಸದಂತೆ ತಂತ್ರಾಂಶದಲ್ಲಿ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಮೆಕ್ಕೆಜೋಳದ ಗುಣಮಟ್ಟದ ಪರೀಕ್ಷೆಯನ್ನು ಕೈಗೊಳ್ಳಲು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ತಾಂತ್ರಿಕ ಅಧಿಕಾರಿಗಳು ದೃಢೀಕರಿಸಲು ಅನುವಾಗುವಂತೆ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಪ್ರತಿದಿನ ಮೆಕ್ಕೆಜೋಳ ನೋಂದಣಿ ಮಾಡಿಸಲು ಮಾರುಕಟ್ಟೆಗೆ ಬರುವ ರೈತರಿಗೆ ಸಂಬಂಧಿಸಿದಂತೆ ಇರುವ ಎಫ್.ಐ.ಡಿ ಗಳನ್ನು ಓರೆ ಪರಿಶೀಲನೆ ನಡೆಸಿ ದೃಢೀಕರಿಸಿಬೇಕು. ಎನ್‌ಇಎಂಎಲ್ ಸಂಸ್ಥೆಯ ನಿಯಮಾನುಸಾರ ಸೇವೆಯನ್ನು ಪಡೆದು ಸದರಿ ತಂತ್ರಾಂಶದ ಮೂಲಕ ರೈತರ ನೋಂದಣಿ ಕಾರ್ಯವನ್ನು ಬಯೋಮೆಟ್ರಿಕ್ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತೆರೆಯುವ ಕೇಂದ್ರಗಳಲ್ಲಿ ಮಾತ್ರ ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.
ಈ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ಲೋಪದೋಷಗಳು, ದುರುಪಯೋಗ, ವ್ಯತ್ಯಾಸ ಆಗದ ರೀತಿಯಲ್ಲಿ ಮತ್ತು ಮೇಲ್ವಿಚಾರಣೆ ನಡೆಸಲು ದಾವಣಗೆರೆ, ಹರಿಹರ, ಜಗಳೂರು ವ್ಯಾಪ್ತಿಗೆ ದಾವಣಗೆರೆ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಹೊನ್ನಾಳಿ, ಚನ್ನಗಿರಿ ಮತ್ತು ನ್ಯಾಮತಿ ವ್ಯಾಪ್ತಿಗೆ ಹೊನ್ನಾಳಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೊದಲಾದ ಇಲಾಖೆಗಳ ಸದಸ್ಯರ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದರು.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇದ್ದರು.