ದರ್ಶನ್‌ ವಿವಾದಿತ ಜೀವನದ ಪ್ರಮುಖ ಪಾತ್ರಧಾರಿ ಪವಿತ್ರಾ!

| Published : Jun 12 2024, 12:34 AM IST

ಸಾರಾಂಶ

ನಟ ದರ್ಶನ್‌ ಅವರ ವೈಯಕ್ತಿಕ ಜೀವನದ ಏನೇ ಗಲಾಟೆ, ವಿವಾದ ಹುಟ್ಟಿಕೊಂಡರೂ ಮೊದಲು ಕೇಳಿಬರುತ್ತಿದ್ದ ಹೆಸರು ಪವಿತ್ರಾ ಗೌಡ. ಕಳೆದ ಎರಡು ವರ್ಷಗಳಿಂದ ದರ್ಶನ್‌ ಅವರ ಜತೆಗೆ ಪವಿತ್ರಾ ಗೌಡ ಅವರ ಹೆಸರು ಬಹಿರಂಗವಾಗಿ ಕೇಳಲಾರಂಭಿಸಿತು. ಇಷ್ಟಕ್ಕೂ ಯಾರು ಈ ಪವಿತ್ರಾ ಗೌಡ? ಆಕೆಯ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ವಿಷಯ ಇವೆ.

- ಮೊದಲು ಮಾಡೆಲಿಂಗ್‌, ನಂತರ ಚಿತ್ರರಂಗದಲ್ಲಿ ಪವಿತ್ರಾ ಕೆಲಸ- ಈ ವೇಳೆ ದರ್ಶನ್‌ ಪರಿಚಯವಾಗಿ ಅವರೊಂದಿಗೆ ಪ್ರೇಮಾಂಕುರ- ಇಬ್ಬರೂ ವಿವಾಹಿತರಾಗಿದ್ದರೂ ವೈವಾಹಿಕ ಜೀವನ ಮೀರಿ ಪ್ರೇಮ- ಈ ವೇಳೆ ದರ್ಶನ್‌ ಪತ್ನಿಯ ಕೆಂಗಣ್ಣಿಗೆ ಗುರಿ ಆಗಿದ್ದ ಪವಿತ್ರಾ ಗೌಡ- ಈಗ ಬೆಂಗಳೂರಿನ ಆರ್‌ಆರ್‌ ನಗರದಲ್ಲಿ ‘ರೆಡ್‌ ಕಾರ್ಪೆಟ್‌’ ಬಾಟಿಕ್‌ ಒಡತಿಕನ್ನಡಪ್ರಭವಾರ್ತೆ, ಬೆಂಗಳೂರು

ನಟ ದರ್ಶನ್‌ ಅವರ ವೈಯಕ್ತಿಕ ಜೀವನದ ಏನೇ ಗಲಾಟೆ, ವಿವಾದ ಹುಟ್ಟಿಕೊಂಡರೂ ಮೊದಲು ಕೇಳಿಬರುತ್ತಿದ್ದ ಹೆಸರು ಪವಿತ್ರಾ ಗೌಡ. ಕಳೆದ ಎರಡು ವರ್ಷಗಳಿಂದ ದರ್ಶನ್‌ ಅವರ ಜತೆಗೆ ಪವಿತ್ರಾ ಗೌಡ ಅವರ ಹೆಸರು ಬಹಿರಂಗವಾಗಿ ಕೇಳಲಾರಂಭಿಸಿತು. ಇಷ್ಟಕ್ಕೂ ಯಾರು ಈ ಪವಿತ್ರಾ ಗೌಡ? ಆಕೆಯ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ವಿಷಯ ಇವೆ.

