ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪುರಸಭಾ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಿಗೆ 24 ಗಂಟೆಗಳ ಕಾಲ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುರಸಭಾ ಹಿರಿಯ ಸದಸ್ಯ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಎಂ.ಎಲ್ ದಿನೇಶ್ ಹೇಳಿದರು.ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಸರ್ಕಾರದಿಂದ ಇತ್ತೀಚೆಗೆ ಪುರಸಭಾ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ ಸದಸರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಈಗಾಗಲೇ ಮಂಡ್ಯ ನೀರು ಸರಬರಾಜು ಇಲಾಖೆಯಿಂದ 22.5 ಕೋಟಿ ರು. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರ ಕಾಮಗಾರಿ ಆರಂಭಗೊಂಡು ಪುರ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಲಿದೆ. ಜೊತೆಗೆ 22 ಕೋಟಿ ರು. ವೆಚ್ಚದಲ್ಲಿ ಹೊಸದಾಗಿ ಹಾಗೂ ಸಂಪರ್ಕ ಕಡಿತಗೊಂಡಿದ್ದ ಯುಜಿಡಿ ಕಾಮಗಾರಿ ಸಹ ಆರಂಭಗೊಳ್ಳಲಿದೆ ಎಂದರು.
ಪುರಸಭಾ ಸದಸ್ಯ ಎಸ್.ನಂದೀಶ್ ಮಾತನಾಡಿ, ಪಟ್ಟಣದ 6, 7 ಹಾಗೂ 14ನೇ ವಾರ್ಡ್‌ಗಳಲ್ಲಿನ ಜನರು ಹಲವಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ಬಾರಿ ತೊಂದರೆ ಅನುಭವಿಸುತ್ತಿದ್ದರು. ಈ ಸಂಬಂಧ ಪುರಸಭೆ ಹಾಗೂ ಶಾಸಕರ ಗಮನಕ್ಕೆ ತಂದು ನೀರಿನ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಲಾಗಿತ್ತು. ಇದೀಗ 22.5 ಕೋಟಿ ರು. ವೆಚ್ಚದಲ್ಲಿ ಮುಂದಿನ 1 ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಇಲ್ಲಿನ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆ ಹರಿಯಲಿದೆ ಎಂದರು.ಶ್ರೀರಂಗಪಟ್ಟಣ ಸಹ ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ನಿತ್ಯ ಸಾವಿರಾರು ಜನರು ಬಂದು ಹೋಗಲಿದ್ದಾರೆ. ಪುರಸಭೆ ವತಿಯಿಂದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿದರೂ ಹಲವು ಬಾರಿ ಅಶುಚಿತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹಾಗಾಗಿ ಮಧ್ಯಪ್ರದೇಶದ ಇಂಧೂರ್‌ನಲ್ಲಿ ಕಸ ವಿಲೆವಾರಿ ಹಾಗೂ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ ನಗರವನ್ನು ಸ್ವಚ್ಚವಾಗಿ ಇಟ್ಟಿಕೊಂಡಿರುವುದಾಗಿ ತಿಳಿದು ಬಂದಿದೆ ಎಂದರು.
ಸ್ವಚ್ಛತೆಗೆ ಹೆಸರಾಗಿರುವ ಇಂಧೂರ್‌ಗೆ ಪುರಸಭೆ ವತಿಯಿಂದ ಸದಸ್ಯರೊಂದಿಗೆ ಪ್ರವಾಸ ಕೈಗೊಂಡರೆ ಅಲ್ಲಿನ ಮಾದರಿಯಲ್ಲೇ ಅಭಿವೃದ್ದಿ ಪಡಿಸಲು ಸಹಕಾರಿಯಾಗಲಿದೆ ಎಂದು ಸದಸ್ಯ ಎಂ.ನಂದೀಶ್ ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಅವರನ್ನು ಒತ್ತಾಯಿಸಿದರು.ನಂತರ ಪುರಸಭಾ ನಾಮನಿರ್ದೇಶಿತ ಸದಸ್ಯರಾದ ಕೆ.ಬಿ ಬಸವರಾಜು, ಪ್ರದೀಪ, ಲಿಯಾಜ್‌ಪಾಷ, ಪ್ರದೀಪ್‌ಕುಮಾರ್ ಹಾಗೂ ನಾಗರತ್ನ ಅವರನ್ನು ಅಭಿನಂದಿಸಲಾಯಿತು. ಈ ವೇಳೆ ಪುರಸಭಾ ಸದಸ್ಯರಾದ ದಯಾನಂದ್, ರಾಧಶ್ರೀಕಂಠು, ಮಂಗಳಮ್ಮ, ನಿರ್ಮಲ, ಗೀತಾ ಮಹೇಶ್, ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿದಂತೆ ಇತರೆ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.