ಅರ್ಹ ರೈತರಿಂದ ಸ್ಥಳದಲ್ಲಿಯೇ ದಾಖಲೆ ಪಡೆದು, ಅರ್ಜಿ ಪರಿಶೀಲನೆ ಹಾಗೂ ಸಾಲ ಮಂಜೂರಾತಿ ಪ್ರಕ್ರಿಯೆ ತ್ವರಿತಗೊಳಿಸಿ ಕಡಿಮೆ ಅವಧಿಯಲ್ಲಿ ಸಾಲ ವಿತರಿಸಬೇಕು

ಕೊಪ್ಪಳ: ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದ್ದು, ಇಳುವರಿ ಕುಸಿಯುವ ಸಾಧ್ಯತೆ ಇರುವ ಹಿನ್ನೆಲೆ ಜಿಲ್ಲೆಯ ಯಾವುದೇ ಅರ್ಹ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯಡಿ ಬೆಳೆ ಸಾಲ ಸೌಲಭ್ಯದಿಂದ ವಂಚಿತರಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಬೆಳೆ ಸಾಲದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಸಿಸಿ ಸಾಲ ಪಡೆಯದ ರೈತರನ್ನು ಗ್ರಾಮಮಟ್ಟದಲ್ಲಿ ಗುರುತಿಸಿ, ಕೃಷಿ ಇಲಾಖೆ ಹಾಗೂ ಬ್ಯಾಂಕ್‌ಗಳ ಸಹಯೋಗದಲ್ಲಿ ವಿಶೇಷ ನೋಂದಣಿ ಮತ್ತು ಸಾಲ ಮಂಜೂರಾತಿ ಶಿಬಿರ ಆಯೋಜಿಸುವಂತೆ ಸೂಚಿಸಿದರು.

ಅರ್ಹ ರೈತರಿಂದ ಸ್ಥಳದಲ್ಲಿಯೇ ದಾಖಲೆ ಪಡೆದು, ಅರ್ಜಿ ಪರಿಶೀಲನೆ ಹಾಗೂ ಸಾಲ ಮಂಜೂರಾತಿ ಪ್ರಕ್ರಿಯೆ ತ್ವರಿತಗೊಳಿಸಿ ಕಡಿಮೆ ಅವಧಿಯಲ್ಲಿ ಸಾಲ ವಿತರಿಸಬೇಕು. ಕೆಸಿಸಿ ಯೋಜನೆಯ ಪ್ರಯೋಜನ, ಸಾಲದ ಮಿತಿ ಹಾಗೂ ಮರುಪಾವತಿ ಸೌಲಭ್ಯಗಳ ಕುರಿತು ರೈತರಿಗೆ ವ್ಯಾಪಕ ಅರಿವು ಮೂಡಿಸಬೇಕು ಎಂದರು.

ಬೆಳೆಗಾರರ ಜತೆಗೆ ಪಶುಪಾಲನೆ, ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ ಹಾಗೂ ಮೀನುಗಾರಿಕೆಯಲ್ಲಿ ತೊಡಗಿರುವ ಅರ್ಹರಿಗೂ ಕೆಸಿಸಿ ಯೋಜನೆಯಡಿ ಆದ್ಯತೆಯ ಮೇರೆಗೆ ಸಾಲ ಸೌಲಭ್ಯ ಕಲ್ಪಿಸಬೇಕು. ವಿವಿಧ ಇಲಾಖೆ ಹಾಗೂ ಬ್ಯಾಂಕುಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ರೈತರಿಗೆ ಸಮಯೋಚಿತ ಆರ್ಥಿಕ ನೆರವು ತಲುಪಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಜೆ.ಡಿ.ಕೃಷ್ಣಮೂರ್ತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಮಲ್ಲಯ್ಯ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಾರುತಿ ಸೇರಿದಂತೆ ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ರಾಷ್ಟ್ರೀಕೃತ, ಪ್ರಾದೇಶಿಕ ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್‌ ವ್ಯವಸ್ಥಾಪಕರು ಉಪಸ್ಥಿತರಿದ್ದರು.