ಸಾರಾಂಶ
ಬೆಂಗಳೂರು : ನಟ ಅಜಯ್ ರಾವ್ ಹಾಗೂ ಅವರ ಪತ್ನಿ ಸಪ್ನಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇಬ್ಬರು ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆಗೆ ಸಿಗದ ಅಜಯ್, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ಕುಟುಂಬದ ಖಾಸಗಿತನ ಗೌರವಿಸುವಂತೆ ಕೋರಿದ್ದಾರೆ.
ಸಪ್ನಾ ಅವರು, ಪತಿ ಅಜಯ್ ಅವರಿಂದ ತಮಗೆ ಕೌಟುಂಬಿಕ ಹಿಂಸೆ ಆಗುತ್ತಿದೆ ಎಂದು ಆರೋಪಿಸಿ ಕೌಟುಂಬಿಕ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಅಜಯ್, ‘ಈ ಸೂಕ್ಷ್ಮ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಹಾಗೂ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿ ಹಂಚಿಕೊಳ್ಳುವುದನ್ನು ಅಥವಾ ಹರಡುವುದನ್ನು ದೂರವಿಡುವಂತೆ ತಮ್ಮನ್ನು ವಿನಮ್ರವಾಗಿ ವಿನಂತಿಸುತ್ತೇನೆ. ಪ್ರತಿಯೊಂದು ಕುಟುಂಬವೂ ಸವಾಲುಗಳನ್ನು ಎದುರಿಸುತ್ತದೆ. ಅವುಗಳನ್ನು ಖಾಸಗಿಯಾಗಿ ಉಳಿಯುವುವಂತೆ ಸಹಕರಿಸಿ. ನಿಮ್ಮ ಮನವೊಲಿಕೆ, ಬೆಂಬಲ ಮತ್ತು ವಿವೇಕ ನಮಗೆ ಅತ್ಯಂತ ಮುಖ್ಯ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಜಯ್ ರಾವ್ ಹಾಗೂ ಸಪ್ನಾ ಅವರು ಪ್ರೀತಿಸಿ ಮದುವೆಯಾಗಿದ್ದರು. 2014ರ ಡಿ.18 ರಂದು ಹೊಸಪೇಟೆಯಲ್ಲಿ ಆಪ್ತರು, ಸಂಬಂಧಿಕರ ಎದುರು ಸರಳವಾಗಿ ಈ ಜೋಡಿಯ ವಿವಾಹ ನಡೆದಿತ್ತು. ಈ ದಂಪತಿಗೆ ಒಬ್ಬ ಮಗಳಿದ್ದಾಳೆ.