ಭಕ್ತರು ನೀಡುವ ಹರಕೆ ಗೋವುಗಳನ್ನು ಗೋಶಾಲೆಗೆ ಕಳುಹಿಸಲು ಕ್ರಮ: ದರ್ಶನ್ ಧ್ರುವನಾರಾಯಣ

| Published : Jan 18 2025, 12:47 AM IST

ಸಾರಾಂಶ

ಪಶು ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಗಾಯಗೊಂಡಿರುವ ಕರುವಿಗೆ ಔಷದೋಪಚಾರದೊಂದಿಗೆ ಆರೈಕೆ ಮಾಡಲಾಗುತ್ತಿದ್ದು, ಗಾಯಗೊಂಡಿದ್ದ ಕರು ಚೇತರಿಸಿಕೊಳ್ಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕಿಡಿಗೇಡಿಗಳು ಮಾಡಿರುವ ದುಷ್ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ಈಗಾಗಲೇ ಆರೋಪಿ ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ಕೊಡಿಸಲು ಪೊಲೀಸರು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತರು ನೀಡುವ ಹರಿಕೆ ಗೋವುಗಳನ್ನು ನೋಂದಾಯಿಸಿಕೊಂಡು ಬಳಿಕ ಅವುಗಳನ್ನು ಪೋಷಣೆ ಮಾಡಿ ನಂತರ ಗೋಶಾಲೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಆನೆ ಲಾಯದ ಆವರಣದಲ್ಲಿ ತೆರೆದಿರುವ ಗೋ ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿ ದುಷ್ಕರ್ಮಿಯಿಂದ ಮಾರಕಾಸ್ತ್ರದ ದಾಳಿಗೆ ತುತ್ತಾಗಿ ಬಾಲ ಕತ್ತರಿಸಿ ಹೋಗಿರುವ ಕರುವನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪಶು ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಗಾಯಗೊಂಡಿರುವ ಕರುವಿಗೆ ಔಷದೋಪಚಾರದೊಂದಿಗೆ ಆರೈಕೆ ಮಾಡಲಾಗುತ್ತಿದ್ದು, ಗಾಯಗೊಂಡಿದ್ದ ಕರು ಚೇತರಿಸಿಕೊಳ್ಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಇನ್ನು ಕಿಡಿಗೇಡಿಗಳು ಮಾಡಿರುವ ದುಷ್ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ಈಗಾಗಲೇ ಆರೋಪಿ ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ಕೊಡಿಸಲು ಪೊಲೀಸರು ಮುಂದಾಗಿದ್ದಾರೆ. ಇದರೊಂದಿಗೆ ದೇವಾಲಯಕ್ಕೆ ಭಕ್ತರು ಹರಕೆ ಕಾಣಿಕೆಯಾಗಿ ನೀಡಿರುವ ಗೋವುಗಳನ್ನು ಗೋ ಸಂರಕ್ಷಣಾ ಕೇಂದ್ರಕ್ಕೆ ಕರೆ ತಂದು ಉಪಚರಿಸಿ ಬಳಿಕ ಗೋಶಾಲೆಗೆ ಕಳುಹಿಸಲು ಸೂಚಿಸಲಾಗಿದ್ದು, ಜೊತೆಗೆ ಭಕ್ತರು ನೀಡುವ ಹರಕೆ ಗೋವುಗಳನ್ನು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಇನ್ನು ದೇವಾಲಯದ ಆನೆ ಲಾಯದಲ್ಲಿ ಶುಕ್ರವಾರ ತೆರೆಯಲಾಗಿರುವ ಗೋ ಸಂರಕ್ಷಣಾ ಕೇಂದ್ರದಲ್ಲಿ ಐದಾರು ಗೋವುಗಳನ್ನು ಇರಿಸಿ ದೇವಾಲಯದ ವತಿಯಿಂದ ಆರೈಕೆ ಮಾಡಲಾಗಿದೆ.

