ಶೃಂಗೇರಿಗೆ ರೈಲ್ವೆ ಸಂಪರ್ಕ ಕಲ್ಪಿಸಲು ಕ್ರಮ: ವಿ.ಸೋಮಣ್ಣ

| Published : Aug 17 2024, 12:45 AM IST

ಶೃಂಗೇರಿಗೆ ರೈಲ್ವೆ ಸಂಪರ್ಕ ಕಲ್ಪಿಸಲು ಕ್ರಮ: ವಿ.ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಶ್ರೀ ಶಾರದಾಂಬೆಯ ದರ್ಶನ ಪಡೆದರು.

ಕನ್ನಡಪ್ರಭವಾರ್ತೆ ಶೃಂಗೇರಿ

ಶೃಂಗೇರಿ ಪ್ರಮುಖ ಯಾತ್ರಾ ಸ್ಥಳವಾಗಿರುವುದರಿಂದ ಇಲ್ಲಿಗೆ ರೈಲ್ವೆ ಸಂಪರ್ಕ ಆರಂಭಿಸುವ ಬಗ್ಗೆ ಹಿಂದಿನಿಂದಲೂ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಹಿಂದಿನ ಕಡತಗಳನ್ನು ಪರಿಶೀಲಿಸಿ ಸರ್ವೇ ನಡೆಸಿ ಕಾಮಗಾರಿ ಆರಂಭಿಸುವ ಬಗ್ಗೆ ಶೀಘ್ರ ಚಿಂತನೆ ನಡೆಸಲಾಗುವುದು ಎಂದು ರೈಲ್ವೆ ಸಚಿವ ವಿ.ಸೋಮಣ್ಣ ಹೇಳಿದರು.

ಶುಕ್ರವಾರ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಶೃಂಗೇರಿಗೆ ರೈಲು ಸಂಪರ್ಕದ ಬಗ್ಗೆ ಮೊದಲು ಪ್ರಸ್ತಾಪ ಮಾಡಿ ಭರವಸೆ ನೀಡಿದ್ದರು. ಕೆ.ಎಚ್. ಮುನಿಯಪ್ಪ ಅವರು ಶೃಂಗೇರಿ - ಬಿರೂರು ರೈಲ್ವೇ ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರು. ಈಗ ನಿಮ್ಮ ಅವಧಿಯಲ್ಲಿ ಕಾಮಗಾರಿ ಆರಂಭಿಸಿ ಶೃಂಗೇರಿಗೆ ರೈಲು ಸಂಪರ್ಕ ಕಲ್ಪಿಸುವ ಕೆಲಸ ಮಾಡುವ ಯೋಜನೆ ಇದೆಯಾ ಎಂದು ಕನ್ನಡಪ್ರಭ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಶೃಂಗೇರಿಯ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್. ಜೀವರಾಜ್, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಶಿವಮೊಗ್ಗ - ಬೀರೂರು ಮಾರ್ಗವಾಗಿ ಶೃಂಗೇರಿಗೆ ರೈಲ್ವೆ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಪತ್ರ ಬರೆದಿದ್ದಾರೆ. ನಾನು ಶೀಘ್ರ ಈ ಬಗ್ಗೆ ಹಿಂದಿನ ಅವಧಿಯಲ್ಲಿನ ಎಲ್ಲಾ ಕಡತ ಪರಿಶೀಲಿಸುತ್ತೇನೆ. ನನ್ನ ಅವಧಿಯಲ್ಲಿ ಶೃಂಗೇರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ದೇವರಿಗೆ ವಿಶೇಷ ಪೂಜೆ :

ನನಗೆ ಶೃಂಗೇರಿ ಪೀಠದ ಬಗ್ಗೆ, ಜಗದ್ಗುರುಗಳ ಬಗ್ಗೆ ಅಪಾರ ಭಕ್ತಿ ಇದೆ. ಶ್ರೀ ಶಾರದಾಂಬೆಯ ದರ್ಶನ ಪಡೆಯಲು, ಜಗದ್ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯಕ್ಕೂ ಭೇಟಿ ನೀಡಿ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲು ಬಂದಿದ್ದೇನೆ ಎಂದು ತಿಳಿಸಿದ ಅವರು, ಶ್ರೀ ಶಾರದಾಂಬಾ ದೇವಾಲಯಕ್ಕೆ ತೆರಳಿ ಶ್ರೀ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀ ಶಂಕರಾಚಾರ್ಯ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು. ಶ್ರೀ ತೋರಣಗಣಪತಿ ಸನ್ನಿಧಿ ಎದುರು ಈಡುಗಾಯಿ ಒಡೆದರು. ನಂತರ ಶ್ರೀ ವಿದ್ಯಾಶಂಕರ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು. ನಂತರ ಶ್ರೀ ಮಠದ ನರಸಿಂಹವನದ ಶ್ರೀ ಗುರುಭವನದಲ್ಲಿ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು ಹಾಗೂ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್, ಶಾಸಕ ಟಿ.ಡಿ.ರಾಜೇಗೌಡ ಮತ್ತಿತರರು ಇದ್ದರು.