ಸಾರಾಂಶ
ರಾಮನಗರ: ಕನಕಪುರ ತಾಲೂಕಿನಲ್ಲಿ ಇತ್ತೀಚಿಗೆ ನಡೆದ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗೆ 1 ಲಕ್ಷ ಪರಿಹಾರ ಮಂಜೂರಾಗಿದ್ದು, ಎರಡು ಎಕರೆ ಭೂಮಿ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಕಪುರ ದೌರ್ಜನ್ಯ ಪ್ರಕರಣ ಎಸ್.ಸಿ.ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಗೆ ಸೇರಿದ್ದು, ಸಂತ್ರಸ್ತರಿಗೆ ಈಗಾಗಲೇ 1 ಲಕ್ಷ ರು. ಪರಿಹಾರ ಮಂಜೂರಾಗಿದೆ. ಅವರಿಗೆ ಹೆಚ್ಚುವರಿಯಾಗಿ ಅವರಿಗೆ ಪುನರ್ವಸತಿ ಕಲ್ಪಿಸಲು ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಎರಡು ಎಕರೆ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ರೋಸ್ಟರ್ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಹರಾಜು ಪ್ರಕ್ರಿಯೆಯಲ್ಲಿ ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೋ ಮಾಡಿಸಿ ನಿಯಮಗಳನ್ವಯ ಪಾರದರ್ಶಕವಾಗಿ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ, ನಗರ ಸ್ಥಳೀಯ ಸಂಸ್ಥೆಗಳು ಸಕ್ಷಮ ಪ್ರಾಧಿಕಾರದ ಗಮನಕ್ಕೆ ತರಬಹುದಾಗಿದೆ ಎಂದು ಹೇಳಿದರು.
ಜಿಲ್ಲೆಯ ಸಾರ್ವಜನಿಕ ಸ್ಮಶಾನಗಳಿಗೆ ಸರ್ಕಾರಿ ಸಾರ್ವಜನಿಕ ಸ್ಮಶಾನ ಎಂಬ ನಾಮಫಲಕ ಅಳವಡಿಸಬೇಕು ಹಾಗೂ ಆ ರುದ್ರ ಭೂಮಿಗೆ ಕಾಂಪೌಂಡ್ ಹಾಕಿಸುವಂತೆ ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅವರಿಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ದಿಗ್ವಿಜಯ್ ಬೋಡ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಚನ್ನಪಟ್ಟಣ ತಾಲೂಕಿನ ದೇವರ ಹೊಸಳ್ಳಿ ರುದ್ರಭೂಮಿಗೆ ಸಂಬಂಧಿಸಿದಂತೆ ಅಲ್ಲಿನ ತಹಶೀಲ್ದಾರ್ ಆ ಸ್ಮಶಾನದ ಜಾಗವನ್ನು ಸಂಪೂರ್ಣ ಸರ್ವೆ ನೆಡಸಿ, ಅದಕ್ಕೆ ಸಾರ್ವಜನಿಕ ಸ್ಮಶಾನ ಎಂದು ನಾಮಫಲಕ ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಚನ್ನಪಟ್ಟಣ ತಹಸೀಲ್ದಾರರಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಅವರು ಮಾತನಾಡಿ, 2024ರ ಜನವರಿ ಒಂದರಿಂದ 2024ರ ಡಿಸೆಂಬರ್ 23ರವರೆಗೆ ದೌರ್ಜನ್ಯ ಪ್ರಕರಣಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳ ನೊಂದ ಸಂತ್ರಸ್ತರಿಗೆ ಪರಿಹಾರ ಧನ ಮಂಜೂರು ಮಾಡಲಾಗಿದೆ, ಒಟ್ಟು 58 ಪ್ರಕರಣಗಳಲ್ಲಿ 44 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಯಾಗಿದೆ. 8 ಪ್ರಕರಣಗಳು ತನಿಖೆಯಲ್ಲಿವೆ, 6 ಪ್ರಕರಣಗಳಲ್ಲಿ ಬಿ ವರದಿ ಸಲ್ಲಿಕೆಯಾಗಿದೆ. ಒಟ್ಟು 243 ಸಂತ್ರಸ್ತರಿಗೆ 155.47 ಲಕ್ಷ ರೂಗಳು ಪರಿಹಾರ ನೀಡಲಾಗಿದೆ ಎಂದರು.ಮಾಗಡಿ ತಾಲೂಕು ವ್ಯಾಪ್ತಿಯಲ್ಲಿ ಕೊಲೆಯಾಗಿದ್ದ ಪ್ರಕರಣವೊಂದರ ಸಂಬಂಧಿಕರಿಗೆ ಪರಿಹಾರ ನೀಡುವ ಕುರಿತಂತೆ ಸಭೆಯಲ್ಲಿ ಚರ್ಚೆಯಾಗಿ, ಆ ಪ್ರಕರಣದ ಸಂತ್ರಸ್ತರಿಗೆ ರಕ್ತ ಸಂಬಂಧಿಗಳು ಯಾರು ಇಲ್ಲದ ಕಾರಣ ಪರಿಹಾರಕ್ಕೆ ಮನವಿ ಸಲ್ಲಿಸಿರಲಿಲ್ಲ. ಇದೀಗ ಮಗುವೊಂದು ಸಂತ್ರಸ್ತರಾಗಿರುವುದು ಕಂಡು ಬಂದಿದ್ದು ಪ್ರಕರಣ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುವುದರಿಂದ ಆ ಮಗುವಿನ ವಂಶವೃಕ್ಷ ಪಡೆದು ಮಗುವಿನ ಹೆಸರಿಗೆ ನಿಗದಿತ ಮೊತ್ತ ಠೇವಣಿ ಮಾಡುವಂತೆ ಯಶವಂತ್ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ವಿ. ಸುರೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಜಾಗೃತಿ ಉಪಸಮಿತಿ ಸದಸ್ಯರಾದ ಚಲುವರಾಜು, ಕುಂಬಾಪುರ ಬಾಬು, ಮಹೇಶ್, ಶಿವಣ್ಣ, ಗೋಪಾಲ ಕೃಷ್ಣ, ಶಿವಕುಮಾರ್, ಶಿವರಾಜು, ರೋಹಿತ್ ಇತರರು ಉಪಸ್ಥಿತರಿದ್ದರು.1ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.