ಹುಟ್ಟೂರು ಕಾಳೇನಹಳ್ಳಿಹಟ್ಟಿ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡುತ್ತಿರುವ ನಟ ಡಾಲಿ ಧನಂಜಯ್

| Published : Jan 05 2025, 01:32 AM IST / Updated: Jan 05 2025, 03:55 PM IST

ಹುಟ್ಟೂರು ಕಾಳೇನಹಳ್ಳಿಹಟ್ಟಿ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡುತ್ತಿರುವ ನಟ ಡಾಲಿ ಧನಂಜಯ್
Share this Article
  • FB
  • TW
  • Linkdin
  • Email

ಸಾರಾಂಶ

ಡಾಲಿ ಧನಂಜಯ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತನ್ನೂರಿನ ಶಾಲೆಗೆ ಕೊಡುಗೆ ನೀಡಲು ಮುಂದಾಗಿರುವ ಡಾಲಿ, ತನ್ನ ಊರಾದ ಕಾಳೇನಹಳ್ಳಿ ಹಟ್ಟಿಯ ಸರ್ಕಾರಿ ಶಾಲೆಯನ್ನು ಸುಮಾರು ಹತ್ತು ಲಕ್ಷ ರು. ವೆಚ್ಚದಲ್ಲಿ ಹೈಟೆಕ್‌ ಶಾಲೆ ಮಾಡುತ್ತಿದ್ದಾರೆ.

ಎಚ್‌.ಟಿ.ಮೋಹನ್‌ ಕುಮಾರ್‌

  ಹಾಸನ : ಹಳ್ಳಿಯಲ್ಲಿ ಹುಟ್ಟಿ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡು ಇಂದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ ಆಗಿರುವ ಧನಂಜಯ ಅಲಿಯಾಸ್‌ ಡಾಲಿ ಧನಂಜಯ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತನ್ನೂರಿನ ಶಾಲೆಗೆ ಕೊಡುಗೆ ನೀಡಲು ಮುಂದಾಗಿರುವ ಡಾಲಿ, ತನ್ನ ಊರಾದ ಕಾಳೇನಹಳ್ಳಿ ಹಟ್ಟಿಯ ಸರ್ಕಾರಿ ಶಾಲೆಯನ್ನು ಸುಮಾರು ಹತ್ತು ಲಕ್ಷ ರು. ವೆಚ್ಚದಲ್ಲಿ ಹೈಟೆಕ್‌ ಶಾಲೆ ಮಾಡುತ್ತಿದ್ದಾರೆ.

ಅರಸೀಕೆರೆ ತಾಲೂಕಿನ ಕಾಳೇನಹಳ್ಳಿಹಟ್ಟಿ ಗ್ರಾಮದಲ್ಲಿ ಜನಿಸಿದ ಡಾಲಿ ಧನಂಜಯ, ವಿದ್ಯಾಭ್ಯಾಸ ಪಡೆದಿದ್ದು ಅರಸೀಕೆರೆ ಹಾಗೂ ಬೇರೆ ಕಡೆ. ಉತ್ತಮ ವ್ಯಾಸಂಗ ಪಡೆದು ನಂತರ ಕನ್ನಡ ಚಿತ್ರರಂಗದಲ್ಲಿ ಉತ್ತಮ ಅಭಿನಯದ ಮೂಲಕ ತಮ್ಮದೇ ಛಾಪು ಮೂಡಿಸಿರುವ ಧನಂಜಯ್, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹಾಗಂತ ಅವರು, ತನ್ನ ಖ್ಯಾತಿ, ಜನಪ್ರಿಯತೆಗೆ ತಕ್ಕಂತೆ ಆಡಂಬರ ಪ್ರದರ್ಶನ ಮಾಡುತ್ತಿಲ್ಲ. ಎಲ್ಲಾ ಕ್ಷೇತ್ರದವರನ್ನು ಮದುವೆಗೆ ಆಹ್ವಾನಿಸುವುದರ ಜೊತೆಗೆ ತಮ್ಮ ಮದುವೆಯ ಸಂದರ್ಭವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮಾದರಿ ಆಗುವ ಕೆಲಸ ಮಾಡುತ್ತಿದ್ದಾರೆ.

