ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಶಾಲಾ ಮಕ್ಕಳನ್ನು ತರಕಾರಿ, ಮೊಟ್ಟೆ ತರಲು ಹಾಗೂ ಇತರೆ ಚಟುವಟಿಕೆಗಳಿಗೆ ಬಳಕೆ ಮಾಡುವುದು ಕಂಡುಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ ಶಿಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ.ಬುಧವಾರ ಪಟ್ಟಣದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕ ವಸಂತ್ ಮತ್ತು ಇತರೆ ಸಹ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಶಾಲೆಯ ಮಕ್ಕಳನ್ನು ಮೊಟ್ಟೆ ಮತ್ತು ತರಕಾರಿ ತರಲು ಬಳಕೆ ಮಾಡಿಕೊಂಡಿರುವ ಕುರಿತು ಸಾರ್ವಜನಿಕ ವಲಯ ಮತ್ತು ಪೋಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಶಾಲೆಯಲ್ಲಿ ಶಿಕ್ಷಕರು, ಅಡುಗೆಯವರು ಇದ್ದರೂ ಕೂಡ ಶಾಲಾ ಅವಧಿಯಲ್ಲಿ ಹೇಗೆ ಮಕ್ಕಳಿಂದ ಈ ಕೆಲಸ ಮಾಡಿಸಿದ್ದೀರಿ ಎಂದು ಮುಖ್ಯ ಶಿಕ್ಷಕ ವಸಂತ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ ಈ ಬಗ್ಗೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.
ಬಿಇಒ ಕಚೇರಿ ಆವರಣದ ಶಾಲೆಯಲ್ಲಿನ ಮಕ್ಕಳಿಂದ ಇಂತಹ ಕೆಲಸವನ್ನು ಮಾಡಿಸಲು ಹೇಗೆ ಸಾಧ್ಯವಾಯಿತು. ಅಧಿಕಾರಿಗಳೆಂದರೆ ಭಯವಿಲ್ಲವೇ? ಅಲ್ಲದೆ ಮಕ್ಕಳು ಪಟ್ಟಣದಿಂದ ಬಂದವರಾಗಿದ್ದಾರೆ. ಅವರ ಪೋಷಕರು ಮಕ್ಕಳು ತರಕಾರಿ, ಮೊಟ್ಟೆಯನ್ನು ಕೈಯಲ್ಲಿಡಿದು ಬರುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಯಾವುದಾದರೂ ಅನಾಹುತ ನಡೆದರೆ ಯಾರೂ ಹೊಣೆ? ಇಂತಹ ಬೇಜವಾಬ್ದಾರಿಯನ್ನು ನಾನು ಸಹಿಸುವುದಿಲ್ಲ ಎಂದು ಶಿಕ್ಷಕರು, ಅಡುಗೆ ಸಿಬ್ಬಂದಿ ವಿರುದ್ಧ ಹರಿಹಾಯ್ದರು.ಶತಮಾನ ಪೂರೈಸಿರುವ ಈ ಶಾಲೆಗೆ ಸರ್ಕಾರದಿಂದ ವಿಶೇಷ ಅನುದಾನ ಬರುತ್ತಿದೆ. ಇದರಿಂದ ಅಗತ್ಯವಾದ ಮೂಲಸೌಕರ್ಯಗಳು ಮಕ್ಕಳಿಗೆ ದೊರೆಯಲಿದೆ. ಆಂಗ್ಲ ಮಾಧ್ಯಮ ಶಾಲೆಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ಪೋಷಕರ ವಿಶ್ವಾಸ ಕೂಡ ಅಧಿಕವಾಗಿದೆ. ಇದನ್ನು ಅರಿತು ಶಿಕ್ಷಕರು ಕಾರ್ಯನಿರ್ವಹಿಸಬೇಕು. ಮತ್ತೊಮ್ಮೆ ಈ ರೀತಿಯಾಗಿ ವಿದ್ಯಾರ್ಥಿಗಳ ದುರ್ಬಳಕೆ ಕಂಡುಬಂದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಟ್ಟಣ ಸೇರಿದಂತೆ ತಾಲೂಕಿನ ಯಾವುದೇ ಶಾಲೆಗಳ ಮಕ್ಕಳನ್ನು ತರಕಾರಿ, ಮೊಟ್ಟೆ ಹಾಗೂ ಇತರೆ ಕಾರ್ಯಗಳಿಗೆ ಬಳಕೆ ಮಾಡುವುದು ಕಂಡುಬಂದರೆ ಆಯಾ ಕ್ಲಸ್ಟರ್‌ನ ಅಧಿಕಾರಿಗಳನ್ನು ನೇರವಾಗಿ ಹೊಣೆಯನ್ನಾಗಿ ಮಾಡಲಾಗುವುದು. ಕಡ್ಡಾಯವಾಗಿ ವಾರದ ಎಲ್ಲಾ ದಿನವು ಮೊಟ್ಟೆ, ಬಾಳೆ ಹಣ್ಣುಗಳನ್ನು ನೀಡಬೇಕಿದೆ. ಕೆಲವು ಶಾಲೆಗಳಲ್ಲಿ ವಾರದ ಒಂದೆರಡು ದಿನ ಮೊಟ್ಟೆ ನೀಡದೇ ಕೇವಲ ಬಾಳೆ ಹಣ್ಣು ನೀಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಂತಹ ಶಾಲೆಗಳ ಮುಖ್ಯಶಿಕ್ಷಕರ ಬಗ್ಗೆ ಗಮನಹರಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸಭೆಯಲ್ಲಿ ಅಕ್ಷರ ದಾಸೋಹ ಅಧಿಕಾರಿ ರಂಗಸ್ವಾಮಿ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))