ಸಾರಾಂಶ
ಮಹಿಳಾ ಉದ್ಯಮಿಗಳು, ಸಂಘ-ಸಂಸ್ಥೆಗಳಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಹಾಗೂ ಅವೇಕ್ ಸಂಸ್ಥೆ ವತಿಯಿಂದ ಚಿತ್ರಕಲಾ ಪರಿಷತ್‌ನಲ್ಲಿ ಏರ್ಪಡಿಸಲಾಗಿರುವ ಮೂರು ದಿನಗಳ ಸ್ವಾವಲಂಬನ ಮೇಳ 2024ಕ್ಕೆ ಶುಕ್ರವಾರ ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಡಾ. ಏಕ್‌ರೂಪ್ ಕೌರ್ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಸ್ಟಾರ್ಟ್‌ಅಪ್‌ಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಕಲ್ಪಿಸುವ ಕೆಲಸ ಮಾಡಲು ನಿರ್ಧರಿಸಲಾಗಿದೆ. ಆಮೂಲಕ ಹೊಸ ಉದ್ಯಮಿಗಳಿಗೆ ಅವಕಾಶ ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ ಎಂದು ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಡಾ. ಏಕ್‌ರೂಪ್ ಕೌರ್ ಹೇಳಿದರು.ಮಹಿಳಾ ಉದ್ಯಮಿಗಳು, ಸಂಘ-ಸಂಸ್ಥೆಗಳಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಹಾಗೂ ಅವೇಕ್ ಸಂಸ್ಥೆ ವತಿಯಿಂದ ಚಿತ್ರಕಲಾ ಪರಿಷತ್‌ನಲ್ಲಿ ಏರ್ಪಡಿಸಲಾಗಿರುವ ಮೂರು ದಿನಗಳ ಸ್ವಾವಲಂಬನ ಮೇಳ 2024ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರನ್ನು ಉದ್ಯಮಶೀಲರನ್ನಾಗಿಸಲು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮಹಿಳಾ ಉದ್ಯಮಿಗಳಿಗೆ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ) ಮೂಲಕ ಶೇ. 4ರ ಬಡ್ಡಿ ದರದಲ್ಲಿ 50 ಲಕ್ಷ ರು. ನೀಡಲಾಗುತ್ತಿದ್ದ ಸಾಲದ ಮೊತ್ತವನ್ನು 2 ಕೋಟಿ ರು.ಗೆ ಹೆಚ್ಚಿಸಲಾಗಿದೆ. ಅದರ ಜತೆಗೆ ಸಣ್ಣ ಕೈಗಾರಿಕೆ ಆರಂಭಿಸುವವರಿಗೆ ಶೇ. 5.5ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಅದರ ಪ್ರಯೋಜವನ್ನು ಮಹಿಳಾ ಉದ್ಯಮಿಗಳು ಪಡೆದುಕೊಳ್ಳಬೇಕು ಎಂದರು.ಅವೇಕ್ ಸಂಸ್ಥೆ ಮಹಿಳೆಯರಿಗೆ ಚಾಲನಾ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಅದು ಉತ್ತಮ ಕಾರ್ಯವಾಗಿದ್ದು, ಸ್ವಂತ ವಾಹನವಷ್ಟೇ ಅಲ್ಲದೆ ವಾಣಿಜ್ಯ ವಾಹನಗಳಲ್ಲಿಯೂ ಮಹಿಳಾ ಚಾಲಕಿಯರು ಕೆಲಸ ಮಾಡುವಂತಾಗಬೇಕು. ಅದಕ್ಕಾಗಿ ಅವೇಕ್ ಸಂಸ್ಥೆ ತಮ್ಮಿಂದ ಚಾಲನಾ ತರಬೇತಿ ಪಡೆಯುವ ಚಾಲಕಿಯರಿಗೆ ಶಾಲಾ-ಕಾಲೇಜುಗಳ ವಾಹನ ಚಾಲನೆ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ನ ಸಿಎಂಡಿ ಎಸ್. ರಮನ್, ಕೈಗಾರಿಕಾ ಮತ್ತು ವಾಣಿಜ್ಯ ವಿಭಾಗದ ನಿರ್ದೇಶಕ ಡಾ. ವಿಜಯ್ ಮಹಂತೇಶ್ ದಾನಮ್ಮ, ಸಿಐಡಿಬಿಐನ ಮುಖ್ಯ ಜನರಲ್ ಮ್ಯಾನೇಜರ್ ಸತ್ಯಕಿ ರಸ್ತೋಗಿ. ಅವೇಕ್ ಸಂಸ್ಥೆಯ ಅಧ್ಯಕ್ಷೆ ಎನ್.ಆರ್. ಆಶಾ ಇದ್ದರು.ಸಗಣಿಯಿಂದ ಮೂಡಿದ ರಾಮ, ಕೃಷ್ಣ, ವೆಂಕಟೇಶ್ವರ
ಸ್ವಾವಲಂಬನ ಮೇಳ 2024ರಲ್ಲಿ 75ಕ್ಕೂ ಹೆಚ್ಚಿನ ಮಹಿಳಾ ಉದ್ಯಮಿಗಳು ಹಾಗೂ ಸ್ವ-ಸಹಾಯ ಸಂಘಗಳು ಪಾಲ್ಗೊಂಡು ತಮ್ಮ ಉತ್ಪನ್ನಗಳ ಪ್ರದರ್ಶನ, ಮಾರಾಟ ಮಾಡುತ್ತಿದ್ದಾರೆ. ಅದರಲ್ಲಿ ಸ್ವಪ್ನ ಎಂಬುವವರು ಸ್ಥಾಪಿಸಿರುವ ಗೋಕುಲ್ ಉದ್ಯೋಗ್ ಎಂಬ ಸಂಸ್ಥೆಯು, ಹಸುವಿನ ಸಗಣಿಯಲ್ಲಿ ಸಿದ್ಧಪಡಿಸಿದ ದೇವರ ಕೀ ಚೈನ್, ಮೂರ್ತಿಗಳನ್ನು ಪ್ರದರ್ಶನಕ್ಕಿಟ್ಟಿದೆ. ಸಗಣಿಯನ್ನು ಒಣಗಿಸಿ, ಸಣ್ಣಗೆ ಪುಡಿ ಮಾಡಿ ನಂತರ ಅದಕ್ಕೆ ಗೋರ್ ಹೆಸರಿನ ನೈಸರ್ಗಿಕ ಗ್ಲ್ಯೂವನ್ನು ಅಳವಡಿಸಿ ನಂತರ ಅದನ್ನು ದೇವರ ಮೂರ್ತಿ ಸಿದ್ಧಪಡಿಸಲಾಗುತ್ತದೆ. ಆ ಉತ್ಪನ್ನಗಳು ಸ್ವಾವಲಂಬನ ಮೇಳದ ಆಕರ್ಷಣೆಯಾಗಿದೆ.