ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸ ಮಾಡಿದರೆ ಕ್ರಮ: ಡಿವೈಎಸ್ಪಿ ಮಲ್ಲೇಶ್

| Published : Apr 01 2025, 12:45 AM IST

ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸ ಮಾಡಿದರೆ ಕ್ರಮ: ಡಿವೈಎಸ್ಪಿ ಮಲ್ಲೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತಹ ಕೆಲಸ ಯಾರೇ ಮಾಡಿದರು ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತಹ ಕೆಲಸ ಯಾರೇ ಮಾಡಿದರು ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೂಡ್ಲಿಗಿ ಡಿವೈಎಸ್ ಪಿ. ಮಲ್ಲೇಶ್ ದೊಡ್ಡಮನಿ ಎಚ್ಚರಿಕೆ ನೀಡಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ಸಂಜೆ ನಡೆದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ಜೋಡು ರಥೋತ್ಸವದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಥೋತ್ಸವ ವೇಳೆ ದೇವಸ್ಥಾನದ ಬಾವುಟ ಹೊರತು ಪಡಿಸಿ ಬೇರೆ ಯಾವುದೇ ಬಾವುಟಗಳಿಗೆ ನಿಷೇಧ ಹಾಕಲಾಗಿದೆ. ತೇರು ಎಳೆಯುವಾಗ ಸೊನ್ನೆ ಹಾಕುವ ಯುವಕರು ಸಹ ಸೆಡ್ಡು ಹೊಡೆಯುವಂತಿಲ್ಲ. ಹೊಸ ರಥಗಳು ಆಗಿರುವುದರಿಂದ ತೇರಿನ ಗಾಲಿಗಳಿಗೆ ಯಾರು ತೆಂಗಿನ ಕಾಯಿ ಹೊಡೆಯುವ ಹಾಗಿಲ್ಲ ಮತ್ತು ಜೋಡು ರಥೋತ್ಸವ ಜಾತ್ರೆಯಲ್ಲಿ ಸಾಕಷ್ಟು ಜನಸಂದಣಿ ಸೇರಿರುತ್ತಾರೆ. ಜನರಿಗೆ ಕಿರಿಕಿರಿ ಉಂಟಾಗುವ ಮತ್ತು ಕರ್ಕಶ ಶಬ್ದ ಉಂಟು ಮಾಡುವ ಪೀಪಿಗಳ ಮಾರಾಟ ನಿಷೇಧಿಸಲಾಗಿದೆ ಎಂದು ಅವರು ವಿವರಿಸಿದರು.

ಈ ವರ್ಷ ಹೊಸ ತೇರು ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಜನರು ಭಾಗವಹಿಸುತ್ತಾರೆ. ಯಾವುದೇ ಅಹಿತಕರ ಘಟನಗಳು ಉಂಟಾಗದಂತೆ ನಮ್ಮ ಪೊಲೀಸ್ ಸಿಬ್ಬಂದಿಗಳನ್ನು ಮಫ್ತಿಯಲ್ಲಿ ಎಲ್ಲಾ ಕಡೆ ಓಡಾಡುತ್ತಿರುತ್ತಾರೆ. ಎಲ್ಲದನ್ನೂ ಗಮನಿಸುತ್ತಿರುತ್ತಾರೆ.

