ಭಾಷಾಭಿಮಾನವಿದ್ದರಷ್ಟೇ ಸಾಲದು ಉಳಿಸುವ ಪ್ರಯತ್ನವಾಗಬೇಕು

| Published : Nov 02 2024, 01:19 AM IST

ಸಾರಾಂಶ

ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡದ ಕುರಿತು ಅಭಿಮಾನ ಹುಟ್ಟಿದರೆ ಸಾಲದು. ನಮ್ಮ ರಕ್ತದ ಕಣಕಣದಲ್ಲಿ ಕನ್ನಡ ಇರಬೇಕು, ಕನ್ನಡಕ್ಕೆ ಸದಾ ಗೌರವ ಕೊಡಬೇಕು. ಕನ್ನಡ ಎಂಬುದು ಕೇವಲ ಭಾಷೆಯಲ್ಲ ಇದು ನಮ್ಮ ಸಂಸ್ಕೃತಿ. ನಮ್ಮ ದೇಶ ಹಾಗೂ ರಾಜ್ಯಕ್ಕಾಗಿ ಸಂಗೋಳ್ಳಿ ರಾಯಣ್ಣ, ಬಸವಣ್ಣ, ಒನಕೆ ಓಬವ್ವ ಕಿತ್ತೂರು ಚೆನ್ನಮ್ಮನಂತಹ ಅಪ್ರತಿಮರು ಹೋರಾಟ ಮಾಡಿದ ನಾಡು ಕರ್ನಾಟಕವಾಗಿದೆ ಎಂದು ಶಾಸಕ ಸಿಮೆಂಟ್‌ ಮಂಜು ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕನ್ನಡ ನೆಲ, ಜಲ, ಸಂಸ್ಕೃತಿ ಬಗ್ಗೆ ಪ್ರತಿಯೋರ್ವರಿಗೆ ಪ್ರೀತಿ ಇದ್ದಲ್ಲಿ ಮಾತ್ರ ಮಾತೃಭಾಷೆಯ ಬೆಳವಣಿಗೆ ಸಾಧ್ಯ ಎಂದು ಶಾಸಕ ಸಿಮೆಂಟ್‌ ಮಂಜು ಹೇಳಿದರು.

