ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದ್ದು, ಕನ್ನಡದ ಅಸ್ತಿತ್ವವನ್ನು ಉಳಿಸಲು ಸಾಹಿತ್ಯದಲ್ಲಿ ಕ್ರಿಯಾಶೀಲತೆ ನಿರಂತರವಾಗಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರು

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದ್ದು, ಕನ್ನಡದ ಅಸ್ತಿತ್ವವನ್ನು ಉಳಿಸಲು ಸಾಹಿತ್ಯದಲ್ಲಿ ಕ್ರಿಯಾಶೀಲತೆ ನಿರಂತರವಾಗಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.ಸೋಮವಾರ ನಗರದ ಗಾಜಿನ ಮನೆಯಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಆಂಗ್ಲ ಪದಗಳ ಅತಿಯಾದ ಬಳಕೆ ನಮ್ಮ ಭಾಷಾ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ. ಆದರೆ ಕನ್ನಡ ಸಾಹಿತ್ಯ ಪರಂಪರೆ ನಮ್ಮ ಹೆಮ್ಮೆ. ಹಲವಾರು ಕವಿವರರು, ಐತಿಹಾಸಿಕ ಕಾದಂಬರಿಕಾರರು ಕನ್ನಡಮ್ಮನ ಮಮತೆಯ ಗುಣವಿಶೇಷಗಳನ್ನು, ಕನ್ನಡಿಗರ ಜೀವನಶೈಲಿ ಹಾಗೂ ಸಾಧನೆಯನ್ನು ಲೋಕದ ಗಮನಕ್ಕೆ ತಂದಿದ್ದಾರೆ ಎಂದು ಸ್ಮರಿಸಿದರು.

ಸಾಹಿತ್ಯ ಸಮ್ಮೇಳನಗಳು ನಮ್ಮ ಹಿಂದಿನ ಬರಹಗಾರರು ಕಂಡ ಕನ್ನಡದ ಉಜ್ವಲ ಭವಿಷ್ಯದ ಕನಸನ್ನು ಸಾಕಾರಗೊಳಿಸುವ ಪೂರಕ ವೇದಿಕೆಗಳಾಗುತ್ತಿವೆ. ಆದರೆ ಅದಕ್ಕಾಗಿ ಹೊರಗೆ ಹೇಗೋ ಹಾಗೆಯೇ ಅಂತರಂಗದಲ್ಲೂ ‘ಉಸಿರು ಕನ್ನಡವಾಗುವಂತೆ’ ಪ್ರತಿಯೊಬ್ಬರೂ ಪಣತೊಡಬೇಕು ಎಂದು ಕರೆ ನೀಡಿದರು.

ಮನೆ-ಮನೆಗಳಲ್ಲಿ ಪುಸ್ತಕ ಸಂಗ್ರಹ, ನಿರಂತರ ಓದು, ವಿಚಾರ ವಿನಿಮಯ, ಸಂವಾದ, ಕವಿತಾ ವಾಚನ, ಕಥಾ ರಚನೆ ತರಬೇತಿ ಮುಂತಾದ ಸಾಹಿತ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂದ ಅವರು, ಬರಹಗಾರರು, ಓದುಗರು, ಸಾಹಿತ್ಯ ಪೋಷಕರು, ಸ್ವಯಂಸೇವಾ ಸಂಘಟನೆಗಳು ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ಒಂದಾಗಿ ಸಾಹಿತ್ಯದ ಆಗುಹೋಗುಗಳ ವಿಚಾರ ಚರ್ಚಿಸಿ, ನವೀನ ಮಾರ್ಗಗಳನ್ನು ಶೋಧಿಸುವ ಮೂಲಕ ಸದಭಿರುಚಿಯ ಸಾಹಿತ್ಯ ರಚನೆ ಹಾಗೂ ಪ್ರಸಾರದತ್ತ ಕ್ರಿಯಾಶೀಲರಾಗಬೇಕು ಎಂದು ಸಲಹೆ ನೀಡಿದರು.

ಶಾಲೆಗಳಲ್ಲೂ ಹೆಚ್ಚು ಹೆಚ್ಚು ಸಾಹಿತ್ಯ ಚಟುವಟಿಕೆಗಳು ಆಯೋಜನೆಯಾಗಲಿ ಎಂದು ಆಶಿಸಿದ ಅವರು, ಕನ್ನಡದ ಭವಿಷ್ಯ ಯುವ ಪೀಳಿಗೆಯ ಕೈಯಲ್ಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ತಹಸೀಲ್ದಾರ್ ರಾಜೇಶ್ವರಿ ಹಾಗೂ ಕನ್ನಡ ಸೇನೆ ಪದಾಧಿಕಾರಿಗಳಾದ ಧನಿಯಾಕುಮಾರ್, ಶಬ್ಬೀರ್ ಅಹ್ಮದ್, ನಟರಾಜ್ ಶೆಟ್ಟಿ, ಮಲ್ಲಿಕಾರ್ಜುನಯ್ಯ ಉಮಾ ಮಹೇಶ್, ಗುರು ರಾಘವೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.