ಮಲ್ಲಿಕಾರ್ಜುನ ಮನಸೂರ ಸಂಗೀತ ಪಾಠಶಾಲೆ ಪುನರಾರಂಭಕ್ಕೆ ಕ್ರಮ: ಜಿಲ್ಲಾಧಿಕಾರಿ

| Published : Feb 12 2025, 12:33 AM IST

ಮಲ್ಲಿಕಾರ್ಜುನ ಮನಸೂರ ಸಂಗೀತ ಪಾಠಶಾಲೆ ಪುನರಾರಂಭಕ್ಕೆ ಕ್ರಮ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮನಸೂರರ ಹೆಸರಿನಲ್ಲಿ ತೆರೆಯಲಾಗಿದ್ದ ಡಾ. ಮಲ್ಲಿಕಾರ್ಜುನ ಮನಸೂರ ಸಂಗೀತ ಪಾಠಶಾಲೆ ಕಾರಣಾಂತರಗಳಿಂದ ನಿಂತು ಹೋಗಿದೆ. ಅದನ್ನು ಜೂನ್ ತಿಂಗಳಲ್ಲಿ ಪುನರಾರಂಭಿಸಲು ಕ್ರಮವಹಿಸಲಾಗುವುದು. ಇದರಿಂದ ಯುವ ಪ್ರತಿಭೆಗಳಿಗೆ ಅವಕಾಶಗಳು ಮತ್ತು ಹಿಂದೂಸ್ತಾನಿ ಸಂಗೀತ ಪರಂಪರೆ ಬೆಳೆಯಲು ಸಾಧ್ಯವಾಗುತ್ತದೆ.

ಧಾರವಾಡ:

ಖ್ಯಾತ ಹಿಂದೂಸ್ತಾನಿ ಗಾಯಕರಾಗಿದ್ದ ದಿ. ಡಾ. ಮಲ್ಲಿಕಾರ್ಜುನ ಮನಸೂರ ಹೆಸರಿನಲ್ಲಿ ಆರಂಭಿಸಲಾಗಿದ್ದ ಡಾ. ಮಲ್ಲಿಕಾರ್ಜುನ ಮನಸೂರ ಸಂಗೀತ ಪಾಠಶಾಲೆಯನ್ನು ಜೂನ್ ತಿಂಗಳಿಂದ ಪುನರಾರಂಭಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಟ್ರಸ್ಟ್ ಕಾರ್ಯಕಾರಿ ಸಮಿತಿ ಸಭೆ ಜರುಗಿಸಿದ ಅವರು, ಮನಸೂರರ ಹೆಸರಿನಲ್ಲಿ ತೆರೆಯಲಾಗಿದ್ದ ಸಂಗೀತ ಪಾಠಶಾಲೆ ಕಾರಣಾಂತರಗಳಿಂದ ನಿಂತು ಹೋಗಿದೆ. ಅದನ್ನು ಜೂನ್ ತಿಂಗಳಲ್ಲಿ ಪುನರಾರಂಭಿಸಲು ಕ್ರಮವಹಿಸಲಾಗುವುದು. ಇದರಿಂದ ಯುವ ಪ್ರತಿಭೆಗಳಿಗೆ ಅವಕಾಶಗಳು ಮತ್ತು ಹಿಂದೂಸ್ತಾನಿ ಸಂಗೀತ ಪರಂಪರೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಂಗೀತ ಮತ್ತು ಸಾಹಿತ್ಯಕ್ಕೆ ಧಾರವಾಡದಲ್ಲಿರುವ ಇತಿಹಾಸ ಮಹತ್ವ ಮತ್ತು ಅವಕಾಶಗಳು ಬೇರೆ ಜಿಲ್ಲೆಗಳಲ್ಲಿ ಕಡಿಮೆ. ಡಾ. ಮಲ್ಲಿಕಾರ್ಜುನ ಮನಸೂರ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಸಂಗೀತ ಕಚೇರಿ ಆಯೋಜಿಸಲು ಕ್ರಿಯಾಯೋಜನೆ ರೂಪಿಸಬೇಕು. ಹಿಂದೂಸ್ತಾನಿ ಸಂಗೀತ ಪರಂಪರೆ ಮುಂದುವರಿಯಲು ಮನಸೂರ ಟ್ರಸ್ಟ್‌ನಿಂದ ಕ್ರಿಯಾಶೀಲವಾದ ಕಾರ್ಯ ಚಟುವಟಿಕೆ ಆಯೋಜಿಸಲಾಗುತ್ತದೆ ಎಂದರು. ಪದ್ಮಶ್ರೀ ಎಂ. ವೆಂಕಟೇಶಕುಮಾರ ಅವರಂತ ದಿಗ್ಗಜರು ಟ್ರಸ್ಟ್ ಸದಸ್ಯರಾಗಿದ್ದಾರೆ. ಅವರ ಸಲಹೆ, ಮಾರ್ಗದರ್ಶನದಲ್ಲಿ ಉತ್ತಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದು. ಕೆಲವು ಸದಸ್ಯರ ನಿಧನದಿಂದಾಗಿ ಟ್ರಸ್ಟ್ ಕಾರ್ಯಕಾರಿಕೆಗೆ ಹೊಸ ಸದಸ್ಯರನ್ನು ನೇಮಿಸಲು ಸರ್ಕಾರಕ್ಕೆ ಸಭೆಯ ನಡುವಳಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ತಿಳಿಸಿದರು.

ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ. 10ರಂದು ಸಂಘಟಿಸಲು ತಿಳಿಸಿದ ಜಿಲ್ಲಾಧಿಕಾರಿ, ಶೀಘ್ರದಲ್ಲಿ ಜಿಲ್ಲೆಯಲ್ಲಿ ಇರುವ ಎಲ್ಲ ಸರ್ಕಾರಿ ಟ್ರಸ್ಟ್‌ಗಳ ಸಭೆ ಕರೆದು, ಅವುಗಳ ಆಶಯಗಳಿಗೆ ಅನುಗುಣವಾಗಿ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ 2024-25ನೇ ಸಾಲಿನ ಕ್ರಿಯಾಯೋಜನೆ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಿ, ಅನುಮೋದಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಟ್ರಸ್ಟ್ ಸದಸ್ಯರಾದ ಪದ್ಮಶ್ರೀ ಎಂ. ವೆಂಕಟೇಶಕುಮಾರ, ಡಾ. ದಿಲೀಪ್ ದೇಶಪಾಂಡೆ, ಶಂಕರ ಕುಂಬಿ, ಅಕ್ಕಮಹಾದೇವಿ ಆಲೂರ ಸಲಹೆ, ಸೂಚನೆ ನೀಡಿದರು. ಪ್ರಮೋದ ಎಲಿಗಾರ, ಸಹಾಯಕ ವಾರ್ತಾಧಿಕಾರಿ ಡಾ. ಸುರೇಶ ಹಿರೇಮಠ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತಕರು ಭಾಗವಹಿಸಿದ್ದರು.