ಬಿಡಾಡಿ ದನಗಳನ್ನು ಪಿಂಜಾರ ಪೋಲಿಗೆ:

ನಂಜನಗೂಡು ನಗರಸಭೆ ವ್ಯಾಪ್ತಿಯಲ್ಲಿ ಬಿಡಾಡಿ ದನಗಳು ಬೇಕಾಬಿಟ್ಟು ಓಡಾಡುತ್ತಿದ್ದು, ಇದರಿಂದ ರಸ್ತೆ ಅಪಘಾತ ಸಂಭವಿಸುವ ಹಾಗೂ ಪಾದಚಾರಿಗಳು ವಾಹನ ಸವಾರರಿಗೆ ಮತ್ತು ಪ್ರಾಣಿಗಳಿಗೂ ಹಾನಿ ಆಗುವ ಸಂಭವವಿರುವುದರಿಂದ ಬಿಡಾಡಿ ದನಗಳನ್ನು ಸದರಿ ಜಾನುವಾರುಗಳನ್ನು ನಗರಸಭೆ ವಶಕ್ಕೆ ಪಡೆದು ಪಿಂಜಾರ ಪೋಲಿಗೆ ನೀಡಲಾಗುವುದೆಂದು ನಗರಸಭೆಯಿಂದ ಎಚ್ಚರಿಕೆ ನೀಡಲಾಗಿದೆ.

ನಗರಸಭೆ ಪೌರಾಯುಕ್ತ ವಿಜಯ್ ಮಾತನಾಡಿ, ಸಾರ್ವಜನಿಕ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ನಂಜನಗೂಡು ನಗರಸಭೆ ವ್ಯಾಪ್ತಿಯ ಎಲ್ಲ ಬಿಡಾಡಿ ದನಗಳ ಮಾಲೀಕರು ತಮ್ಮ ಸ್ವಾಧೀನದಲ್ಲಿರುವ ಯಾವುದೇ ಹಸು ಅಥವಾ ದನಗಳನ್ನು ವ್ಯವಸ್ಥೆಯಲ್ಲಿಟ್ಟುಕೊಳ್ಳದೇ ಸಾರ್ವಜನಿಕ ಮಾರ್ಗದಲ್ಲಿ ಅಥವಾ ದಾರಿಯಲ್ಲಿ ಬಿಟ್ಟು ಯಾವುದೇ ವ್ಯಕ್ತಿಗೆ ಅಪಾಯ ಮತ್ತು ಅಡ್ಡಿಪಡಿಸಿದ್ದಲ್ಲಿ ಅಂತಹ ಮಾಲೀಕರಿಗೆ ಐಪಿಸಿ ಸೆಕ್ಷನ್ 283ರ ಪ್ರಕಾರ ಶಿಕ್ಷೆಗೆ ಒಳಪಡಿಸುವ ಮತ್ತು ವ್ಯಕ್ತಿಯ ಸ್ವಾಧೀನದಲ್ಲಿರುವ ಪ್ರಾಣಿಗಳಿಂದ ಮನುಷ್ಯನ ಪ್ರಾಣಕ್ಕೆ ಅಪಾಯವಾದರೆ ಅಂತಹ ಮಾಲೀಕ ವ್ಯಕ್ತಿ ವಿರುದ್ಧ ಐಪಿಸಿ ಸೆಕ್ಷನ್ 289 ಪ್ರಕಾರ ಪ್ರಕರಣ ದಾಖಲಿಸಲು ಅವಕಾಶವಿರುತ್ತದೆ. ಆದ್ದರಿಂದ ಜಾನುವಾರುಗಳನ್ನು ನಗರಸಭಾ ವ್ಯಾಪ್ತಿಯ ರಸ್ತೆಯಲ್ಲಿ ಬಿಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಅಕಸ್ಮಾತ್ ಬಿಡಾಡಿ ದನಗಳಿಂದ ಅಪಘಾತ ಅಥವಾ ಅವಗಡ ಸಂಭವಿಸಿ ಹಾನಿಯಾದರೆ ಜಾನುವಾರುಗಳ ಮಾಲೀಕರ ಜವಾಬ್ದಾರರೆಂದು ತಿಳಿಯಪಡಿಸಿ 1964 ರ ಪುರಸಭೆಗಳ ಅಧಿನಿಯಮದ 239 ರಂತೆ ದಂಡವನ್ನು ಸಹಾ ವಿಧಿಸಲಾಗುವುದು ಹಾಗೂ ನಂತರ ಮರುಕಳಿಸಿದರೆ ಸದರಿ ಜಾನುವಾರುಗಳನ್ನು ನಗರಸಭೆ ವಶಕ್ಕೆ ಪಡೆದು ಪಿಂಜಾರಪೋಲಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.