ಮಾಡೆಲಿಂಗ್ ಲೋಕದಲ್ಲಿ

ಬೆಂಗಳೂರು ಗ್ರಾಮಾಂತರ ಪ್ರದೇಶವಾದ ತಲಘಟ್ಟಪುರ ಮೂಲದ ಪವಿತ್ರಾಗೌಡ ಅವರು ವಾಸವಾಗಿದ್ದು ಬೆಂಗಳೂರಿನ ಜೆಪಿ ನಗರದಲ್ಲಿ. ಕಾಲೇಜು ದಿನಗಳಲ್ಲೇ ಬಣ್ಣದ ಲೋಕದ ಕನಸುಗಳನ್ನು ಕಂಡವಳು. ಮೊದಲು ಮಾಡೆಲಿಂಗ್‌ ಲೋಕಕ್ಕೆ ಕಾಲಿಟ್ಟರು. ಬೆಂಗಳೂರಿನ ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಪದವಿ ಮುಗಿಸಿರುವ ಪವಿತ್ರಾ ಗೌಡ ಅವರು, ಮಾಡೆಲಿಂಗ್‌ ಹಾಗೂ ರ‍್ಯಾಂಪ್ ಶೋಗಳಲ್ಲಿ ಹೆಜ್ಜೆ ಹಾಕುವಾಗಲೇ ಚಿನ್ನಾಭರಣ ಮಳಿಗೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮಿಸ್ ಬೆಂಗಳೂರು ಆಗಿಯೂ ಗುರುತಿಸಿಕೊಂಡಿದ್ದರು.

ಮೊದಲ ಚಿತ್ರವೇ ಸೋಲು:

ಚಿತ್ರರಂಗದಲ್ಲಿನ ಅವಕಾಶಗಳಿಗಾಗಿ ಅಲೆಯುತ್ತಿದ್ದ ಪವಿತ್ರಾ ಗೌಡ ಅವರನ್ನು ಗುರುತಿಸಿದ್ದು ನಿರ್ದೇಶಕ ಉಮೇಶ್‌ ಗೌಡ ಅವರ ‘ಅಗಮ್ಯ’ ಚಿತ್ರ. ಎಂ ಪಿ ಜಯರಾಜ್‌ ಪುತ್ರ ಅಜಿತ್‌ ಜಯರಾಜ್‌ ನಾಯಕನಾಗಿ ನಟಿಸಿದ್ದ ‘ಅಗಮ್ಯ’ ಚಿತ್ರ ತೆರೆಕಂಡು ಹಿನಾಯವಾಗಿ ಸೋಲು ಕಂಡಿತು. ತಾನು ನಾಯಕಿಯಾಗಿ ನಟಿಸಿದ್ದ ಮೊದಲ ಚಿತ್ರವೇ ಸೋಲು ಕಂಡಾಗ ತಮಿಳಿನತ್ತ ಮುಖ ಮಾಡಿದರು.

ತಮಿಳಿನಿಂದ ಮರಳಿದಾಗ:

ತಮಿಳಿನಲ್ಲಿ ಒಂದು ಚಿತ್ರ ಮಾಡಿ ಕನ್ನಡಕ್ಕೆ ಬಂದ ಮೇಲೆ ‘ಛತ್ರಿಗಳು ಸಾರ್‌ ಛತ್ರಿಗಳು’, ‘ಸಾಗುವ ದಾರಿಯಲ್ಲಿ’, ‘ಪ್ರೀತಿ ಕಿತಾಬು’ ಚಿತ್ರಗಳಲ್ಲಿ ನಟಿಸಿದರು. ನಂತರ ‘ಬತ್ತಾಸು’ ಚಿತ್ರಕ್ಕೆ ನಾಯಕಿ ಆದರು. ಆದರೆ, ಈ ಚಿತ್ರ ಏನಾಯಿತೋ ಗೊತ್ತಿಲ್ಲ. ಈ ನಡುವೆ ಮಾಡೆಲಿಂಗ್‌ ಹಾಗೂ ಚಿತ್ರರಂಗದಿಂದಲೇ ನಾಪತ್ತೆಯಾದ ಪವಿತ್ರಾ ಗೌಡ ಅವರು ಮತ್ತೆ ಕಾಣಿಸಿಕೊಂಡಿದ್ದೇ ದರ್ಶನ್‌ ಅವರ ಜತೆಗೆ.