ಯಾರಾದರೂ ಅನುಚಿತ ವರ್ತನೆ ಮಾಡಿದರೆ ಅಂತವರ ಮೇಲೆ ತಕ್ಷಣವೇ ಸೂಕ್ತ ಕಾನೂನು ಕ್ರಮ‌ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಸಿಪಿಐ ವಿಕಾಸ್ ಲಮಾಣಿ ಮಾತನಾಡಿ, ರಥೋತ್ಸವದಂದು ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಮರಿಯಮ್ಮನಹಳ್ಳಿ ಪಟ್ಟಣದ ಮೂಲಕ ವಿವಿಧ ಊರುಗಳಿಗೆ ಹಾದು ಹೋಗುವ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ 50 ರಸ್ತೆಯ ದೇವಲಾಪುರದ ಮೂಲಕ ಟ್ರಾಫಿಕ್ ನ್ನು ಡಿವೈಡ್ ಮಾಡಲಾಗಿದೆ. ಅತ್ಯಂತ ಆಕರ್ಷಣೆ ಮತ್ತು ಸುಂದರವಾಗಿ ಜೋಡು ರಥಗಳ ನಿರ್ಮಾಣವಾಗಿದ್ದು, ಹೊಸತೇರು, ದೇವಸ್ಥಾನ ನವೀಕರಣ, ಹೊಸನೀರು ಎನ್ನುವ ವಾಕ್ಯದೊಂದಿಗೆ ಮರಿಯಮ್ಮನಹಳ್ಳಿಯ ಜನರು ಪಡೆದುಕೊಂಡಿದ್ದಾರೆ. ರಥೋತ್ಸವನ್ನು ಅತ್ಯಂತ ಶ್ರದ್ದಾಭಕ್ತಿಯಿಂದ ಆಚರಿಸುವ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಪಪಂ ಮುಖ್ಯಾಧಿಕಾರಿ ಎಂ. ಖಾಜಾ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಸಿಬ್ಬಂದಿ ತೆಗೆದುಕೊಂಡು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಧೂಳು ನಿವಾರಣೆಗೆ ರಸ್ತೆಗೆ ನೀರು ಹಾಕಲಾಗುತ್ತದೆ. ಭದ್ರತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ರಥೋತ್ಸವದಂದು ಪಟ್ಟಣದಲ್ಲಿ ಬ್ಯಾನರ್ ಮತ್ತು ಬಂಟಿಂಗ್ ನಿಷೇಧಿಸಲಾಗಿದೆ ಎಂದು ವಿವರಿಸಿದರು.

ಪಪಂ ಅಧ್ಯಕ್ಷ ಆದಿಮನಿ ಹುಸೇನ್‌ ಭಾಷ, ಉಪತಹಶೀಲ್ದಾರ್ ಶ್ರೀಧರ್, ಪಿಎಸ್.ಐ ಮೌನೇಶ್ ರಾಠೋಡ್, ಜೆಸ್ಕಾಂನ ಅಧಿಕಾರಿ ವೆಂಕಟೇಶ್‌, ಸ್ಥಳೀಯ ಮುಖಂಡರಾದ ಗೋವಿಂದರ ಪರುಶುರಾಮ, ಯು. ವೆಂಕಟೇಶ್‌, ಎನ್‌.ಎಸ್‌. ಬುಡೇನ್‌ ಸಾಹೇಬ್‌, ಗುಂಡಾಸ್ವಾಮಿ, ಎಂ. ಬದ್ರಿನಾಥ ಶೆಟ್ಟಿ, ಸಿ. ಮಂಜುನಾಥ, ರವಿಕಿರಣ್‌, ಎಲ್‌. ಚಂದ್ರಶೇಖರ್‌, ಎಲ್‌. ಉಮೇಶ್‌, ಕಲ್ಲಾಳ್‌ ಪರುಶುರಾಮಪ್ಪ, ಜಿ.ವಿ. ಸುಬ್ಬರಾವ್‌, ಈ. ರಮೇಶ್‌, ಲೋಕಪ್ಪನಹೊಲದ ಹನುಮಂತಪ್ಪ ಸಭೆಯಲ್ಲಿ ಮಾತನಾಡಿದರು.

ಪಿಎಸ್‌ಐ ಬೀಬಿ ಮರಿಮ್, ಸ್ಥಳೀಯ ಮುಖಂಡರಾದ ತಳವಾರ್‌ ದೊಡ್ಡ ರಾಮಣ್ಣ, ತಳವಾರ್‌ ಹುಲುಗಪ್ಪ, ಬಿ. ವಿಜಯಕುಮಾರ್‌, ವೆಂಕಟೇಶ್‌, ದುರುಗಪ್ಪ, ಮಂಜುನಾಥ, ಬಸವರಾಜ ಸೇರಿದಂತೆ ವಿವಿಧ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.