ಗಂಗಾವತಿ:ತಾಲೂಕಿನ ಹಿರೇಬೆಣಕಲ್ ಗ್ರಾಮದ ಮೋರೆರ್ ಶಿಲಾಸಮಾಧಿಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ. ಮೋಹನರಾಜು ಹೇಳಿದರು.

ತಾಲೂಕಿನ ಹಿರೇಬೆಣಕಲ್ ಗ್ರಾಮದ ಮೋರೆರ್ ಬೆಟ್ಟಕ್ಕೆ ಭಾನುವಾರ ಭೇಟಿ ನೀಡಿ ಶಿಲಾಸಮಾಧಿಗಳ ವೀಕ್ಷಣೆ ಮಾಡಿ ಮಾತನಾಡಿದ ಅವರು, 3000 ವರ್ಷಗಳ ಇತಿಹಾಸ ಇರುವ ಮೋರೆರ್ ಬೆಟ್ಟದಲ್ಲಿ 3000 ಶಿಲಾಸಮಾಧಿಗಳು ಇದ್ದವು. ಇದೀಗ 300-400 ಶಿಲಾ ಸಮಾಧಿಗಳು ಇರಬಹುದು. ಸರಿಯಾದ ಅಂಕಿ-ಅಂಶ ತಿಳಿಯಲು ಸರ್ವೇ ನಡೆಸಲಾಗುವುದು. ಸರ್ವೇಕ್ಷಣಾ ಇಲಾಖೆಯವರು ಬೆಟ್ಟದಲ್ಲಿರುವ 8 ವಿಧದ ಶಿಲಾ ಸಮಾಧಿಗಳ ಸರ್ವೇ ನಡೆಸಬೇಕು. ಇದರಲ್ಲಿ ಗುಣಮಟ್ಟ, ದುರಸ್ತಿ ಮಾಡಬಹುದಾದ ಹಾಗೂ ಬಿದ್ದಿರುವ ಶಿಲಾ ಸಮಾಧಿಗಳ ಸರ್ವೇ ಮಾಡಿ ಪ್ರತಿ ತಿಂಗಳು ಮೇಲಧಿಕಾರಿಗಳಿಗೆ ಕುರಿತು ವರದಿ ನೀಡಬೇಕು ಎಂದರು.

ಶಿಲಾ ಸಮಾಧಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆಯವರು ಆ್ಯಂಟಿ ಪೌಚಿಂಗ್ ಕ್ಯಾಂಪ್ ಹಾಕಿ ಸೋಲಾರ್ ಲೈಟ್ ಮತ್ತು ಸೋಲಾರ್ ಸಿಸಿ ಕ್ಯಾಮೇರಾ ಅಳವಡಿಕೆ ಮಾಡಬೇಕು. ಜತೆಗೆ ಶಿಲಾಸಮಾಧಿ ಬಳಿ ಇರುವ ಕೊಳಕ್ಕೆ ದನ-ಕರು ನೀರು ಕುಡಿಯಲು ಬರುತ್ತವೆ. ಇದನ್ನು ತಪ್ಪಿಸಲು 1 ಕಿಮೀ ದೂರದಲ್ಲಿ ಪ್ರತ್ಯೇಕ ಕೃಷಿ ಹೊಂಡ ನಿರ್ಮಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶಿಲಾ ಸಮಾಧಿಗಳ 1 ಕಿ.ಮೀ. ಸುತ್ತಲೂ ತಂತಿ ಬೇಲಿ ಹಾಕಿ ಅವುಗಳ ರಕ್ಷಣೆ ಮಾಡಬೇಕಿದೆ. ಹಿರೇ ಬೆಣಕಲ್ ಗ್ರಾಮದಿಂದ ಬೆಟ್ಟಕ್ಕೆ ಬರುವ ರಸ್ತೆಯ ಬಗ್ಗೆ ಮಾಹಿತಿ ಪಡೆಯುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮೋರೆರ್ ಬೆಟ್ಟದ ಅಭಿವೃದ್ಧಿ ಹಾಗೂ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಶೀಘ್ರದಲ್ಲೇ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಇತಿಹಾಸ ತಜ್ಞ ಮಂಜುನಾಥ ದೊಡ್ಡಮನಿ, ಮೋರೆರ್ ಬೆಟ್ಟದ ಇತಿಹಾಸ ಹಾಗೂ ಶಿಲಾಸಮಾಧಿಗಳ ಕುರಿತು ಮಾಹಿತಿ ನೀಡಿದರು.