ಹೆಂಡತಿ ಕಾಸ್ಟೂಮ್‌, ಗಂಡ ಡ್ಯಾನ್ಸರ್‌

ಪವಿತ್ರಾ ಗೌಡ ಅವರು ಚಿತ್ರರಂಗದಲ್ಲಿ ಕಾಸ್ಟೂಮ್‌ ಡಿಸೈನರ್‌ ಆಗಿಯೂ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ ಪವಿತ್ರಾ ಗೌಡ ಅವರಿಗೆ ಮದುವೆ ಕೂಡ ಆಗಿತ್ತು, ಇವರ ಗಂಡ ಕನ್ನಡ ಚಿತ್ರರಂಗದ ನೃತ್ಯ ನಿರ್ದೇಶಕ ಎನ್ನುವ ಮಾಹಿತಿಯೂ ಇದೆ. ಹೀಗಾಗಿ ಇವರ ಗಂಡ ನೃತ್ಯ ಸಂಯೋಜನೆ ಮಾಡುತ್ತಿದ್ದ ಚಿತ್ರಗಳಿಗೆ ಪವಿತ್ರಾ ಗೌಡ ಅವರೇ ವಸ್ತ್ರ ವಿನ್ಯಾಸ ಮಾಡುತ್ತಿದ್ದರು. ಇವರ ಗಂಡ ಕೂಡ ದರ್ಶನ್‌ ಅವರಿಗೆ ಪರಿಚಿತರಾಗಿದ್ದರು ಎನ್ನಲಾಗಿದೆ. ತಮ್ಮ ಗಂಡನ ಮೂಲಕವೇ ಪವಿತ್ರಾ ಗೌಡ ಅವರು ದರ್ಶನ್‌ ಅವರನ್ನು ಮೊದಲು ಪರಿಚಯ ಮಾಡಿಕೊಂಡಿದ್ದರು ಎನ್ನುವ ಮಾಹಿತಿ ಇದೆ.

ವೈರಲ್‌ ಆದ ಆ ಫೋಟೋ

‘ಜಗ್ಗುದಾದಾ’ ಚಿತ್ರ ಮಾಡುವಾಗ ದರ್ಶನ್‌ ಅವರೊಂದಿಗೆ ಪವಿತ್ರಾ ಗೌಡ ಅವರಿಗೆ ಸ್ನೇಹ ಆಗಿದೆ. ಈ ಸ್ನೇಹ ಮುಂದೆ ಪ್ರೀತಿ- ಪ್ರೇಮಕ್ಕೆ ತಿರುಗಿದೆ. ಈ ಹಂತದಲ್ಲೂ ಪವಿತ್ರಾ ಗೌಡ ಅವರು ನಾಯಕಿ ಪಾತ್ರಗಳಿಗಾಗಿ ಆಡಿಷನ್‌ ಕೊಡುತ್ತಿದ್ದರು. ಹಾಗೆ ಆಡಿಷನ್‌ ಕೊಟ್ಟು ಆಯ್ಕೆ ಆಗಿದ್ದೇ ‘ಬತ್ತಾಸು’ ಚಿತ್ರಕ್ಕೆ. ಇದಕ್ಕೂ ಮೊದಲು ಅಂದರೆ 2017ರಲ್ಲಿ ಮಿಲನ ಪ್ರಕಾಶ್‌ ನಿರ್ದೇಶನದ ‘ತಾರಕ್‌’ ಚಿತ್ರ ಬಿಡುಗಡೆ ಆಗುವ ಹೊತ್ತಿಗೆ ದರ್ಶನ್‌ ಹಾಗೂ ಪವಿತ್ರಾ ಗೌಡ ಅವರು ತುಂಬಾ ಹತ್ತಿರವಾಗಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ದರ್ಶನ್‌ ಜೊತೆ ಅತ್ಯಾಪ್ತವಾದ ಫೋಟೋವನ್ನು ಪವಿತ್ರಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ದರ್ಶನ್‌ ಹಾಗೂ ವಿಜಯಲಕ್ಷ್ಮೀ ದಾಂಪತ್ಯದಲ್ಲಿನ ಗಲಾಟೆಗೂ ಕಾರಣವಾಯಿತು ಎನ್ನಲಾಗಿದೆ.

ಆದರೆ, ಈ ಫೋಟೋ ವೈರಲ್‌ ಆಗುತ್ತಿದಂತೆಯೇ ದರ್ಶನ್‌ ಅವರೊಂದಿಗಿನ ಹಳೆಯ ಸ್ನೇಹವನ್ನು ಮುಂದಿಟ್ಟುಕೊಂಡು ಪವಿತ್ರಾ ಗೌಡ ಅವರು ಬ್ಲಾಕ್‌ ಮೇಲ್‌ ಮಾಡುತ್ತಿದ್ದಾರಾ ಎನ್ನುವ ಅನುಮಾನಗಳು ಆಗ ಸದ್ದು ಮಾಡಿತ್ತು. ದರ್ಶನ್‌ ಅವರ ಅಭಿಮಾನಿಗಳು ಕೂಡ ಈ ಸಾಮಾಜಿಕ ಜಾಲತಾಣಗಳಲ್ಲಿ ಪವಿತ್ರಾ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡು ಕಾಮೆಂಟ್‌ ಮಾಡಿದ್ದರು ಆಗ.

