ಸಾರಾಂಶ
ಶಿವಕುಮಾರ ಕುಷ್ಟಗಿ
ಗದಗ: ಪ್ರತಿ ಗ್ರಾಮಗಳನ್ನು ವ್ಯಾಜ್ಯ ಮುಕ್ತಗೊಳಿಸಿ ಪ್ರತಿಯೊಬ್ಬರೂ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಮಹದಾಸೆಯೊಂದಿಗೆ ರಾಜ್ಯ ಸರ್ಕಾರ ಕಾನೂನು ಇಲಾಖೆ ಮೂಲಕ ಜಾರಿಗೊಳಿಸಲು ಉದ್ದೇಶಿಸಿರುವ ವ್ಯಾಜ್ಯಮುಕ್ತ ಗ್ರಾಮ ನಿರ್ಮಾಣ ಕಲ್ಪನೆ, ಗದಗ ಜಿಲ್ಲಾ ನ್ಯಾಯಾಲಯದ ಶ್ರಮದಿಂದಾಗಿ ಜಿಲ್ಲೆಯಲ್ಲಿ ಆರಂಭಿಕ ಹಂತದಲ್ಲಿಯೇ ಉತ್ತಮ ಬೆಳವಣಿಗೆ ಕಂಡಿದೆ.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಈ ವ್ಯಾಜ್ಯಮುಕ್ತ ಗ್ರಾಮಗಳ ಪರಿಕಲ್ಪನೆಯನ್ನು ಸಾಕಾರಗೊಳಿಸಲು ವ್ಯಾಪಕ ಪ್ರಯತ್ನಗಳು ನಡೆದಿವೆ. ಜಿಲ್ಲೆಯ ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ಸರ್ಕಾರಿ ಸಿಬ್ಬಂದಿ, ವಕೀಲರು ಸೇರಿದಂತೆ ಪ್ರತಿಯೊಬ್ಬರ ಆಸಕ್ತಿಯಿಂದಾಗಿ ಈ ಪರಿಕಲ್ಪನೆ ಸಾಕಾರದ ಹಾದಿಯಲ್ಲಿದೆ.
ಏನಿದು ವ್ಯಾಜ್ಯಮುಕ್ತ ಗ್ರಾಮ?ಯಾವುದೇ ವ್ಯಾಜ್ಯಗಳಿದ್ದರೂ ಅವುಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿ, ಆ ಗ್ರಾಮ ವ್ಯಾಪ್ತಿಯಲ್ಲಿನ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಸಂಪೂರ್ಣ ಗ್ರಾಮವನ್ನೇ ವ್ಯಾಜ್ಯ ಮುಕ್ತಗೊಳಿಸುವುದು ಈ ಯೋಜನೆಯ ಮೂಲ ಕಲ್ಪನೆ. ಆ ಮೂಲಕ ಗ್ರಾಮಗಳಲ್ಲಿ ನೆಮ್ಮದಿ ಬದುಕು ಕಟ್ಟುವುದು ಕಾನೂನು ಸಚಿವ ಎಚ್.ಕೆ. ಪಾಟೀಲ ಕನಸಾಗಿದೆ. ಇದನ್ನು ಸರ್ಕಾರವೂ ಒಪ್ಪಿ ಅನುಷ್ಠಾನಕ್ಕೆ ಯೋಜನೆ ರೂಪಿಸಿದೆ.
ವ್ಯಾಜ್ಯ ಮುಕ್ತ ಹೇಗೆ:ವ್ಯಾಜ್ಯಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಆಯಾ ಜಿಲ್ಲಾ ನ್ಯಾಯಾಲಯಗಳು ತಮ್ಮ ಅಧೀನ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಪ್ರತಿಯೊಂದು ಗ್ರಾಮವಾರು ಪ್ರಕರಣಗಳ ಸಂಖ್ಯೆಯನ್ನು ಗುರುತಿಸುತ್ತದೆ. ಇದರೊಟ್ಟಿಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ, ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಹೀಗೆ ಸಿವಿಲ್ ವ್ಯಾಜ್ಯಗಳನ್ನು ಪತ್ತೆ ಮಾಡುತ್ತಾರೆ. ಪ್ರಸ್ತುತ ಅತ್ಯಂತ ಕಡಿಮೆ ವ್ಯಾಜ್ಯಗಳನ್ನು ಹೊಂದಿರುವ (ಸದ್ಯದ ದಾಖಲೆಗಳ ಆಧಾರದಲ್ಲಿ) ಗ್ರಾಮಗಳನ್ನು ಗುರುತಿಸಿ, ಆಯಾ ಪ್ರಕರಣಗಳನ್ನು ನಿರ್ವಹಿಸುತ್ತಿರುವ ವಕೀಲರೊಂದಿಗೆ ಚರ್ಚಿಸಿ, ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿ, ಆಯಾ ಗ್ರಾಮಗಳಲ್ಲಿನ ಎಲ್ಲ ವ್ಯಾಜ್ಯಗಳನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಅಂತಿಮಗೊಳಿಸುವುದು ಈ ಯೋಜನೆಯ ಕಲ್ಪನೆಯಾಗಿದೆ.
