ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಸ್ಮಶಾನಕ್ಕಿರುವ ದಾರಿಯ ಸಮಸ್ಯೆ ಸ್ಥಳಕ್ಕೆ ಗುರುವಾರ ತಹಸೀಲ್ದಾರ್ ಚೈತ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ, ಹನೂರು
ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಸ್ಮಶಾನಕ್ಕಿರುವ ದಾರಿಯ ಸಮಸ್ಯೆ ಸ್ಥಳಕ್ಕೆ ಗುರುವಾರ ತಹಸೀಲ್ದಾರ್ ಚೈತ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಾಲೂಕಿನ ಬೈರನತ್ತ ಹಾಗೂ ಪಳನೆಮೇಡು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿರುವ ಸ್ಮಶಾನದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿದರು. ತಲತಲಾಂತರದಿಂದ ನಾವು ಇಲ್ಲಿರುವ ಸ್ಮಶಾನದಲ್ಲಿ ನಾವು ನಮ್ಮ ಪೂರ್ವಜರನ್ನು ಕೂಡುತ್ತಾ ಬರುತ್ತಿದ್ದೇವೆ. ಆದರೆ ಕೆಲವು ತಿಂಗಳುಗಳಿಂದ ಇಲ್ಲಿನ ಸವರ್ಣೀಯರು ದಾರಿಯನ್ನೇ ಒತ್ತುವರಿ ಮಾಡಿಕೊಂಡು ಸ್ಮಶಾನಕ್ಕೆ ತಿರುಗಾಡಲು ಸಹ ರಸ್ತೆ ಇಲ್ಲದ ಹಾಗೆ ಮಾಡಿರುತ್ತಾರೆ. ಈ ಬಗ್ಗೆ ನಾವು ಈಗಾಗಲೇ ತಮ್ಮ ಗಮನಕ್ಕೂ ಸಹ ತಂದಿದ್ದು ಆದಷ್ಟು ಬೇಗ ರಸ್ತೆ ಬಿಡಿಸಿ ಕೊಡಬೇಕೆಂದು ಬೈರನತ್ತ ಗ್ರಾಮಸ್ಥರು ತಹಸೀಲ್ದಾರ್ ಚೈತ್ರರನ್ನು ಒತ್ತಾಯಿಸಿದರು. ಬೈರನತ್ತ ಗ್ರಾಮದ ಪರಿಶಿಷ್ಟ ಜಾತಿ ಜನಾಂಗದ ಸ್ಮಶಾನವು ಡಿಎಂ ಸಮುದ್ರ ಗ್ರಾಮದ ಸರ್ವೆ ನಂಬರ್ 75ರಲ್ಲಿ 1996- 97ರಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಮಂಜೂರಾಗಿದೆ. 40 ವರ್ಷಗಳಿಂದ ರೂಢಿಗತವಾಗಿ ನಾವು ಸ್ಮಶಾನವನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಆದರೆ ಇದೀಗ ಏಕಾಏಕಿ ಸವರ್ಣೀಯರು ದಾರಿಯನ್ನು ಒತ್ತುವರಿ ಮಾಡಿಕೊಂಡಿದ್ದು ಸ್ಮಶಾನಕ್ಕೆ ರಸ್ತೆಯ ಜಾಗವೇ ಇಲ್ಲದಂತಾಗಿದೆ. ಇದರ ಪರಿಣಾಮ ನಮ್ಮ ಪರಿಶಿಷ್ಟ ಜಾತಿ ಜನಾಂಗದ ಸಮುದಾಯದ ಜನರು ಮೃತಪಟ್ಟಂತ ಸಂದರ್ಭದಲ್ಲಿ ಸಾಕಷ್ಟು ಸಂಕಟ ಅನುಭವಿಸಿದಂತಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹ ಮಾಡಿದ್ದಾರೆ.ಹಳ್ಳವನ್ನೇ ಒತ್ತುವರಿ ಮಾಡಿಕೊಂಡರೆ?:
ತಾಲೂಕಿನ ಪಳನಿ ಮೇಡು ಗ್ರಾಮದಲ್ಲಿ ಸ್ಮಶಾನದ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ಮಾಡಿಕೊಂಡಿರುವ ಹಳ್ಳವನ್ನು ಮೊದಲು ಬಿಡಿಸಬೇಕು. ಜೊತೆಗೆ ಒತ್ತುವರಿಯಾಗಿರುವ ಹಳ್ಳವನ್ನು ಬಿಡಿಸಿದ ನಂತರ ಸ್ಮಶಾನಕ್ಕೆ ಜಾಗ ಬಿಡಿಸಿಕೊಡಿ ಎಂದು ಮನವಿ ಮಾಡಿದರು. ತಹಸೀಲ್ದಾರ್ ಚೈತ್ರ ಮಾತನಾಡಿ, ಬೈರನತ್ತ ಹಾಗೂ ಪಳನಿಮೇಡು ಗ್ರಾಮಗಳಲ್ಲಿ ಸ್ಮಶಾನಕ್ಕೆ ಮಂಜೂರಾಗಿರುವ ಜಾಗವನ್ನು ಹಾಗೂ ಪ್ರಸ್ತುತ ತೊಂದರೆ ಆಗಿರುವ ದಾರಿಯ ರಸ್ತೆಯನ್ನು ಪರಿಶೀಲನೆ ನಡೆಸಲಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ತುರ್ತು ಕ್ರಮ ವಹಿಸುತ್ತೇವೆ, ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳಿಂದ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್, ಹಾಗೂ ಗೌರವಾಧ್ಯಕ್ಷ ರಾಜಣ್ಣ, ಹಾಗೂ ಪಳನಿಮೇಡು ಮತ್ತು ಬೈರನತ್ತ ಗ್ರಾಮಸ್ಥರು ಇದ್ದರು.