ಕುರುಕ್ಷೇತ್ರ ನಂತರದರ್ಶನ್‌ ಅವರೊಂದಿಗೆ ಪವಿತ್ರಾ ಗೌಡ ಅವರ ಸಂಬಂಧ ಇದೆ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿರುವಾಗಲೇ ‘ಕುರುಕ್ಷೇತ್ರ’ ಚಿತ್ರದ ಹೊತ್ತಿನಲ್ಲಿ ರಾಜಾರೋಷವಾಗಿ ಪವಿತ್ರಾ ಗೌಡ ಅವರು ದರ್ಶನ್‌ ಅವರ ಜತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ಹಂಚಿಕೊಳ್ಳುವುದಕ್ಕೆ ಆರಂಭಿಸಿದರು. ಅಲ್ಲದೆ ದರ್ಶನ್‌ ಅವರ ಕುಟುಂಬದ ಸದಸ್ಯರ ಜತೆಗೂ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ಅವರ ಕೆಂಗಣ್ಣಿಗೂ ಪವಿತ್ರಾ ಗೌಡ ಅವರು ಗುರಿಯಾಗಿದ್ದರು. ಮುಂದೆ ‘ದರ್ಶನ್‌ ಜೊತೆಗೆ 10 ವರ್ಷದ ಸಂಬಂಧ’ ಎನ್ನುವ ಸಾಲುಗಳೊಂದಿಗೆ ಪವಿತ್ರ ಗೌಡ ಹಂಚಿಕೊಂಡ ವಿಡಿಯೋ ವಿಜಯ ಲಕ್ಷ್ಮೀ ಹಾಗೂ ಪವಿತ್ರಾ ಗೌಡ ಅವರ ನಡುವಿನ ಬಹಿರಂಗ ಸಮರಕ್ಕೆ ಕಾರಣವಾಯಿತು. ಈಗ ಪವಿತ್ರಾ ಗೌಡಸದ್ಯ ಪವಿತ್ರಾ ಗೌಡ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದು ಫ್ಯಾಷನ್‌ ಡಿಸೈನಿಂಗ್‌ ಜತೆಗೆ ಬೆಂಗಳೂರಿನ ಆರ್‌ ಆರ್‌ ನಗರದಲ್ಲಿ ‘ರೆಡ್‌ ಕಾರ್ಪೆಟ್‌ ಸ್ಟುಡಿಯೋ’ ಹೆಸರಿನ ಬಾಟಿಕ್‌ ಆರಂಭಿಸಿದ್ದಾರೆ. ವಿಪರ್ಯಾಸ ಎಂದರೆ ಮಿಲನ ಪ್ರಕಾಶ್ ನಿರ್ದೇಶನದ ‘ತಾರಕ್’ ಚಿತ್ರದ ಸಮಯದಲ್ಲಿ ತಮ್ಮ ಹಾಗೂ ದರ್ಶನ್ ನಡುವಿನ ಸಂಬಂಧ ಇರುವ ಫೋಟೋ ಹಂಚಿಕೊಂಡಿದ್ದ ಪವಿತ್ರಾ ಗೌಡ ಅವರು, ಈಗ ಅದೇ ಮಿಲನ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಚಿತ್ರದ ಹೊತ್ತಿನಲ್ಲೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.

ಬಾಕ್ಸ್‌

ಪವಿತ್ರ ಪತಿ ಸಂಜಯ್‌ ಸಿಂಗ್‌ ಯಾರು?ಮತ್ತೊಂದು ಮಾಹಿತಿಯ ಪ್ರಕಾರ ಪವಿತ್ರಾ ಗೌಡ ಅವರು ಐಟಿ ಉದ್ಯೋಗಿ ಆಗಿರುವ ಸಂಜಯ್‌ ಸಿಂಗ್‌ ಎಂಬುವರನ್ನು ಮೊದಲು ಮದುವೆ ಆಗಿದ್ದರು. ಸಂಜಯ್‌ ಸಿಂಗ್‌ ಹಾಗೂ ಪವಿತ್ರಾ ಗೌಡ ದಾಂಪತ್ಯ ಜೀವನಕ್ಕೆ ಸಾಕ್ಷಿ ಎನ್ನುವಂತೆ ಅವರಿಗೆ ಮಗಳು ಇದ್ದಾಳೆ ಎಂದು ವಿಜಯಲಕ್ಷ್ಮೀ ಅವರೂ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿದ್ದರು.