ಸಾರಾಂಶ
ಕಳೆದ ಸಲ ಪಕ್ಷೇತರರಾಗಿ ಸ್ಪರ್ಧಿಸಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದೀರಿ ಎಂದು ಆರೋಪ
ಕನ್ನಡಪ್ರಭ ವಾರ್ತೆ ಅರಕಲಗೂಡುಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಿರಿ. ಪಕ್ಷ ಸೇರ್ಪಡೆಗೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಎಂ.ಟಿ. ಕೃಷ್ಣೇಗೌಡರ ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಚಿಕ್ಕಹೊನ್ನೇಗೌಡ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀಧರ್ ಗೌಡರನ್ನು ಘೋಷಿಸಿದ್ದರೂ ಕೃಷ್ಣೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದೀರಿ. ಹಾಗಾಗಿ ಪಕ್ಷ ಸೇರ್ಪಡೆ ಅವಕಾಶ ನೀಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.ಸಿದ್ದರಾಮಯ್ಯ ಅವರೇ ನನ್ನನ್ನು ನಿಲ್ಲುವಂತೆ ಹೇಳಿದ್ದಾರೆಂದು ಚುನಾವಣೆಯಲ್ಲಿ ಸ್ಪರ್ಧಿಸಿ 56 ಸಾವಿರ ಮತಗಳನ್ನು ಪಡೆದಿದ್ದೀರಿ. ಅದಾದ ಬಳಿಕ ವರ್ಷವೇ ಕಳೆದರು ನಿಮಗಾಗಿ ದುಡಿದ ಕಾರ್ಯಕರ್ತರಿಗೆ ಕೃತಜ್ಞತೆ ಹೇಳಲಿಲ್ಲ. ಅವರನ್ನು ದಿಕ್ಕರಿಸಿ, ಅವರ ಕಷ್ಟ ಸುಖಕ್ಕೆ ಸ್ಪಂದಿಸಲಿಲ್ಲ. ಆದರೆ, ನೆನ್ನೆ ಅಭಿಮಾನಿಗಳ ಸಭೆ ಕರೆದು ರಾಜಕೀಯ ಮಾಡಲು ಮತ್ತೆ ಬರುತ್ತಿದ್ದಾರೆ. ರಾಜಕೀಯ ಮಾಡುವುದಾದರೆ ಸರಿಯಾಗಿ ಮಾಡಿ.ಅಂತರ ಕಾಯ್ದುಕೊಂಡಿದ್ದ ನೀವು ಇಂದು ಮತ್ತೆ ರಾಜಕೀಯಕ್ಕೆ ಬರುತ್ತಿರುವುದು ಎಷ್ಟರಮಟ್ಟಿಗೆ ಸರಿ. ಕಾಂಗ್ರೆಸ್ಸಿಗೆ ನಿಮ್ಮ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನೇಕ ಮುಖಂಡರನ್ನು ನೀವೇ ಹೇಳಿ ಜೆಡಿಎಸ್‌ಗೆ ಸೇರಿಸಿದ್ದು, ನೀವೊಬ್ಬರೇ ಕಾಂಗ್ರೆಸ್‌ಗೆ ಬಂದು ಚುನಾವಣೆಯಲ್ಲಿ ಜೆಡಿಎಸ್‌ಗೆ ಅನುಕೂಲ ಮಾಡಿಕೊಡಲು ನಿರ್ಧರಿಸಿದ್ದೀರಾ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇನ್ನೊಮ್ಮೆ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಹುನ್ನಾರ ನಡೆದಿದೆಯೇ. ಈ ಜೆಡಿಎಸ್ ಒಳಒಪ್ಪಂದ ಅರಿತು ಎಲ್ಲಾ ಗ್ರಾಮಗಳಲ್ಲಿ ನಿಮಗಾಗಿ ಕೆಲಸ ಮಾಡಿದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇಂದು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಿದರು.ಮುಖಂಡರಾದ ಗಣಪತಿ, ಚನ್ನೇಗೌಡ, ಮಂಜು, ಧರ್ಮರಾಜ್, ಸಣ್ಣಸ್ವಾಮಿ, ಮಂಜಣ್ಣ ಮತ್ತಿತರಿದ್ದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು.