ಸಾರಾಂಶ
ಕಾರವಾರ: ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಬರುತ್ತಿರುವುದನ್ನು ಖಂಡಿಸಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರದಲ್ಲಿ ನ. ೪ರಂದು ೧೧ ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಮಾಡಲಾಗುತ್ತದೆ. ರೈತರ ಜಮೀನು ಕಬಳಿಸುವ ಹುನ್ನಾರ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದ ಅವರು, ಸಚಿವ ಜಮೀರ್ ಅಹಮ್ಮದ್ ಮುಖ್ಯಮಂತ್ರಿ ಸೂಚನೆ ಮೇರೆಗೆ ಈ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ಅಥವಾ ಪ್ರಧಾನಮಂತ್ರಿ ವಕ್ಫ್ ಬಿಲ್ ತಿದ್ದುಪಡಿಗೆ ಬೆಂಬಲ ನೀಡಬೇಕು. ವಿಜಯಪುರ, ಬೀದರ ಒಳಗೊಂಡು ಹಲವೆಡೆ ರೈತರ ಭೂಮಿ, ರುದ್ರಭೂಮಿ ವಕ್ಫ್ ಹೆಸರು ಆಗುತ್ತಿದೆ. ಈ ಮೂಲಕ ವಿವಾದ ಹುಟ್ಟುಹಾಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ಹಿಂದಿನಿಂದಲೂ ಈ ಕುತಂತ್ರ ನಡೆಯುತ್ತಿದೆ. ರೈತರ ಜೀವ ತೆಗೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಮೋದಿ ವಕ್ಫ್ ಬಿಲ್ ತಿದ್ದುಪಡಿ ಮಾಡಲು ಹೊರಟಿರುವುದಕ್ಕೆ ಜನರು ಬೆಂಬಲ ನೀಡಬೇಕು ಎಂದರು.
ಶಿರೂರು ಗುಡ್ಡಕುಸಿತದಲ್ಲಿ ನಾಪತ್ತೆಯಾದ ಜಗನ್ನಾಥ, ಲೋಕೇಶ ಬಗ್ಗೆ ಪ್ರಶ್ನಿಸಿದಾಗ, ಅರ್ಜುನ್ ಅವರನ್ನು ಹುಡುಕಿದಂತೆ ಈ ಇಬ್ಬರನ್ನು ಹುಡುಕಬೇಕು. ರಾಜ್ಯ ಸರ್ಕಾರ ಮಾನವೀಯತೆ ಲೆಕ್ಕದಲ್ಲಿ ಆ ಕುಟುಂಬಕ್ಕೆ ಹಣ, ಉದ್ಯೋಗ ನೀಡಬೇಕು. ನದಿಯಲ್ಲಿ ಸಂಗ್ರಹವಾದ ಮಣ್ಣು ತೆಗೆಯಲು ನಿರ್ಲಕ್ಷ್ಯ ಮಾಡಲಾಗಿದೆ. ಹಾಗೆ ಬಿಟ್ಟರೆ ಮಳೆಗಾಲದಲ್ಲಿ ನೆರೆ ಉಂಟಾಗುವ ಸಾಧ್ಯತೆಯಿದೆ. ಸರ್ಕಾರ ಸ್ಥಳೀಯರ ಸಂಕಷ್ಟಕ್ಕೆ ಸ್ಪಂದನೆ ನೀಡಬೇಕು. ಈ ಹಿಂದೆ ಕಡವಾಡ ದುರಂತವಾದಾಗ ಪರಿಹಾರ, ಮನೆ ನಿರ್ಮಾಣ ಮಾಡಲು ಬಿಜೆಪಿ ಕ್ರಮ ಕೈಗೊಂಡಿತ್ತು ಎಂದರು.ಬಿಜೆಪಿ- ಜೆಡಿಎಸ್ ಜಿಲ್ಲೆಯಲ್ಲಿ ಮೈತ್ರಿ ಬಗ್ಗೆ ಕೇಳಿದಾಗ, ಆನಂದ ಅಸ್ನೋಟಿಕರ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿಲ್ಲ. ಈ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲವಾಗಿಲ್ಲ. ಅವರ ಅವಶ್ಯಕತೆ ಬೀಳುವುದಿಲ್ಲ ಎಂದರು.
ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ, ಕಿಶನ್ ಕಾಂಬಳೆ, ನಾಗರಾಜ ನಾಯಕ, ಸುಭಾಸ ಗುನಗಿ, ಪೂಜಾ ನಾಯ್ಕ ಇದ್ದರು.ಯಲ್ಲಾಪುರದಲ್ಲಿ ಜನಾಂದೋಲನ: ಜಿಲ್ಲಾಧಿಕಾರಿಗಳಿಗೆ ಜಮೀರ್ ಅಹಮ್ಮದ್ ಅವರು ಒತ್ತಡ ತಂದು ರೈತರ ಪಹಣಿ ಪತ್ರಿಕೆಯಲ್ಲಿ ವಕ್ಫ್ ಹೆಸರನ್ನು ದಾಖಲಿಸುತ್ತಿದ್ದಾರೆ. ತಕ್ಷಣ ಅವರು ರಾಜೀನಾಮೆ ನೀಡಬೇಕು. ಅಲ್ಲದೇ ಸರ್ಕಾರದ ವಿರುದ್ಧ ಬಿಜೆಪಿ ನ. ೪ರಂದು ಜನಾಂದೋಲನ ಹಮ್ಮಿಕೊಳ್ಳಲು ತೀರ್ಮಾನಿಸಿದೆ ಎಂದು ಬಿಜೆಪಿ ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ತಿಳಿಸಿದರು.
ನ. ೧ರಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ರವಿ ಕೈಟ್ಕರ್, ಮಾಧ್ಯಮ ವಕ್ತಾರ ಕೆ.ಟಿ. ಹೆಗಡೆ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ನಾಯ್ಕ ಉಪಸ್ಥಿತರಿದ್ದರು.