ಸಾರಾಂಶ
ಬಾಗಲಕೋಟೆ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಅನಧಿಕೃತ ಲಾಟರಿ ಮತ್ತು ಮಟ್ಕಾ ಪ್ರಕರಣಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಅನಧಿಕೃತ ಲಾಟರಿ ಮತ್ತು ಮಟ್ಕಾ ಪ್ರಕರಣಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅನಧಿಕೃತ ಲಾಟರಿ ಹಾವಳಿಯನ್ನು ನಿಯಮಗಳ ಚೌಕಟ್ಟಿನಲ್ಲಿಯೇ ನಿಯಂತ್ರಿಸುವ ಪ್ಲೈಯಿಂಗ್ ಸ್ಕ್ವಾಡ್ ಪ್ರಥಮ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಟ್ಕಾ ನಡೆಯದಂತೆ ದಾಳಿಗಳನ್ನು ತೀವ್ರಗೊಳಿಸಿ ಕ್ರಮ ಕೈಗೊಳ್ಳಲು ಸೂಚಿಸಿದರು. ಪ್ರತಿ ಮಾಹೆ 5ನೇ ತಾರೀಖಿನೊಳಗೆ ಅನಧಿಕೃತ ಲಾಟರಿ ಮತ್ತು ಮಟ್ಕಾ ಹಾವಳಿ ಕುರಿತಾದ ಮಾಹಿತಿ ನೀಡಲು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿ ಅನಧಿಕೃತ ಲಾಟರಿ ಪ್ರಕರಣಗಳು ದಾಖಲಾಗಿಲ್ಲ. ಆದರೆ ಮಟ್ಕಾ ಪ್ರಕರಣಗಳು 46 ದಾಖಲಾಗಿದ್ದು, 51 ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ 108 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 21 ಪ್ರಕರಣಗಳಿಗೆ ಶಿಕ್ಷೆ ಮತ್ತು ದಂಡ ನೀಡಲಾಗಿದೆ. ಇನ್ನು 76 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ 76 ಪ್ರಕರಣಗಳು ಇರುವುದಾಗಿ ಸಭೆಗೆ ತಿಳಿಸಿದರು.ಜಿಲ್ಲೆಯಲ್ಲಿ ಇಲ್ಲಿಯವರೆಗೆ ದಾಖಲಾದ ಪ್ರಕರಣಗಳ ಬಗ್ಗೆ ವಾಣಿಜ್ಯ ತೆರಿಗೆ ಅಧಿಕಾರಿಗಳೊಂದಿಗೆ ವಿಚಾರಿಸಲಾಗಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅನಧಿಕೃತ ಲಾಟರಿ ಪ್ರಕರಣಗಳು ದಾಖಲಾಗಿರುವುದಿಲ್ಲ ಎಂಬ ಮಾಹಿತಿಯನ್ನು ವಾಣಿಜ್ಯ ತೆರಿಗೆ ಇಲಾಖೆಯ ಜ್ಞಾನೇಶ ತಿಪ್ಪಣ್ಣವರ ಸಭೆಗೆ ತಿಳಿಸಿದರು. ಪ್ರಾರಂಭದಲ್ಲಿ ಸಣ್ಣ ಉಳಿತಾಯ ಹಾಗೂ ಸದಸ್ಯ ಸಮಾಲೋಚಕ ಮಲ್ಲಿಕಾರ್ಜುನ ಕೋಡಿ ಸಭೆಗೆ ಆಗಮಿಸಿದವರನ್ನು ಸ್ವಾಗತಿಸಿದರು.