ಕಾಡಾನೆ ಭೀಮನನ್ನು ನೋಡಲು ಜನರು ಗುಂಪುಗಟ್ಟುವುದು ಹಾಗೂ ಆನೆಯ ಹತ್ತಿರ ಹೋಗಿ ಫೋಟೋ, ವಿಡಿಯೋ ತೆಗೆಯುವುದು ಅಪಾಯಕಾರಿಯಾಗಿದೆ ಎಂದು ಎಚ್ಚರಿಕೆ ನೀಡಿದ್ದು, ಶಾಂತ ಸ್ವಭಾವ ಹೊಂದಿರುವ ಕಾಡಾನೆ ಭೀಮನನ್ನು ಕಣ್ಣಾರೆ ನೋಡಲು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆನೆಯ ಹತ್ತಿರ ಹೋಗಿ ಫೋಟೋ ತೆಗೆಯಲು, ವಿಡಿಯೋ ಮಾಡಲು ಮುಂದಾಗುತ್ತಿದ್ದಾರೆ. ಜನರ ಅತಿರೇಕದ ನಡೆ ಹಾಗೂ ನಿರ್ಲಕ್ಷ್ಯದಿಂದ ಕಾಡಾನೆ ಭೀಮನಿಗೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಮಲೆನಾಡು ಭಾಗದ ಹಲವು ಗ್ರಾಮಗಳು ಹಾಗೂ ತೋಟ ಪ್ರದೇಶಗಳಿಗೆ ಕಾಡಾನೆ ‘ಭೀಮ’ನ ಸಂಚಾರ ನಡೆಸುತ್ತಿರುವುದು ಜನರಲ್ಲಿ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.ಶಾಂತ ಸ್ವಭಾವ ಹೊಂದಿರುವ ಕಾಡಾನೆ ಭೀಮನನ್ನು ಕಣ್ಣಾರೆ ನೋಡಲು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆನೆಯ ಹತ್ತಿರ ಹೋಗಿ ಫೋಟೋ ತೆಗೆಯಲು, ವಿಡಿಯೋ ಮಾಡಲು ಮುಂದಾಗುತ್ತಿದ್ದಾರೆ. ಜನರ ಅತಿರೇಕದ ನಡೆ ಹಾಗೂ ನಿರ್ಲಕ್ಷ್ಯದಿಂದ ಕಾಡಾನೆ ಭೀಮನಿಗೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಅರಣ್ಯಾಧಿಕಾರಿ ಸೌರಭ್ ಕುಮಾರ್ ಅವರು, “ಕಾಡಾನೆ ಭೀಮ ಗ್ರಾಮ ಹಾಗೂ ತೋಟ ಪ್ರದೇಶಗಳಿಗೆ ಸಂಚರಿಸುತ್ತಿರುವುದನ್ನು ಅರಣ್ಯ ಇಲಾಖೆ ಗಂಭೀರವಾಗಿ ಗಮನಿಸಿದೆ. ಆನೆಯ ಚಲನವಲನವನ್ನು ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ತಂಡವು 24 ಗಂಟೆಗಳ ಕಾಲ ನಿಗಾ ವಹಿಸಿ ಮೇಲ್ವಿಚಾರಣೆ ಮಾಡುತ್ತಿದೆ” ಎಂದು ತಿಳಿಸಿದ್ದಾರೆ.ಇದೇ ವೇಳೆ, ಕಾಡಾನೆ ಭೀಮನನ್ನು ನೋಡಲು ಜನರು ಗುಂಪುಗಟ್ಟುವುದು ಹಾಗೂ ಆನೆಯ ಹತ್ತಿರ ಹೋಗಿ ಫೋಟೋ, ವಿಡಿಯೋ ತೆಗೆಯುವುದು ಅಪಾಯಕಾರಿಯಾಗಿದೆ ಎಂದು ಎಚ್ಚರಿಕೆ ನೀಡಿದ ಅವರು, “ಇಂತಹ ನಡೆ ಆನೆಯ ಸ್ವಭಾವದಲ್ಲಿ ಅಶಾಂತಿಯನ್ನು ಉಂಟುಮಾಡಬಹುದು. ಶಾಂತವಾಗಿ ಇರುವ ಆನೆಯೂ ಏಕಾಏಕಿ ಆಕ್ರಮಣಕಾರಿ ಸ್ವಭಾವ ತಾಳುವ ಸಾಧ್ಯತೆ ಇದೆ. ಇದರಿಂದ ಮಾನವ ಜೀವಕ್ಕೂ ಅಪಾಯ ಉಂಟಾಗಬಹುದು” ಎಂದರು. ಈಗಾಗಲೇ ಸಾರ್ವಜನಿಕರಿಗೆ ಮನವಿ ಹಾಗೂ ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಲಾಗಿದೆ. ಅಲ್ಲದೆ, ವನ್ಯಜೀವಿ ಸಂರಕ್ಷಣೆ ಕಾಯ್ದೆ – 1972 (ಸೆಕ್ಷನ್ 216/ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್ಟ್ 19/70) ಪ್ರಕಾರ ಕಾಡು ಪ್ರಾಣಿಗಳಿಗೆ ತೊಂದರೆ ನೀಡುವುದು, ಹಿಂಬಾಲಿಸುವುದು, ಭಯ ಹುಟ್ಟಿಸುವುದು ಅಪರಾಧವಾಗಿದೆ. ಇಂತಹ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಎಫ್‌ಓ ಸೌರಭ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.ಅರಣ್ಯ ಇಲಾಖೆ ವತಿಯಿಂದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿ, ಕಾಡಾನೆ ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆ ಅಥವಾ ಇಟಿಎಫ್ ತಂಡಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಕಾಡಾನೆ ಭೀಮನ ಸುರಕ್ಷತೆ ಜೊತೆಗೆ ಸಾರ್ವಜನಿಕರ ಪ್ರಾಣ ರಕ್ಷಣೆಗೂ ಸಹಕಾರ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.