14ರಂದು ಲೋಕ್ ಅದಾಲತ್ಸೆ. 14ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯಮುಕ್ತ ಗ್ರಾಮಗಳ ಘೋಷಣೆಗಾಗಿ ಜಿಲ್ಲಾ ನ್ಯಾಯಾಲಯ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಅದಕ್ಕೆ ವಕೀಲರು, ಗ್ರಾಮಸ್ಥರು, ಸಾರ್ವಜನಿಕರು ಮತ್ತು ವಿವಿಧ ಇಲಾಖೆಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಷ್ಟು ಗ್ರಾಮಗಳು ವ್ಯಾಜ್ಯಮುಕ್ತವಾಗುತ್ತವೆ ಎನ್ನುವುದು ಮಾತ್ರ ಇನ್ನು ನಿರ್ಧಾರವಾಗಿಲ್ಲ.
74 ಗ್ರಾಮ ಗುರುತುಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ವ್ಯಾಜ್ಯಮುಕ್ತ ಗ್ರಾಮಗಳನ್ನಾಗಿ ಮಾಡಬಹುದಾದ ಸಾಧ್ಯತೆ ಇರುವ 74 ಗ್ರಾಮಗಳನ್ನು ಗುರುತಿಸಲಾಗಿದೆ. ರೋಣ ಮತ್ತು ಗಜೇಂದ್ರಗಡ ತಾಲೂಕು ವ್ಯಾಪ್ತಿಯಲ್ಲಿ 22, ಗದಗ ತಾಲೂಕಿನಲ್ಲಿ 3, ಮುಂಡರಗಿ ತಾಲೂಕಿನಲ್ಲಿ 14, ನರಗುಂದ ತಾಲೂಕಿನಲ್ಲಿ 6 ಹಾಗೂ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ 29 ಗ್ರಾಮಗಳನ್ನು ಗುರುತಿಸಲಾಗಿದೆ. ಅತಿ ಕಡಿಮೆ ವ್ಯಾಜ್ಯಗಳು ಇರುವ ಹಿನ್ನೆಲೆಯಲ್ಲಿ ಈ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.
ಮಹತ್ವದ ಹೆಜ್ಜೆವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣ ಎನ್ನುವುದೇ ಒಂದು ಸುಂದರ ಕಲ್ಪನೆಯಾಗಿದ್ದು, ಅದನ್ನು ಸಾಕಾರಗೊಳಿಸುವಲ್ಲಿ ವ್ಯಾಪಕ ಪ್ರಯತ್ನಗಳು ನಡೆಯುತ್ತಿವೆ. ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರಿಂದಲೂ ಸ್ಪಂದನೆಯ ಅವಶ್ಯಕತೆ ಇರುತ್ತದೆ. ಸಮಾಜ ಸಕಾರಾತ್ಮಕವಾಗಿ ಸ್ಪಂದಿಸಿದಲ್ಲಿ ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣ ಎನ್ನುವ ಈ ನಿರ್ಧಾರ ರಾಜ್ಯದ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಲಿದೆ.ಗುಣಾತ್ಮಕ ಬದಲಾವಣೆ
ಗ್ರಾಮೀಣ ಪ್ರದೇಶಗಳು ಎಂದರೆ ಹತ್ತಾರು ರೀತಿಯ ಸಮಸ್ಯೆಗಳಿರುತ್ತವೆ. ಸಣ್ಣ ವ್ಯಾಜ್ಯಗಳಿಗೆ ಸಾರ್ವಜನಿಕರು ನ್ಯಾಯಾಲಯದ ಮೆಟ್ಟಿಲೇರುವುದು ಸಾಮಾನ್ಯ. ಇಂತಹ ದಿನಗಳಲ್ಲಿ ವ್ಯಾಜ್ಯವೇ ಇಲ್ಲದ ಗ್ರಾಮಗಳ ನಿರ್ಮಾಣ ಮಾಡುವುದು ಕಷ್ಟ ಸಾಧ್ಯ ಎನ್ನುವ ಚರ್ಚೆಗಳ ಮಧ್ಯೆ ಗದಗ ಜಿಲ್ಲೆಯಲ್ಲಿ ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣದ ಯೋಜನೆ ಸಾಕಷ್ಟು ಪ್ರಗತಿ ಕಂಡಿದೆ. ಇದು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸವಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.ಎಚ್.ಕೆ. ಪಾಟೀಲ ಕಾನೂನು, ಪ್ರವಾಸೋದ್ಯಮ ಸಚಿವ