ಯುವಜನರು ತಮ್ಮ ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸುವ ಮೂಲಕ ದೇಶದ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

೧೮ ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಅರ್ಹ ಯುವಕ-ಯುವತಿಯೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಪ್ಪ ದೊಡ್ಡಮನಿ ಕರೆ ನೀಡಿದರು.

ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಪ್ರತಿಯೊಬ್ಬ ಅರ್ಹ ನಾಗರಿಕನ ಪ್ರಮುಖ ಹಕ್ಕಾಗಿದ್ದು, ಯುವಜನರು ತಮ್ಮ ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸುವ ಮೂಲಕ ದೇಶದ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಮತದಾನ ಎಂಬುದು ಸಾರ್ವಜನಿಕರಿಗೆ ಸಂವಿಧಾನ ನೀಡಿದ ಮಹತ್ವದ ಅಧಿಕಾರ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಸಮೃದ್ಧ ಕನಸಿನ ನಾಡು ಕಟ್ಟಬೇಕು. ಜನತಂತ್ರ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಬಹುಮುಖ್ಯವಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮಾತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಚುನಾವಣೆಗಳಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ದ ಹಕ್ಕಾಗಿದೆ. ಎಲ್ಲರೂ ಕಡ್ಡಾಯವಾಗಿ ಪವಿತ್ರವಾದ ಮತದಾನ ಚಲಾಯಿಸಬೇಕು. ಯುವಕರು ಖಡ್ಡಾಯವಾಗಿ ಮತದಾರರ ನೋಂದಣಿ ಪಟ್ಟಿಗೆ ಸೇರ್ಪಡೆಯಾಗಬೇಕು. ಪ್ರಜಾಪ್ರಭುತ್ವವನ್ನು ಸುಭದ್ರಗೊಳಿಸಲು ಪ್ರತಿಯೊಂದು ಮತವೂ ಕೂಡ ಅಮೂಲ್ಯವಾದದ್ದು ಆ ಮತದ ಬಗ್ಗೆ ಜಾಗೃತರಾಗಬೇಕು ಎಂದರು.

ಧರ್ಮ, ಜಾತಿ, ಪ್ರೇರಣೆಗೆ ಬಲಿಯಾಗದೇ ಭಾರತ ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದೆ. ೧೮ ವರ್ಷ ಮೇಲ್ಪಟ್ಟವರು ಮತದಾರ ಪಟ್ಟಿಯಿಂದ ಹೊರಗುಳಿಯದೇ ಎಲ್ಲರೂ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ ಕಡ್ಡಾಯವಾಗಿ ಮತಚಲಾವಣೆಗೆ ಮುಂದಾಗಬೇಕು ಎಂದರು.

ಜಾಥಾವು ಬನ್ನಿಕೊಪ್ಪ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಮತದಾರರ ನೋಂದಣಿ, ಮತದಾನದ ಮಹತ್ವ ಹಾಗೂ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸಿತು. ೧೮ ವರ್ಷ ಪೂರ್ಣಗೊಂಡ ಯುವಜನರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ, ಅರ್ಹ ಯುವ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂಬ ಸಂದೇಶವನ್ನು ಜಾಥಾ ಮೂಲಕ ಸಾರಲಾಯಿತು.

ಅಕ್ಷರ ದಾಸೋಹ ತಾಲೂಕು ಅಧಿಕಾರಿ ಎಚ್.ಎಸ್. ರಾಮನಗೌಡ್ರ ಹಾಗೂ ಸಾರ್ವಜನಿಕರು, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.