ಪಟ್ಟಣದ ಸುಭಾಷ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡದ ಕುರಿತು ಅಭಿಮಾನ ಹುಟ್ಟಿದರೆ ಸಾಲದು. ನಮ್ಮ ರಕ್ತದ ಕಣಕಣದಲ್ಲಿ ಕನ್ನಡ ಇರಬೇಕು, ಕನ್ನಡಕ್ಕೆ ಸದಾ ಗೌರವ ಕೊಡಬೇಕು. ಕನ್ನಡ ಎಂಬುದು ಕೇವಲ ಭಾಷೆಯಲ್ಲ ಇದು ನಮ್ಮ ಸಂಸ್ಕೃತಿ. ನಮ್ಮ ದೇಶ ಹಾಗೂ ರಾಜ್ಯಕ್ಕಾಗಿ ಸಂಗೋಳ್ಳಿ ರಾಯಣ್ಣ, ಬಸವಣ್ಣ, ಒನಕೆ ಓಬವ್ವ ಕಿತ್ತೂರು ಚೆನ್ನಮ್ಮನಂತಹ ಅಪ್ರತಿಮರು ಹೋರಾಟ ಮಾಡಿದ ನಾಡು ಕರ್ನಾಟಕವಾಗಿದೆ. ಕರ್ನಾಟಕ ರಾಜ್ಯ ಕಟ್ಟುವಲ್ಲಿ ಮೈಸೂರು ಮಹಾರಾಜರ ಪಾತ್ರ ಅನನ್ಯವಾಗಿದೆ. ಮೈಸೂರು ಮಹರಾಜರು ಅನೇಕ ಕೊಡುಗೆಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ನಾಲ್ವಡಿ ಕೃಷ್ಣೇಗೌಡರು ಕಷ್ಟಕಾಲದಲ್ಲೂ ಸಹ ಆಣೆಕಟ್ಟೆಯನ್ನು ಕಟ್ಟಿ ಲಕ್ಷಾಂತರ ರೈತರ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಇಂತಹ ರಾಜರು ಹುಟ್ಟಿದ ನಾಡು ಕರ್ನಾಟಕವಾಗಿದೆ. ಇಂದು ಪೋಷಕರು ಮಕ್ಕಳಿಗೆ ಆಂಗ್ಲ ಮಾಧ್ಯಮಕ್ಕೆ ಕೊಡುವ ಆದ್ಯತೆಯನ್ನು ಮಾತೃಭಾಷೆ ಕನ್ನಡಕ್ಕೆ ತೋರಿಸುತ್ತಿಲ್ಲ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೆ ಪೋಷಕರ ಪಾತ್ರವು ಮಹತ್ವದಾಗಿದೆ.ಇಂದು ಐ.ಎ.ಎಸ್ ಪರೀಕ್ಷೆಯನ್ನು ಸಹ ಕನ್ನಡದಲ್ಲಿ ಬರೆಯಬಹುದಾಗಿದೆ ಎಂದರು. ಇತ್ತೀಚಿಗೆ ರೈಲ್ವೆ ಸಚಿವ ವಿ.ಸೋಮಣ್ಣರವರು ರೈಲ್ವೆ ನೇಮಕಾತಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದಾರೆ ಎಂದರು. ಉಪವಿಭಾಗಾಧಿಕಾರಿ ಡಾ.ಎಂ.ಕೆ ಶೃತಿ ರಾಜ್ಯೋತ್ಸವ ಸಂದೇಶ ನೀಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದೆ ಕನ್ನಡ ರಾಜ್ಯೋತ್ಸವ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕ ರಾಜ್ಯಕ್ಕೆ ಮೊದಲು ಇದ್ದ ಹೆಸರು ಮೈಸೂರು ರಾಜ್ಯ ಎಂದು. ೧೯೫೦ರಲ್ಲಿ ಭಾರತವು ಗಣರಾಜ್ಯವಾಯಿತು. ಆ ಬಳಿಕ ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ರಾಜ್ಯಗಳು ರಚನೆಯಾಗಲು ಆರಂಭವಾಯಿತು. ಅಂತೆಯೇ ೧೯೫೬ರ ನವೆಂಬರ್ ೧ರಂದು ವಿವಿಧ ಪ್ರದೇಶಗಳಲ್ಲಿ ಕನ್ನಡ ಮಾತನಾಡುತ್ತಿದ್ದ ಜನರನ್ನು ಒಗ್ಗೂಡಿಸಿ ಹಲವು ಹೋರಾಟಗಾರರು ಹೋರಾಟ ಮಾಡಿದ ಪರಿಣಾಮ ಮೈಸೂರು ರಾಜ್ಯ ರಚನೆಯಾಯಿತು. ೧೯೭೩ರ ನವೆಂಬರ್ ೧ರಂದು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು. ನಮ್ಮ ರಾಜ್ಯವು ದೇಶಕ್ಕೆ ಹಲವು ಕೊಡುಗೆಗಳನ್ನು ನೀಡಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ಆಕರ್ಷಕವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾಜದ ವಿವಿಧ ರಂಗಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ೬ ಜನ ಗಣ್ಯರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಅಕ್ಬರ್ ಜುನೈದ್, ವೈದ್ಯ ಡಾ.ಸುಧಾಕರ್, ಮಾಜಿ ಸೈನಿಕ ಸಂತೋಷ್ ಸಾಲ್ಡನಾ, ಸಾಹಿತಿ ವಿಶ್ವಾಸ್ ಡಿ ಗೌಡ, ಕ್ಯಾಮನಹಳ್ಳಿ ಜ್ಞಾನಜ್ಯೋತಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಮಂಜುನಾಥ ಹಕಾರಿ, ನಾಟಿ ವೈದ್ಯೆ ಮಾಯನೂರಿನ ದೇವಕಮ್ಮರವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ತಹಸೀಲ್ದಾರ್‌ ಮೇಘನಾ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಪುರಸಭಾ ಅಧಕ್ಷೆ ಜ್ಯೋತಿ ರಾಜ್‌ಕುಮಾರ್, ಪುರಸಭಾ ಮುಖ್ಯಾಧಿಕಾರಿ ನಟರಾಜ್, ಕಸಾಪ ತಾಲೂಕು ಅಧಕ್ಷೆ ಶಾರದಾ ಗುರುಮೂರ್ತಿ, ಪುರಸಭಾ ಸದಸ್ಯರು, ಸಮಾಜದ ಗಣ್ಯರು, ಅಧಿಕಾರಿಗಳು ಹಾಜರಿದ್ದರು..