ವಿಶ್ವಕರ್ಮ ಸಮುದಾಯದ ಬೇಡಿಕೆ ಈಡೇರಿಕೆಗೆ ಕ್ರಮ-ಶಾಸಕ ಲಮಾಣಿ

| Published : Oct 01 2024, 01:33 AM IST

ಸಾರಾಂಶ

ವಿಶ್ವಕರ್ಮ ಸಮುದಾಯಕ್ಕೆ ವಿಶೇಷವಾದ ಆದ್ಯತೆ ನೀಡಲಾಗಿದ್ದು, ಈಗಾಗಲೇ ಸಮುದಾಯದ ಬೇಡಿಕೆಯಂತೆ ಅವಶ್ಯಕವಿರುವ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ: ವಿಶ್ವಕರ್ಮ ಸಮುದಾಯಕ್ಕೆ ವಿಶೇಷವಾದ ಆದ್ಯತೆ ನೀಡಲಾಗಿದ್ದು, ಈಗಾಗಲೇ ಸಮುದಾಯದ ಬೇಡಿಕೆಯಂತೆ ಅವಶ್ಯಕವಿರುವ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು. ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಸಮುದಾಯ ಹಾವೇರಿ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ವಿಶ್ವಕರ್ಮ ಗುರುಗಳ ಆಶೀರ್ವಾದದಿಂದ ನಾನು ಸಮಾಜದಲ್ಲಿ ಒಂದು ಮಹತ್ವದ ಸ್ಥಾನವನ್ನು ಪಡೆದುಕೊಂಡಿದ್ದೇನೆ. ಅದಕ್ಕೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ. ಸಮಾಜದ ಏಳಿಗೆ ಹಾಗೂ ಬೆಳವಣಿಗೆಗೆ ಸದಾ ಶ್ರಮಿಸುವುದಾಗಿ ಹೇಳಿದರು. ಬ್ಯಾಡಗಿ ಶಾಸಕ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಮಾತನಾಡಿ, ಕೇವಲ ಸಮುದಾಯಕ್ಕೆ ಸೀಮಿತವಾಗಿರುವ ವೃತ್ತಿಗಳಲ್ಲಿ ತೊಡಗಿಕೊಳ್ಳದೆ ಉನ್ನತ ಶಿಕ್ಷಣ ಪಡೆದುಕೊಂಡು ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವಂತಾಗಬೇಕು. ವಿಶ್ವಕರ್ಮ ಎಂದರೆ ಬ್ರಹ್ಮ ಎಂದರ್ಥ, ಇಡೀ ಮನುಕುಲವನ್ನು ನಿರ್ಮಾಣ ಮಾಡಿರುವ ಬ್ರಹ್ಮ ಮನುಕುಲದ ಹುಟ್ಟನ್ನು ಕೇವಲ ಒಂದೇ ಸಮುದಾಯ, ಜಾತಿ ಹಾಗೂ ಧರ್ಮಕ್ಕೆ ಸೀಮಿತಗೊಳಿಸಲಿಲ್ಲ, ಮನುಕುಲದ ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಇವೆರಡರ ನಡುವೆ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಮನುಷ್ಯತ್ವವನ್ನು ಇಟ್ಟುಕೊಂಡು ನಾವು ಕೆಲಸ ಕಾರ್ಯಗಳನ್ನು ಮಾಡಿದರೆ ಮಾತ್ರ ಸಮಾಜದಲ್ಲಿ ಒಂದು ಬೆಲೆ ಸಿಗುತ್ತದೆ ಎಂದರು. ಸಮಾಜದಲ್ಲಿರುವ ಎಲ್ಲ ಸಮುದಾಯಗಳು ಸಂಘಟಿತರಾಗಿ ಸಮಾಜದ ಏಳಿಗೆಯ ಸದುದ್ದೇಶದಿಂದ ಸರ್ಕಾರ ಇಂತಹ ಜಯಂತಿಗಳನ್ನು ಆಚರಿಸಲಾಗುತ್ತದೆ ಎಂದರು.ಕಾಳಹಸ್ತೇಂದ್ರ ಸ್ವಾಮೀಜಿ, ಸೂರ್ಯನಾರಾಯಣ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರ‍್ರಾಧಿಕಾರದ ಅಧ್ಯಕ್ಷ ಎಂ.ಎಂ. ಹಿರೇಮಠ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಸಮಾಜದ ಮುಖಂಡರು ಹಾಗೂ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.