ಸಾರಾಂಶ
ಬಾಲ್ಯ ವಿವಾಹ ಮುಕ್ತ ತಾಲೂಕನ್ನಾಗಿಸಲು ಸೂಕ್ತ ಕ್ರಮವಹಿಸಲಾಗಿದ್ದು, ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಬಾಲ್ಯ ವಿವಾಹಗಳು ನಿಲ್ಲುತ್ತವೆ.
ಬಾಲ್ಯ ವಿವಾಹ ನಿಷೇಧ, ಸಮನ್ವಯ ಸಮಿತಿ, ತಾಲೂಕು ಮಟ್ಟದ ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ ತಡೆ ಸಮಿತಿ ಹಾಗೂ ಮಕ್ಕಳ ರಕ್ಷಣಾ ಸಮಿತಿಗಳ ಸಭೆ
ಕನ್ನಡಪ್ರಭ ವಾರ್ತೆ ಕನಕಗಿರಿಬಾಲ್ಯ ವಿವಾಹ ಮುಕ್ತ ತಾಲೂಕನ್ನಾಗಿಸಲು ಸೂಕ್ತ ಕ್ರಮವಹಿಸಲಾಗಿದ್ದು, ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಬಾಲ್ಯ ವಿವಾಹಗಳು ನಿಲ್ಲುತ್ತವೆ ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ಹೇಳಿದರು.
ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ನಿಷೇಧ, ಸಮನ್ವಯ ಸಮಿತಿ, ತಾಲೂಕು ಮಟ್ಟದ ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ ತಡೆ ಸಮಿತಿ ಹಾಗೂ ಮಕ್ಕಳ ರಕ್ಷಣಾ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು. ಸಮಾಜದಲ್ಲಿ ಬಾಲ್ಯವಿವಾಹ ಇನ್ನೂ ಜೀವಂತವಾಗಿದ್ದು, ಅಧಿಕಾರಿಗಳು ನಿಗಾವಹಿಸಿ ಕ್ರಮವಹಿಸಬೇಕು. ತಾಲೂಕು ವ್ಯಾಪ್ತಿಯ ದೇವಾಲಯಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳಲ್ಲಿ ಭಾಗಿವಹಿಸಿ ಗಮನಿಸಬೇಕು. ಇದಕ್ಕೂ ಪೂರ್ವದಲ್ಲಿ ಆಯೋಜಕರಿಂದ ಮಾಹಿತಿ ಪಡೆದು ಬಾಲ್ಯ ವಿವಾಹವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಬಾಲ್ಯ ವಿವಾಹ ನಡೆದದ್ದು ಕಂಡು ಬಂದಲ್ಲಿ ಶಿಕ್ಷೆಗೆ ಗುರಿಪಡಿಸುವ ಕೆಲಸ ಮಾಡಬೇಕು ಎಂದರು.ನಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ ಮಾತನಾಡಿ, ಪಂಚಾಯಿತಿ, ಶಾಲಾ-ಕಾಲೇಜು ಆವರಣದಲ್ಲಿ ಸಾರ್ವಜನಿಕರಿಗೆ ಪ್ರದರ್ಶನವಾಗುವಂತೆ ಗೋಡೆ ಬರಹ ಬರೆಯಿಸಲಾಗುವುದು. ಸಾಮೂಹಿಕ ಆಯೋಜಿಸುವ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ವಧು-ವರರ ದಾಖಲೆಗಳನ್ನು ಪರಿಶೀಲಿಸಲಾಗುವುದು. ನವೆಂಬರ್ ತಿಂಗಳಲ್ಲಿ ಮಕ್ಕಳ ಹಕ್ಕುಗಳ, ಮಹಿಳಾ ಗ್ರಾಮಸಭೆಗಳನ್ನು ಆಯೋಜಿಸಲಾಗುವುದು. ತಾಲೂಕು ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಎಲ್ಲಾ ಅಧಿಕಾರಿಗಳು ಸಹಕರಿಸುವಂತೆ ಕೋರಿದರು.
ತಾಪಂ ಇಒ ರಾಜಶೇಖರ, ಶಿಕ್ಷಣ ಸಂಯೋಜಕ ಆಂಜನೇಯ, ಎಎಸ್‌ಐಗಳಾದ ಲಕ್ಕಪ್ಪ, ಕಲಾವತಿ, ಪಪಂ ಕರವಸೂಲಿಗಾರ ಪ್ರಕಾಶ ಮಹಿಪತಿ, ಆಪ್ತ ಸಮಾಲೋಚಕ ಅಮೀನಸಾಬ, ಸಾಮಾಜಿಕ ಕಾರ್ಯಕರ್ತ ರವಿಕುಮಾರ ಪವಾರ, ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿರ್ಮಲಾ ಇತರರು ಇದ್ದರು.