ಅದೇನೆಂದರೆ ತಮ್ಮೂರಿನಲ್ಲಿರುವ ಒಂದರಿಂದ ಏಳನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಶಾಲೆಯಲ್ಲಿ ಹಾಲಿ 86 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಮ್ಮ ಮದುವೆಯನ್ನು ಅರ್ಥಪೂರ್ಣಗೊಳಿಸಲು ಇಡೀ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಸರ್ಕಾರಿ ಶಾಲೆ ಉಳಿಸಲು ಮುಂದಾಗಿದ್ದಾರೆ. ಇಡೀ ಶಾಲೆಯ ನೆಲಕ್ಕೆ ಟೈಲ್ಸ್, ಬಣ್ಣ ಮಾಸಿದ ಶಾಲೆಯ ಗೋಡೆಗಳಿಗೆ ಬಣ್ಣ, ಮಹಡಿಗೆ ಚುರಕಿ, ಗೇಟ್ ದುರಸ್ತಿ, ಶಿಕ್ಷಕರ ಕೊಠಡಿಗೆ ಹೊಸ ರೂಪ, ಶೌಚಾಲಯ ದುರಸ್ತಿ, ವಿದ್ಯುತ್ ಸಂಪರ್ಕ, ಅಚ್ಚುಕಟ್ಟು ಅಡುಗೆ ಮನೆ ಹೀಗೆ ತನ್ನೂರಿನ ಶಾಲೆಗೆ ಬೇಕಾದ ಎಲ್ಲಾ ಸೌಲಭ್ಯ ಒದಗಿಸಿ ಹೈಟೆಕ್ ಸ್ಪರ್ಶ ನೀಡುತ್ತಿದ್ದಾರೆ. ತಾವು ಹುಟ್ಟಿದ ಊರಿನ ಶಾಲೆಯಲ್ಲಿ ಓದದೇ ಇದ್ದರೂ, ಅದಕ್ಕೀಗ ಹೊಸತನ ಕೊಡಲು ಮುಂದಾಗಿರುವ ಧನಂಜಯ ಅವರ ಪ್ರಯತ್ನಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಇದಲ್ಲದೆ ಶಾಲೆಗೆ ಓವರ್‌ಹೆಡ್ ಟ್ಯಾಂಕ್, ವಾಟರ್ ಫಿಲ್ಟರ್, ಕಾಂಪೌಂಡ್ ದುರಸ್ತಿ, ಶಾಲಾ ಕಟ್ಟಡಕ್ಕೆ ಹೊಸ ಕಿಟಕಿಗಳು, ಕುರ್ಚಿ, ಮೇಜನ್ನೂ ಸಹ ಬದಲಾವಣೆ ಮಾಡಿಸುತ್ತಿದ್ದಾರೆ. ಇದಕ್ಕಾಗಿ 6ರಿಂದ 8 ಲಕ್ಷ ರು. ವೆಚ್ಚ ಆಗಲಿದೆ. ಆ ಬಗ್ಗೆ ಡಾಲಿ ತಲೆ ಕೆಡಿಸಿಕೊಂಡಿಲ್ಲ. ಎಷ್ಟಾದರೂ ಖರ್ಚಾಗಲಿ, ನಮ್ಮೂರ ಶಾಲೆ ಉಳಿಯಬೇಕು. ಆ ಮೂಲಕ ಮಕ್ಕಳ ಹಾಜರಾತಿ ಹೆಚ್ಚಳವಾಗಿ ಸರ್ಕಾರಿ ಶಾಲೆಯೂ ಖಾಸಗಿ ಶಾಲೆಯಂತಾಗಬೇಕು ಎಂಬ ಸದಾಶಯ ಹೊಂದಿದ್ದಾರೆ.

ಧನಂಜಯ್ ಅವರ ಮದುವೆ ಚಿತ್ರದುರ್ಗ ಮೂಲದ ಹೆಸರಾಂತ ವೈದ್ಯೆ ಜೊತೆ ಮುಂದಿನ ತಿಂಗಳು 15 ಮತ್ತು 16ರಂದು ಮೈಸೂರಿನಲ್ಲಿ ನಡೆಯಲಿದ್ದು, ಅದನ್ನು ಅರ್ಥಪೂರ್ಣ, ಸಾರ್ಥಕಗೊಳಿಸಲು ಸುಮಾರು 200ಕ್ಕೂ ಹೆಚ್ಚು ಮನೆಗಳಿರುವ ಸ್ವಗ್ರಾಮದಲ್ಲಿರುವ ಶಾಲೆಗೆ ಬೇಕಾದ ಎಲ್ಲ ಸೌಲಭ್ಯ ನೀಡುತ್ತಿದ್ದಾರೆ. ಧನಂಜಯ್ ಅವರ ಈ ಹೆಜ್ಜೆ ಪ್ರತಿಯೊಬ್ಬರಿಗೂ ಮಾದರಿ ಎನಿಸಿದೆ.