ಕೃಷಿ ಭೂಮಿಯ ಆರ್.ಟಿಸಿ ಹೊಂದಿರುವ ಆದಿವಾಸಿ ರೈತರಿಗೆ ಟಿಎಪಿಸಿಎಂಎಸ್ ಸದಸ್ಯತ್ವ: ಅಧ್ಯಕ್ಷ ಬಸವಲಿಂಗಯ್ಯ ಭರವಸೆ

| Published : Sep 19 2024, 02:01 AM IST / Updated: Sep 19 2024, 11:29 AM IST

ಕೃಷಿ ಭೂಮಿಯ ಆರ್.ಟಿಸಿ ಹೊಂದಿರುವ ಆದಿವಾಸಿ ರೈತರಿಗೆ ಟಿಎಪಿಸಿಎಂಎಸ್ ಸದಸ್ಯತ್ವ: ಅಧ್ಯಕ್ಷ ಬಸವಲಿಂಗಯ್ಯ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಭೂಮಿಯ ಆರ್.ಟಿಸಿ ಹೊಂದಿರುವ ಆದಿವಾಸಿ ರೈತರಿಗೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಸದಸ್ಯತ್ವ ನೀಡುವ ಭರವಸೆಯನ್ನು ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ ನೀಡಿದ್ದಾರೆ.  

 ಹುಣಸೂರು : ಕೃಷಿ ಭೂಮಿಯ ಆರ್.ಟಿಸಿ ಹೊಂದಿರುವ ಆದಿವಾಸಿ ರೈತರಿಗೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ನಲ್ಲಿ ಸದಸ್ಯತ್ವ ನೀಡಲು ಕ್ರಮವಹಿಸುತ್ತೇನೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ ತಿಳಿಸಿದರು.

ಪಟ್ಟಣದ ಡೀಡ್ ಸಂಸ್ಥೆ ಆವರಣದಲ್ಲಿ ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಟಿಎಪಿಸಿಎಂಎಸ್ ರೈತರ ಅಭ್ಯುದಯಕ್ಕಾಗಿ ಇರುವ ಸಂಸ್ಥೆಯಾಗಿದೆ. ಶಾಸಕ ಜಿ.ಡಿ. ಹರೀಶ್ ಗೌಡ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗೈದ ನಾಯಕರಾಗಿದ್ದು, ಸಹಕಾರ ಕ್ಷೇತ್ರದ ಮೂಲಕ ರೈತರು ಆರ್ಥಿಕಾಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ನಂಬಿದವರು. ಅದರಂತೆ ತಾಲೂಕಿನಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಆದಿವಾಸಿಗಳಿಗೆ ಸರ್ಕಾರ ನೀಡಿರುವ ಭೂಮಿಯಲ್ಲಿ ಕೃಷಿಕಾರ್ಯ ನಡೆಸುತ್ತಿದ್ದು, ಅವರಿಗೆ ಪಹಣಿ ಇದ್ದಲ್ಲಿ ಟಿಎಪಿಸಿಎಂಎಸ್ ಸದಸ್ಯತ್ವ ನೀಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ಹುಣಸೂರು ನಗರಸಭೆ ನೂತನ ಅಧ್ಯಕ್ಷ ಶರವಣ ಮಾತನಾಡಿ, ಪಟ್ಟಣದಲ್ಲಿ ಒಂದು ಹಾಡಿ ಯೋಜನೆಯಡಿ ಹುಣಸೂರಿನಲ್ಲಿ ಹಾಡಿಯೊಂದನ್ನು ನಿರ್ಮಿಸಿ 100 ಗಿರಿಜನ ಕುಟುಂಬಗಳಿಗೆ ಅವಕಾಶ ನೀಡಬೇಕೆಂಬ ಮನವಿಯನ್ನು ಆದಿವಾಸಿ ಮುಖಂಡರು ತಮಗೆ ನೀಡಿದ್ದು, ಈ ಕುರಿತು ಶಾಸಕ ಜಿ.ಡಿ. ಹರೀಶ್ ಗೌಡ, ಮತ್ತು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಚರ್ಚಿಸಿ ಅವರ ಸಹಕಾರ ಮತ್ತು ಬೆಂಬಲದೊಂದಿಗೆ ಈ ಮಹತ್ವದ ಯೋಜನೆಗೆ ರೂಪಿಸಲಾಗುವುದೆಂದು ಎಂದರು.

ವಿಶ್ವ ಪ್ರಜಾಪ್ರಭುತ್ವ ದಿನದ ಮಹತ್ವದ ಕುರಿತು ಪ್ರೊ. ಸಿದ್ದೇಗೌಡ ಮಾತನಾಡಿದರು.

ಸಭಾ ಕಾರ್ಯಕ್ರಮದ ನಂತರ ಚಿಕ್ಕಹುಣಸೂರಿನ ಕೋಟೆರಸ್ತೆಯಲ್ಲಿ ಅಂಬೇಡ್ಕರ್ ಪ್ರತಿಮೆಯಿಂದ ಡೀಡ್ ಕಚೇರಿವರೆಗೆ ಮಾನವ ಸರಪಳಿ ರಚಿಸಿ ಜನತಂತ್ರ ಚಿರಾಯುವಾಗಲಿ ಎಂದು ಘೋಷಣೆ ಕೂಗಲಾಯಿತು.

ಆದಿವಾಸಿ ಮುಖಂಡರಾದ ಹರ್ಷ, ಜಯಪ್ಪ, ಜೆಕೆ ತಿಮ್ಮ, ವಿಠಲ್, ಮಂಜು, ಪಾಪು, ಶ್ರೀಕಂಠಮೂರ್ತಿ, ವಿ.ಪಿ. ಸಾಯಿನಾಥ್, ಮಂಜುನಾಥ್, ನಾಗಣ್ಣ ದೇವಾಡಿಗ, ಶಾರದಾ, ಉಷಾ, ಪ್ರಕಾಶ್, ನಟರಾಜ್, ಕೃಷ್ಣ, ಡಾ. ಶ್ರೀಕಾಂತ್ ಯಶವಂತ್, ಉಮೇಶ್ ಸೇರಿದಂತೆ ಶಂಕರ ಕಣ್ಣಿನ ಆಸ್ಪತ್ರೆ ತಂಡ, ಬುಡಕಟ್ಟು ಸಂಘದ ಪದಾಧಿಕಾರಿಗಳು, ಡೀಡ್ ಹಾಗೂ ಸದೃಢ ಕಾರ್ಯಕರ್ತರು ಪಾಲ್ಗೊಂಡಿದ್ದರು.