ಚನ್ನಪಟ್ಟಣ: ನಗರದ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕಿದ್ದ ಸಮಸ್ಯೆ ಬಹುತೇಕ ಬಗೆಹರಿದಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು
ಚನ್ನಪಟ್ಟಣ: ನಗರದ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕಿದ್ದ ಸಮಸ್ಯೆ ಬಹುತೇಕ ಬಗೆಹರಿದಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಪಾವತಿಸಬೇಕಿದ್ದ ಹಣಕ್ಕೆ ಚೆಕ್ ನೀಡಲಾಗಿದೆ. ಜಾಗಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣವಿದ್ದು, ಅದು ಬಹುತೇಕ ಮುಂದಿನ ದಿನಗಳಲ್ಲಿ ಇತ್ಯರ್ಥವಾಗಲಿದೆ. ಇವತ್ತಿಗೆ ಎಸ್ಆರ್ ರೇಟಿನಂತೆ ಸುಮಾರು ೧೫೦ ಕೋಟಿ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.ಮಳೂರುಪಟ್ಟಣ ಹೊಡಿಕೆಹೊಸಹಳ್ಳಿ ಕೆರೆಗೆ ಪೈಪ್ಲೈನ್ ಮೂಲಕ ನೀರು ಕಲ್ಪಿಸಲು ಚಾಲನೆ ನೀಡಲಾಗಿದೆ. ಮೊದಲು ಸಂಕಲಗೆರೆ, ಚಕ್ಕರೆ ಕೆರೆ, ಅಲ್ಲಿಂದ ಮಳೂರು ಕೆರೆಗೆ ನೀರು ಹರಿಯಬೇಕಿತ್ತು. ಆದರೆ, ಇಲ್ಲಿಂದ ನೇರವಾಗಿ ಕೆರೆಗೆ ನೀರು ಕಲ್ಪಿಸಲು ಯೋಜನೆ ಮಾಡಲಾಗಿದೆ. ಮಳೂರುಪಟ್ಟಣ, ಎಸ್.ಎಂ.ಹಳ್ಳಿಗೆ ಸೇತುವೆ, ಚೆಕ್ಡ್ಯಾಂ ನಿರ್ಮಿಸಿದ್ದು, ಅದನ್ನು ಇಂದು ಉದ್ಘಾಟಿಸಲಾಗುತ್ತಿದೆ ಎಂದು ಹೇಳಿದರು.
ನಮ್ಮ ತಾಲೂಕಿನ ವಿವಿಧೆಡೆ ರಸ್ತೆ ಅಗಲೀಕರಣಕ್ಕೆ ೧೧೦ ಕೋಟ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಹ ಸಲ್ಲಿಸಿದ್ದೆ. ಇದೀಗ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರತಿದೆ. ಅನುದಾನ ಬಂದರೆ ತಾಲೂಕಿನ ಕೂಡ್ಲೂರು, ಎಸ್.ಎಂ.ಹಳ್ಳಿ, ಮಂಗಾಡಹಳ್ಳಿ ಸೇರಿದಂತೆ ವಿವಿಧೆಡೆ ರಸ್ತೆ ಅಗಲೀಕರಣ ಕಾರ್ಯ ನಡೆಸಲಾಗುವುದು. ಇದರಿಂದ ರಸ್ತೆ ಅಗಲೀಕರಣಕ್ಕೆ ಇದ್ದ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.ತಾಲೂಕಿನ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುತ್ತಿದ್ದು, ಸಾರ್ವಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಅವರು ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ನೂತನ ಆಯುಷ್ಮಾನ್ ಭಾರತ ಆರೋಗ್ಯ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ, ಹೊಟ್ಟೆಗನಹೊಸಹಳ್ಳಿ ಮಳೂರುಪಟ್ಟಣ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ, ಚಕ್ಕೆರೆ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡ ಉದ್ಘಾಟನೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ, ಮಳೂರುಪಟ್ಟಣ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಹಾಗೂ ಐಮಾಸ್ಕ್ ವಿದ್ಯುತ್ ಕಂಬ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಮಳೂರುಪಟ್ಟಣ ಮತ್ತು ಎಸ್.ಎಂ. ದೊಡ್ಡಿ ಗ್ರಾಮಗಳ ಸಂಪರ್ಕ ಸೇತುವೆ ಉದ್ಘಾಟನೆ,ಎಸ್.ಎಂ. ಹಳ್ಳಿಯಲ್ಲಿ ಅಂಬೇಡ್ಕರ್ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಈ ವೇಳೆ ಮುಖಂಡ ಕೂಡ್ಲೂರು ದಿನೇಶ್, ನಗರಸಭೆ ಮಾಜಿ ಉಪಾಧ್ಯಕ್ಷ ಮುದ್ದಕೃಷ್ಣ, ಮುರಳಿ, ರಾಜೇಶ್ ಸೇರಿದಂತೆ ಹಲವರು ಇದ್ದರು.
ಪೊಟೋ೬ಸಿಪಿಟಿ೨: ಚನ್ನಪಟ್ಟಣ ತಾಲೂಕಿನ ಮಳೂರುಪಟ್ಟಣ ಹೊಡಿಕೆಹೊಸಹಳ್ಳಿ ಕೆರೆಗೆ ಪೈಪ್ಲೈನ್ ಮೂಲಕ ನೀರು ಕಲ್ಪಿಸಲು ಶಾಸಕ ಯೋಗೇಶ್ವರ್ ಚಾಲನೆ ನೀಡಿದರು.ಪೊಟೋ೬ಸಿಪಿಟಿ೩:
ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಆಯುಷ್ಮಾನ್ ಭಾರತ್ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿಪೂಜೆ ನೆರವೇರಿಸಿದರು.