ಕಾರವಾರ: ಮಾನವ ಹಕ್ಕುಗಳ ಆಯೋಗದ ಆಯೋಗದ ಹೆಸರನ್ನು ಹೋಲುವಂತೆ ಹೆಸರು ಬಳಸಿ ಕೆಲವು ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗಿವೆ. ಕೆಲವು ಸಂಘ-ಸಂಸ್ಥೆಗಳು ಅಧಿಕಾರಿಗಳನ್ನು ಬೆದರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಂಥವರ ವಿರುದ್ಧ ಆಯೋಗದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಅಂತಹ ಸಂಘಟನೆಗಳು ತಮ್ಮ ವಾಹನದ ಮೇಲೆ ಸಂಘಟನೆಯ ಹೆಸರನ್ನು ಹಾಕಿದ್ದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸಂರಕ್ಷಣೆ ಕುರಿತು ದೂರದಾರರು ನೇರವಾಗಿ ಆಯೋಗಕ್ಕೆ ಪೋಸ್ಟ್ ಅಥವಾ ಆನ್‌ಲೈನ್ ಮೂಲಕ ದೂರು ಸಲ್ಲಿಸಬಹುದು. ದೂರುದಾರರು ಆಯೋಗದಲ್ಲಿ ದೂರು ಸಲ್ಲಿಸಲು ಹಿಂಜರಿದರೆ ದೃಶ್ಯ ಮಾಧ್ಯಮ, ಪತ್ರಿಕೆಯಲ್ಲಿ ಪ್ರಕಟವಾಗುವ ಮಾನವ ಹಕ್ಕುಗಳು ಉಲ್ಲಂಘನೆಯ ಕುರಿತು ವರದಿ ಆಧರಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಾಗಿಸಲಾಗುವುದು ಎಂದು ಅವರು ಹೇಳಿದರು.
ಆಯೋಗದಲ್ಲಿ ಶೇ. 60ರಷ್ಟು ದೂರುಗಳು ಸ್ವಯಂಪ್ರೇರಿತವಾಗಿ ದಾಖಲಾಗಿಸಲಾಗುತ್ತದೆ. ದಾಖಲಾದ ಪ್ರಕರಣಗಳಲ್ಲಿ ಅಧಿಕಾರಿಗಳಿಂದ ಮಾನವ ಹಕ್ಕುಗಳ ಸಂರಕ್ಷಣೆಯಾಗದೇ ಇರುವ ಮತ್ತು ಲೋಪಗಳು ಕಂಡು ಬಂದಲ್ಲಿ ಸತ್ಯಾಸತ್ಯತೆ ಪರಿಶೀಲಿಸಿ ಅಂತಹ ಅಧಿಕಾರಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಮತ್ತು ದೂರುದಾರಿಗೆ ಪರಿಹಾರ ನೀಡಬೇಕಿದ್ದಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದ ಅವರು, ಜಿಲ್ಲೆಯಲ್ಲಿನ ಆಗು-ಹೋಗುಗಳ ಬಗ್ಗೆ ಮಾಧ್ಯಮದವರಿಗೆ ಹೆಚ್ಚಿನ ಮಾಹಿತಿ ಇರುವುದರಿಂದ ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಮಾಧ್ಯಮದವರ ಪಾತ್ರ ಮುಖ್ಯವಾಗಿದೆ ಎಂದರು.ಉತ್ತರ ಕನ್ನಡ ಜಿಲ್ಲೆಯಲ್ಲಿನ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದಾಖಲಾದ 30 ಪ್ರಕರಣಗಳಲ್ಲಿ 27 ಪ್ರಕರಣಗಳು ಇತ್ಯರ್ಥ ಪಡಿಸಲಾಗಿದ್ದು, 3 ಪ್ರಕರಣಗಳಲ್ಲಿ ದೂರುದಾರ ಅಭಿಪ್ರಾಯ ಪಡೆಯಲು ಕಳುಹಿಸಲಾಗಿದೆ ಹಾಗೂ ಇಂದು ಹೊಸದಾಗಿ ಸಲ್ಲಿಕೆಯಾದ 5 ಪ್ರಕರಣಗಳು ದಾಖಲಿಸಿಕೊಂಡು, ಸಂಬಂಧಪಟ್ಟ ಇಲಾಖೆಯಿಂದ ವರದಿ ಪಡೆದು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಆಯೋಗದ ನ್ಯಾಯಾಂಗ ಸದಸ್ಯ ಎಸ್.ಕೆ. ವಂಟಿಗೋಡಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಇದ್ದರು.