ಕೊಳವೆ ಬಾವಿ ಕೊರೆಯಲು ಹೆಚ್ಚಿನ ದರ ವಿಧಿಸಿದ್ರೆ ಕ್ರಮ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

| Published : Mar 28 2024, 12:45 AM IST

ಕೊಳವೆ ಬಾವಿ ಕೊರೆಯಲು ಹೆಚ್ಚಿನ ದರ ವಿಧಿಸಿದ್ರೆ ಕ್ರಮ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ತಮ್ಮ ಜಮೀನುಗಳಲ್ಲಿ ಕೊಳವೆ ಬಾವಿಗಳ ಕೊರೆಸಲು ಮಧ್ಯವರ್ತಿಗಳ ಸಲಹೆ ಪಡೆಯದೇ ಹಾಗೂ ಮಧ್ಯವರ್ತಿಗಳ ಮುಖಾಂತರ ವ್ಯವಹರಿಸದೇ, ನೇರವಾಗಿ ರಿಗ್ ಮಾಲೀಕರ ಜೊತೆ ವ್ಯವಹರಿಸಿದಲ್ಲಿ ಅನುಮೋದಿತ ಬೆಲೆಯನ್ವಯ ತಮ್ಮ ಕೆಲಸ ಮಾಡಿಕೊಳ್ಳಬಹುದು. ರಿಗ್ ಮಾಲೀಕರು ತಾವು ಅನುಷ್ಠಾನಗೊಳಿಸುತ್ತಿರುವ ಕೊಳವೆ ಬಾವಿಗಳ ವಿವರಗಳ ಪ್ರತಿ ಮಾಹೆ ನಿಗದಿತ ನಮೂನೆಗಳಲ್ಲಿ ಹಿರಿಯ ಭೂ ವಿಜ್ಞಾನಿಗಳಿಗೆ ಸಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬರಗಾಲದ ಹಿನ್ನೆಲೆ ಮಾನವೀಯತೆ ದೃಷಿಯಿಂದ ರೈತರಿಗೆ ಎಸ್‍ಆರ್ ದರದಂತೆ ಕೊಳವೆ ಬಾವಿಗಳ ಕೊರೆದು ಕೊಡಬೇಕು. ಹೆಚ್ಚಿನ ದರಗಳ ವಿಧಿಸಿ ರೈತರಿಂದ ಹಣ ಪಡೆಯುವ ಕುರಿತು ದೂರುಗಳು ಬಂದಲ್ಲಿ, ಅಂತಹ ಕೊಳವೆ ಬಾವಿ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸರ್ಕಾರದ ಇಲಾಖೆಗಳ ವಿವಿಧ ಯೋಜನೆಗಳಡಿ ಹಾಗೂ ಖಾಸಗಿ ರೈತರ ಜಮೀನುಗಳಲ್ಲಿ ಕೊಳವೆ ಬಾವಿಗಳ ಕೊರೆಯುವ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ತಾಲೂಕು ಮಟ್ಟದಲ್ಲಿ ಬರ ಪರಿಸ್ಥಿತಿ ನಿರ್ವಹಿಸಲು ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರನ್ನು ಒಳಗೊಂಡ ಸಮಿತಿ ರಚಿಸಿದ್ದು, ರಿಗ್ ಮಾಲೀಕರು, ಏಜೆನ್ಸಿಗಳು ಕೊಳವೆ ಬಾವಿ ಕೊರೆಯಲು ಅಸಮಂಜಸ ದರಗಳ ರೈತರಿಗೆ ಬೇಡಿಕೆ ಇಟ್ಟಲ್ಲಿ, ರೈತರಿಗೆ ಕಿರುಕುಳ ನೀಡಿದಲ್ಲಿ, ಅಂತಹ ರೈತರು, ಬಾಧಿತರು ದೂರುಗಳನ್ನು ಈ ಸಮಿತಿಗೆ ಸಲ್ಲಿಸಲು ಅವಕಾಶ ಇರುತ್ತದೆ. ಸಮಿತಿಯು ಇಂತಹ ದೂರುಗಳ ಪರಿಶೀಲಿಸಿ 3 ದಿನಗಳಲ್ಲಿ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.ರೈತರು ತಮ್ಮ ಜಮೀನುಗಳಲ್ಲಿ ಕೊಳವೆ ಬಾವಿಗಳ ಕೊರೆಸಲು ಮಧ್ಯವರ್ತಿಗಳ ಸಲಹೆ ಪಡೆಯದೇ ಹಾಗೂ ಮಧ್ಯವರ್ತಿಗಳ ಮುಖಾಂತರ ವ್ಯವಹರಿಸದೇ, ನೇರವಾಗಿ ರಿಗ್ ಮಾಲೀಕರ ಜೊತೆ ವ್ಯವಹರಿಸಿದಲ್ಲಿ ಅನುಮೋದಿತ ಬೆಲೆಯನ್ವಯ ತಮ್ಮ ಕೆಲಸ ಮಾಡಿಕೊಳ್ಳಬಹುದು. ರಿಗ್ ಮಾಲೀಕರು ತಾವು ಅನುಷ್ಠಾನಗೊಳಿಸುತ್ತಿರುವ ಕೊಳವೆ ಬಾವಿಗಳ ವಿವರಗಳ ಪ್ರತಿ ಮಾಹೆ ನಿಗದಿತ ನಮೂನೆಗಳಲ್ಲಿ ಹಿರಿಯ ಭೂ ವಿಜ್ಞಾನಿಗಳಿಗೆ ಸಲ್ಲಿಸಬೇಕು. ವಿಫಲವಾದ ಕೊಳವೆ ಬಾವಿಗಳ ಕೇಸಿಂಗ್ ಪೈಪ್ ತೆಗೆದ ನಂತರ ಕೊಳವೆ ಬಾವಿ ಸಂಪೂರ್ಣ ಮುಚ್ಚಬೇಕು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಆರ್‍ಡಬ್ಲ್ಯುಎಸ್ ಕಾರ್ಯಪಾಲಕ ಅಭಿಯಂತರ ರಾಜೇಂದ್ರ ಪ್ರಸಾದ್, ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ನಿರ್ಮಲಾ ನಾದನ್ ಮತ್ತಿತರರಿದ್ದರು. ಬರ ಪರಿಸ್ಥಿತಿ ಇರುವುದರಿಂದ ಬೇಸಿಗೆ ವೇಳೆ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವುದು ಅನಿವಾರ್ಯವಾಗಿದ್ದು, ತುರ್ತು ಕೆಲಸ ಹಿನ್ನೆಲೆಯಲ್ಲಿ ಬಾಕಿ ಇರುವ ಎಲ್ಲಾ ಕೊಳವೆ ಬಾವಿಗಳ ಇನ್ನೆರಡು ದಿನಗಳಲ್ಲಿ ಕೊರೆದು ಪೂರ್ಣಗೊಳಿಸಬೇಕು. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯತನ ತೋರಿದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ಹಾಗೂ ಸೂಕ್ತ ಕಾನೂನುಗಳಡಿ ಕ್ರಮ ಕೈಗೊಳ್ಳಲಾಗುವುದು. ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