ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ

| Published : Oct 08 2024, 01:05 AM IST

ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಲಕ್ಷ್ಮಿ ಜೈಲಿಗೆ ಆಗಮಿಸಿ, ನಟ ದರ್ಶನ್ ಬಳಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಳ್ಳಾರಿ: ಕೊಲೆ ಆರೋಪ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಬೆನ್ನುನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬದ ಆಪ್ತ ಸದಸ್ಯರು ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಸೋಮವಾರ ಭೇಟಿ ನೀಡಿ, ನಟ ದರ್ಶನ್‌ ಆರೋಗ್ಯ ವಿಚಾರಿಸಿದರು.

ಬಳ್ಳಾರಿ ಜೈಲು ಸೇರಿದ ಬಳಿಕ ನಟ ದರ್ಶನ್‌ನ ಆರೋಗ್ಯ ಏರುಪೇರಾಗುತ್ತಿದೆ. ಬೆನ್ನುನೋವು ಸಮಸ್ಯೆಯಿಂದ ಬಳಲುತ್ತಿರುವುದರಿಂದ ಚಿಕಿತ್ಸೆಗೆ ಬೆಂಗಳೂರಿಗೆ ಸ್ಥಳಾಂತರಗೊಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಜೈಲಿಗೆ ಆಗಮಿಸಿ, ನಟ ದರ್ಶನ್ ಬಳಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ನಟ ದರ್ಶನ್‌ಗೆ ಬೆನ್ನುಊತ ಕಾಣಿಸಿಕೊಂಡಿದ್ದು ಸ್ಕ್ಯಾನಿಂಗ್ ಹಾಗೂ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ, ಸ್ಥಳೀಯವಾಗಿ ಸ್ಕ್ಯಾನಿಂಗ್ ಹಾಗೂ ಶಸ್ತ್ರಚಿಕಿತ್ಸೆಗೆ ನಿರಾಕರಿಸಿರುವ ನಟ ದರ್ಶನ್, ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುವುದಾಗಿ ಹೇಳಿದ್ದರು. ಕಳೆದ ವಾರದಿಂದ ಬೆನ್ನುನೋವಿನ ಸಮಸ್ಯೆ ಹೆಚ್ಚಾಗಿದ್ದು ಚಿಕಿತ್ಸೆಗೆ ಬೆಂಗಳೂರಿಗೆ ಸ್ಥಳಾಂತರ ಹಿನ್ನೆಲೆಯಲ್ಲಿ ನಟ ದರ್ಶನ್ ಕುಟುಂಬ ಸದಸ್ಯರು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಯಿದೆ. ಹೀಗಾಗಿಯೇ ಪತ್ನಿ ವಿಜಯಲಕ್ಷ್ಮಿ ಆಗಮಿಸಿ, ಚರ್ಚಿದ್ದಾರೆ ಎಂದು ತಿಳಿದು ಬಂದಿದೆ. ಬುಧವಾರ ದರ್ಶನ್ ಪರ ವಕೀಲರು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಆಗಮಿಸಿ, ಚರ್ಚಿಸಲಿದ್ದಾರೆ. ನ್ಯಾಯಾಂಗ ಮೊರೆ ಹೋಗುವ ಕುರಿತು ಪೂರಕ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಇದೇ ವೇಳೆ ಜಾಮೀನು ವಿಚಾರ ಕುರಿತು ದರ್ಶನ್ ಜೊತೆ ವಕೀಲರು ಚರ್ಚೆ ಮಾಡಲಿದ್ದಾರೆ.

ದರ್ಶನ್ ಆರೋಗ್ಯದ ಮೇಲೆ ಜೈಲು ಅಧಿಕಾರಿಗಳು ವಿಶೇಷ ನಿಗಾ ಇರಿಸಿದ್ದಾರೆ. ಈತನಿಗಿರುವ ಹೈ ಸೆಕ್ಯೂರಿಟಿ ಸೆಲ್‌ಗೆ ಆಗಮಿಸುವ ವೈದ್ಯರು ಆರೋಗ್ಯ ಪರಿಶೀಲನೆ ನಡೆಸುತ್ತಿದ್ದಾರೆ. ನಿತ್ಯವೂ ದರ್ಶನ್ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಬೆನ್ನುನೋವು ಸಮಸ್ಯೆ ಹೊರತುಪಡಿಸಿದರೆ ಉಳಿದಂತೆ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ನಟ ದರ್ಶನ್ ಬಳ್ಳಾರಿ ಜೈಲು ಸೇರಿದ ಬಳಿಕ ಪತ್ನಿ ವಿಜಯಲಕ್ಷ್ಮಿ ಎಂಟನೇ ಬಾರಿ ಕೇಂದ್ರ ಕಾರಾಗೃಹಕ್ಕೆ ಆಗಮಿಸಿ, ಆರೋಗ್ಯ ಹಾಗೂ ಜಾಮೀನು ಕುರಿತು ಪತಿ ದರ್ಶನ್ ಜೊತೆ ಚರ್ಚಿಸಿದ್ದಾರೆ.

ನಟ ದರ್ಶನ್ ತಾನಿರುವ ಹೈ ಸೆಕ್ಯೂರಿಟಿ ಸೆಲ್‌ಗೆ ಚೇರ್, ಬೆಡ್‌ ಸೌಲಭ್ಯಗಳನ್ನು ನೀಡುವಂತೆ ಕೋರಿದ್ದರು. ಆದರೆ, ಈವರೆಗೆ ಅವುಗಳನ್ನು ಕಲ್ಪಿಸಿಲ್ಲ.

ಬಳ್ಳಾರಿ ಕೇಂದ್ರಕಾರಾಗೃಹಕ್ಕೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಮವಾರ ಭೇಟಿ ನೀಡಿದ್ದರು.