ಶೀಘ್ರ ಸವಿತಾ ಸಮುದಾಯ ಭವನ ನಿರ್ಮಿಸಲು ಕ್ರಮ: ನಗರಸಭೆ ಅಧ್ಯಕ್ಷ ಎ. ಗಜೇಂದ್ರ

| Published : Feb 12 2025, 12:30 AM IST

ಶೀಘ್ರ ಸವಿತಾ ಸಮುದಾಯ ಭವನ ನಿರ್ಮಿಸಲು ಕ್ರಮ: ನಗರಸಭೆ ಅಧ್ಯಕ್ಷ ಎ. ಗಜೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ ಅಕ್ಷರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಆರ್. ಗಜೇಂದ್ರ ಅವರು ಶ್ರೀ ಸವಿತಾ ಮಹರ್ಷಿಯವರ ಜೀವನ ಚರಿತ್ರೆ ಹಾಗೂ ಅವರ ವಿಚಾರಧಾರೆಗಳ ಬಗ್ಗೆ ಉಪನ್ಯಾಸ ನೀಡಿದರು. ಈ ವೇಳೆ ಸಮುದಾಯದ ಮುಖಂಡರಿಗೆ ಸನ್ಮಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸವಿತಾ ಸಮಾಜದ ಶೈಕ್ಷಣಿಕ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಿಸಲು ಸಂಸದರ ನಿಧಿಯಿಂದ ಅನುದಾನ ಪಡೆದು ಶೀಘ್ರದಲ್ಲೇ ಕ್ರಮ ವಹಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಎ. ಗಜೇಂದ್ರ ತಿಳಿಸಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀದೇವಿ ಪ್ಯಾಲೇಸ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿಯ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಸವಿತಾ ಮಹರ್ಷಿಯವರ ತತ್ವಾದರ್ಶಗಳನ್ನು ನಾವೆಲ್ಲರೂ ಅರಿತು ಅನುಸರಿಸಬೇಕು. ಜೊತೆಗೆ ಇಂದಿನ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು. ಆ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಸವಿತಾ ಸಮಾಜವು ಶೈಕ್ಷಣಿಕವಾಗಿ ಇನ್ನಷ್ಟು ಮುಂದೆ ಬರಬೇಕು. ಆ ಹಿನ್ನೆಲೆಯಲ್ಲಿ ಒಂದು ಸಮುದಾಯ ಭವನದ ಅವಶ್ಯಕತೆ ಇದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಸಂಸದರ ನಿಧಿಯಿಂದ ಅನುದಾನ ಪಡೆದು ನಿರ್ಮಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ಮಾತನಾಡಿ, ಸವಿತಾ ಮಹರ್ಷಿಯವರ ಕೊಡುಗೆ ಅಪಾರವಾದದ್ದು, ಸಂಗೀತ ಕ್ಷೇತ್ರ ಹಾಗೂ ಸೌಂದರ್ಯ ವರ್ಧಕ ಕ್ಷೇತ್ರದಲ್ಲಿ ಸವಿತಾ ಸಮುದಾಯದವರ ಕೊಡುಗೆ ಅಮೂಲ್ಯವಾದದ್ದು, ಇಂದಿಗೂ ಪ್ರಖ್ಯಾತಿಯನ್ನು ಪಡೆದಿರುವ ಗಾಯಿತ್ರಿ ಮಂತ್ರದ ರಚನೆಯಲ್ಲಿ ಸವಿತಾ ಮಹರ್ಷಿಗಳ ಪಾತ್ರವಿದೆ. ಅಂತಹ ಮಹಾನ್ ಸಾಧಕರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಕ್ಷರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಆರ್. ಗಜೇಂದ್ರ ಅವರು ಶ್ರೀ ಸವಿತಾ ಮಹರ್ಷಿಯವರ ಜೀವನ ಚರಿತ್ರೆ ಹಾಗೂ ಅವರ ವಿಚಾರಧಾರೆಗಳ ಬಗ್ಗೆ ಉಪನ್ಯಾಸ ನೀಡಿದರು. ಈ ವೇಳೆ ಸಮುದಾಯದ ಮುಖಂಡರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ನಗರಸಭೆ ಸದಸ್ಯ ಯತೀಶ್, ಸಮುದಾಯದ ಮುಖಂಡರಾದ ನಟ ಮತ್ತು ರಾಜ್, ಎಸ್.ರಾಘವೇಂದ್ರ, ಲಕ್ಷ್ಮೀ, ನಟರಾಜ್, ಮುನಿನರಸಪ್ಪ, ಮುರಳಿ, ಹರೀಶ್, , ಸ್ಥಳೀಯ ಜನಪ್ರತಿನಿಧಿಗಳು, ಸಮುದಾಯದ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸವಿತಾ ಮಹರ್ಷಿ ಅವರ ಭಾವಚಿತ್ರದೊಂದಿಗೆ ಪಲ್ಲಕ್ಕಿ ಮೆರವಣಿಗೆಯು ಕಲಾತಂಡದೊಂದಿಗೆ ನಗರದ ಮರಳುಸಿದ್ಧೇಶ್ವರ ದೇವಾಲಯದ ಮುಂಭಾಗದಿಂದ ಆರಂಭಗೊಂಡು ಬಿ.ಬಿ ರಸ್ತೆಯ ಮೂಲಕ ವೇದಿಕೆ ಸೇರಿತು.