ಗ್ರಾಮದಿಂದ ಬೆಟ್ಟಕ್ಕೆ ಬರಲು ದಾರಿ ವ್ಯವಸ್ಥೆ ಮಾಡುವುದು ಹಾಗೂ ಹಿರೇಬೆಣಕಲ್‌ನಲ್ಲಿರುವ ನಿರ್ಮಿತಿ ಕೇಂದ್ರವನ್ನು ಮ್ಯೂಸಿಯಂ ಮಾಡುವುದು ಸೇರಿದಂತೆ ಇತರ ಬೇಡಿಕೆಗಳ ಮನವಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ. ಮೋಹನರಾಜು ಅವರಿಗೆ ಸ್ಥಳೀಯರು ಸಲ್ಲಿಸಿದರು.

ಉರಿ ಬಿಸಿಲು ಲೆಕ್ಕಿಸದೇ ಪರಿಶೀಲನೆ:

ಸುಡುಬಿಸಿಲು ಲೆಕ್ಕಿಸದೇ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ. ಮೋಹನರಾಜು ಬೆಳಗ್ಗೆ 10 ಗಂಟೆಯಿಂದ 1.30ರ ವರೆಗೆ ಮೋರೆರ್ ಬೆಟ್ಟದ ಶಿಲಾಸಮಾಧಿಗಳ ಪರಿಶೀಲನೆ ನಡೆಸಿದರು. ಖುದ್ದಾಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ. ಮೋಹನರಾಜು ಅವರೇ ಮೊಬೈಲ್‌ನಲ್ಲಿ ಬೆಟ್ಟದ ಗುಂಡುಗಳಿಗೆ ಬರೆದ ಬಣ್ಣದ ಪೇಂಟಿಂಗ್‌ ಮತ್ತು ಶಿಲಾ ಸಮಾಧಿಗಳ ಫೋಟೋ, ವಿಡಿಯೋ ಮಾಡಿಕೊಂಡರು. ಆನಂತರ ಸಮಾಧಾನ ಚಿತ್ತದಿಂದ ಬೆಟ್ಟದ ಅಭಿವೃದ್ಧಿಗೆ ಇತಿಹಾಸ ತಜ್ಞರು ಹಾಗೂ ಸ್ಥಳೀಯ ಮುಖಂಡರ ಸಲಹೆ ಪಡೆದರು.

ಮೌನ ಧ್ಯಾನ ವ್ರತ ಸ್ಥಳಕ್ಕೆ ಭೇಟಿ:ಆದಿಮಾನವರ ನೆಲೆಯಾದ ಹಿರೇಬೆಣಕಲ್ ಮೋರೆರ್ ಶಿಲಾಸಮಾಧಿಗಳ ಸಂರಕ್ಷಣೆಗೆ ಒತ್ತಾಯಿಸಿ ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಗುಡ್ಲಾನೂರು ಫೆ. 13ರಿಂದ ಫೆ. 15ರ ವರೆಗೆ ಕೈಗೊಂಡಿದ್ದ ಮೌನಧ್ಯಾನ ವ್ರತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ. ಮೋಹನರಾಜು ಹಾಗೂ ಜಿಪಂ ಸಿಇಒ ವರ್ಣಿತ್ ನೇಗಿ ಭೇಟಿ ನೀಡಿ, ಮೋರೆರ್ ಬೆಟ್ಟದ ಅಭಿವೃದ್ಧಿಯ ಭರವಸೆ ನೀಡಿದರು. ಈ ವೇಳೆ ಗಂಗಾವತಿಯ ಧ್ಯಾನ ಯೋಗ ಕೇಂದ್ರದ ಸದಸ್ಯರು ಹಾಗೂ ಸ್ಥಳಿಯರು ಇದ್ದರು.

ಜಿಪಂ ಸಿಇಒ ವರ್ಣಿತ್ ನೇಗಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಣಾ ಸಹಾಯಕ ರವೀಂದ್ರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಅರಣ್ಯ ಇಲಾಖೆಯ ಆರ್‌ಎಫ್‌ಒ ಬಸವರಾಜ ಪೂಜಾರ್, ಪಿಡಿಒ ಇಂದಿರಾ, ಇತಿಹಾಸ ತಜ್ಞ ಮಂಜುನಾಥ ದೊಡ್ಡಮನಿ, ವೀರೇಶ ಅಂಗಡಿ, ಬಸನಗೌಡ ಹೊಸಳ್ಳಿ, ಈಶಪ್ಪ ಕುಂಬಾರ, ಚಂದ್ರಶೇಖರ ಕುಂಬಾರ್, ವಿವಿಧ ಇಲಾಖೆ ಸಿಬ್ಬಂದಿ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.