ಚನ್ನಪಟ್ಟಣ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಕ್ರಮ

| Published : Jan 04 2025, 12:30 AM IST

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಪೈಪ್‌ಲೈನ್ ಇಲ್ಲದ ಕೆರೆಗಳಿಗೆ ಹೊಸದಾಗಿ ಪೈಪ್‌ಲೈನ್ ಮಾಡಿ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಚನ್ನಪಟ್ಟಣ: ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಪೈಪ್‌ಲೈನ್ ಇಲ್ಲದ ಕೆರೆಗಳಿಗೆ ಹೊಸದಾಗಿ ಪೈಪ್‌ಲೈನ್ ಮಾಡಿ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲೂಕಿನ ವಾಲೆತೋಪು ಗ್ರಾಮದ ಹತ್ತಿರ ಚೆಕ್ ಡ್ಯಾಂ ಬಳಿ ಅಳವಡಿಸಿರುವ ಪೈಪ್‌ಲೈನ್‌ಗೆ ಪೂಜೆ ಸಲ್ಲಿಸಿ ಹೊಡಿಕೆಹೊಸಹಳ್ಳಿ ಹಾಗೂ ಎಸ್.ಎಂ.ಹಳ್ಳಿ ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಜಿಲ್ಲೆಯವರೇ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನೀರಾವರಿ ಸಚಿವರಾಗಿದ್ದು, ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ವರ್ಷದ ಅಂತ್ಯಕ್ಕೆ ನಮ್ಮ ತಾಲೂಕಿನಲ್ಲಿ ಉಳಿಕೆ ಇರುವ ಎಲ್ಲಾ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಬಹುತೇಕ ಎಲ್ಲಾ ಕೆರೆಗಳಿಗೆ ನೀರಾವರಿ ಪೈಪ್‌ಲೈನ್ ಸಂಪರ್ಕವನ್ನು ಪೂರ್ಣಗೊಳಿಸಿ ಶಾಶ್ವತವಾಗಿ ನೀರಾವರಿ ಯೋಜನೆಯನ್ನು ಕಲ್ಪಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರಾವರಿ ಇಲಾಖೆಯ ಕಣ್ವ ಯೋಜನಾ ವಿಭಾಗದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈ ಹಿಂದೆ ಅಂತರ್ಜಲ ವೃದ್ಧಿ ಮಾಡುವ ಉದ್ದೇಶದಿಂದ ಗುರುತ್ವಾಕರ್ಷಣೆ ಮೂಲಕ ಕೆಳಗಿನ ಕೆರೆಗಳಿಗೆ ನೀರು ತುಂಬಿಸಲಾಗಿತ್ತು. ಆದರೆ ನೀರಿನ ಅಭಾವ ಹಾಗೂ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಎಂಬ ಜನರ ಒತ್ತಾಯದ ಮೇರೆಗೆ ಸಾಕಷ್ಟು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ತಾಲೂಕಿನ ಕೂಡ್ಲೂರು ಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿ ಕೋಡಿ ಹೊಡೆದು, ಆ ನೀರೆಲ್ಲಾ ಹೊಡಿಕೆಹೊಸಹಳ್ಳಿ ಹಾಗೂ ಎಸ್.ಎಂ.ಹಳ್ಳಿ ಕೆರೆಗಳಿಗೆ ಹೋಗುತ್ತಿತ್ತು. ಇದರಿಂದ ಆ ಭಾಗದ ಕೆರೆಗಳನ್ನು ತುಂಬಿಸಲು ವಿಳಂಬದ ಜೊತೆಗೆ ಕೂಡ್ಲೂರು ಕೆರೆಯ ತಡೆಗೋಡೆ ಅಪಾಯದ ಸ್ಥಿತಿಯಲ್ಲಿದ್ದು, ತಡೆಗೋಡೆ ದುರಸ್ತಿ ಮಾಡಬೇಕಾಗಿದೆ. ಸದ್ಯಕ್ಕೆ ಬೇರೆ ಮಾರ್ಗದಿಂದ ಹೊಡಿಕೆಹೊಸಹಳ್ಳಿ ಹಾಗೂ ಎಸ್.ಎಂ.ಹಳ್ಳಿ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಮುಂದಾಗಿದ್ದು, ಕಾವೇರಿ ನೀರಾವರಿ ಇಂಜಿನಿಯರ್‌ಗಳು ಈಗಾಗಲೇ ನೀರು ತುಂಬಿಸುವ ಕಾರ್ಯಕ್ಕೆ ಎಲ್ಲಾ ರೀತಿಯಲ್ಲಿ ತಯಾರಿ ಮಾಡಿಕೊಂಡಿದ್ದಾರೆ. ಈ ಮೇಲಿನ ಎರಡು ಕೆರೆಗಳಿಗೆ ವಾಲೆತೋಪಿನ ಚೆಕ್‌ಡ್ಯಾಂನಿಂದ ನಾಲೆಯ ಮೂಲಕ ನೀರು ಹರಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ತಾಲೂಕಿನ ಅಕ್ಕೂರು ಕೆರೆಗೂ ಕೂಡ ಇದೇ ರೀತಿಯಲ್ಲಿ ಸಮಸ್ಯೆ ಎದುರಾಗಿದ್ದು, ಆ ಭಾಗದ ಕೆರೆಗಳಿಗೂ ಬೇರೆ ರೀತಿಯಲ್ಲಿ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗುವುದು. ತಾಲೂಕಿನಲ್ಲಿ ನೂರಾರು ದೊಡ್ಡ ದೊಡ್ಡ ಕೆರೆಗಳಿದ್ದು, ಅವುಗಳಲ್ಲಿ ಕೆಲ ಕೆರೆಗಳು ಅಪಾಯ ಸ್ಥಿತಿಯಲ್ಲಿರುವ ಕಾರಣ ಅವುಗಳು ಸುರಕ್ಷತೆ ಬಗ್ಗೆ ಸಹ ಗಮನ ಹರಿಸಲಾಗುತ್ತಿದೆ. ಜತೆಗೆ ಕೆರೆಗಳ ಆಧುನಿಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಇ.ಇ.ಮೋಹನ್‌ಕುಮಾರ್, ಎಇ ಸುರೇಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ಪ್ರಮೋದ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಂಗನಾಥ್, ಧ್ರುವಕುಮಾರ್, ಧನಂಜಯ, ಗುಂಡಣ್ಣ, ವಾಲೇತೋಪು ಆನಂದ್, ನೀಲಸಂದ್ರ ಸದಾನಂದ, ಹೊಡಿಕೆ ಹೊಸಹಳ್ಳಿ ಎಚ್.ವಿ.ನಂಜೇಗೌಡ, ವಕೀಲ ಹನುಮಂತೇಗೌಡ ಪ್ರಸನ್ನ, ಶಿವು ಇತರರು ಉಪಸ್ಥಿತರಿದ್ದರು.

ಪೊಟೊ೩ಸಿಪಿಟಿ೨: ಚನ್ನಪಟ್ಟಣ ತಾಲೂಕಿನ ವಾಲೆತೋಪು ಸಮೀಪದ ಚೆಕ್ ಡ್ಯಾಂ ಬಳಿ ಅಳವಡಿಸಿರುವ ಪೈಪ್‌ಲೈನ್‌ಗೆ ಪೂಜೆ ಸಲ್ಲಿಸಿ ಹೊಡಿಕೆಹೊಸಹಳ್ಳಿ ಹಾಗೂ ಎಸ್.ಎಂ.ಹಳ್ಳಿ ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಯೋಗೇಶ್ವರ್ ಚಾಲನೆ ನೀಡಿದರು.